ನರೇಂದ್ರ ಮೋದಿ ಮೊದಲ ಅವಧಿಗೆ ಪ್ರಧಾನಿಯಾದ ಬೆನ್ನಲ್ಲೇ ದೇಶದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿತ್ತು. ನಿತಿನ್ ಗಡ್ಕರಿ ಸಾರಿಗೆ ಸಚಿವಾಲಯದ ಸಾರಥ್ಯ ವಹಿಸಿಕೊಂಡ ನಂತ್ರ ಪರಿಸರ ಸ್ನೇಹಿ ಮತ್ತು ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳು ಜಾರಿಗೊಂಡಿತ್ತು.
ಅದರಲ್ಲೂ ಹಲವಾರು ವರ್ಷಗಳಿಂದ ಸಾರಿಗೆ ಸಚಿವಾಲಯದಲ್ಲಿ ಕೊಳೆಯುತ್ತ ಬಿದ್ದಿದ್ದ ಯೋಜನೆಗಳು ವೇಗ ಪಡೆದುಕೊಂಡಿತ್ತು. ಅದರಲ್ಲಿ ಪ್ರಮುಖವಾಗಿದ್ದು ಎಲೆಕ್ಟ್ರಿಕಲ್ ವಾಹನ ಪರಿಚಯ ಹಾಗೂ ಬಿಎಸ್ ಸ್ಟೇಜ್ ಗಳ ಜಾರಿ.
ಈಗಾಗಲೇ ಏಪ್ರಿಲ್ 2020ರ ನಂತರ ಮಾರಾಟವಾಗುವ ಎಲ್ಲಾ ವಾಹನಗಳು ಬಿಎಸ್ 6 ಎಂಜಿನ್ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಹಿಂದೆ ಮಾಡಿದರಾಯ್ತು ಬಿಡು ಎಂದು ಆಮೆ ನಡಿಗೆಯಲ್ಲಿದ್ದ ವಾಹನ ತಯಾರಕ ಸಂಸ್ಥೆಗಳು ಎದ್ದೆವೋ ಬಿದ್ದೆವೋ ಎಂದು ಬಿಎಸ್ 6 ಎಂಜಿನ್ ಹೊಂದಿರುವ ವಾಹನ ತಯಾರಿಕೆಗೆ ತೊಡಗಿದೆ.
ಈ ಹಿನ್ನಲೆಯಲ್ಲಿ ಹೀರೋ ಮೋಟೊಕಾರ್ಪ್ ಸಂಸ್ಥೆ ತಮ್ಮ ಜನಪ್ರಿಯ ಉತ್ಪನ್ನ ಹೀರೋ ಸ್ಪ್ಲೆಂಡರ್ ಗೆ ಬಿಎಸ್6 ಎಂಜಿನ್ ಅಳವಡಿಸಿ ದೇಶದಲ್ಲಿ ಬಿಎಸ್-6 ಎಂಜಿನ್ ಪಡೆದ ಮೊದಲ ದ್ವಿಚಕ್ರ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದಕ್ಕೆ ಸ್ಪರ್ಧೆಯೊಡ್ಡಿದ್ದ ಹೋಂಡಾ ಟೂ ವ್ಹೀಲರ್ ಸಂಸ್ಥೆ ಹೀರೋ ಮೋಟೊಕಾರ್ಪ್ ಸಂಸ್ಥೆಗಿಂತಲೂ ಮುಂಚೆಯೇ ಬಿಎಸ್-6 ಎಂಜಿನ್ ಆಧಾರಿತ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿತ್ತು.
ಇಂದು ಹೋಂಡಾ ಟೂ ವ್ಹೀಲರ್ ಸಂಸ್ಥೆಯು ತನ್ನ ಮೊದಲ ಬಿಎಸ್-6 ಎಂಜಿನ್ ಆಧಾರಿತ ಸ್ಕೂಟರ್ ಅನ್ನು ಪರಿಚಯಿಸಿದ್ದು,ಹೋಂಡಾ ಆಕ್ಟೀವಾ 125 ಸಂಸ್ಥೆಯಲ್ಲಿನ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ಸ್ಕೂಟರ್ ಆಗಿರಲಿದೆ.
ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125 ಸ್ಕೂಟರ್ನಲ್ಲಿ ಈ ಬಾರಿ ಇಂಧನವನ್ನು ಉಳಿಸಲು ಹೊಸ ಪದ್ದತಿಯನ್ನು ಅಳವಡಿಸಲಾಗಿದ್ದು, ಗ್ರಾಹಕರನ್ನು ಸೆಳೆಯಲು ಹಲವಾರು ಗುರುತರ ಬದಲಾವಣೆಗಳನ್ನು ಮಾಡಿದೆ.
ಆದರೆ ಈ ಸ್ಕೂಟರ್ ಯಾವಾಗ ಮಾರುಕಟ್ಟೆ ಪ್ರವೇಶಿಸಲಿದೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.
Discussion about this post