ಕೊರೋನಾ ಆತಂಕದ ನಡುವೆಯೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಎಲ್ಲಾ ಸ್ಪರ್ಧಿಗಳನ್ನು ಇದೀಗ ಬಿಗ್ ಬಾಸ್ ಮನೆಯಲ್ಲಿ ಕೂಡಿ ಹಾಕಲಾಗಿದ್ದು, ಸೋಮವಾರದಿಂದ ಅಸಲಿ ಆಟ ಪ್ರಾರಂಭವಾಗಲಿದೆ.
ಮೊದಲ ತಬ್ಬಿ ಸಂಭ್ರಮಿಸಿದ ಮಂದಿ ನಾಳೆಯಿಂದ ಕತ್ತಿ ಮಸೆಯಲಾರಂಭಿಸುತ್ತಾರೆ.
ಅವನು ಗೊತ್ತು ಇವನು ಗೊತ್ತು ಅಂದವರೆಲ್ಲಾ ನಾಳೆಯಿಂದ ಕಾಲೆಳೆಯುವುದು ಹೇಗೆ ಅನ್ನುವ ಕುರಿತಂತೆ ರಣತಂತ್ರ ರೂಪಿಸಲಿದ್ದಾರೆ.
ಈ ನಡುವೆ ಈ ಬಾರಿ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಕಲರ್ಸ್ ಕನ್ನಡ ಎಡವಿದ್ದಂತೆ ಕಾಣಿಸುತ್ತಿದೆ. ಟ್ರೋಲ್ ಪೇಜ್ ಗಳಿಗೆ ಆಹಾರ ಒದಗಿಸುವ ಸಲುವಾಗಿಯೇ ಸೋಷಿಯಲ್ ಮೀಡಿಯಾ ಸ್ಟಾರ್ ಗಳ ಮೇಲೆ ಹೆಚ್ಚು ಫೋಕಸ್ ಮಾಡಲಾಗಿದೆ.
ಇನ್ನುಳಿದಂತೆ ಈ ಬಾರಿ ತುಳು ಮಾತನಾಡುವ ಮೂರು ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿಕೊಡಲಾಗಿದೆ.
ಈ ಪೈಕಿ ಇಬ್ಬರು ಕರಾವಳಿಯವರೇ ಆದರೆ ಮತ್ತೊಬ್ಬರು ಮಲೆನಾಡು ಮೂಲದವರು.
ಶುಭ ಪೂಂಜಾ ಹುಟ್ಟಿ ಬೆಳೆದದ್ದು ಕರಾವಳಿಯಲ್ಲೇ ಹೀಗಾಗಿ ಅವರ ಮಾತೃ ಭಾಷೆ ತುಳುವೇ. ಬಿಗ್ ಬಾಸ್ ವೇದಿಕೆಯಿಂದ ಬಿಗ್ ಬಾಸ್ ಮನೆ ಪ್ರವೇಶಿಸುವ ಸಂದರ್ಭದಲ್ಲಿ ತಮ್ಮ ಪೋಷಕರೊಂದಿಗೆ ತುಳುವಿನಲ್ಲೇ ಮಾತನಾಡಿದ್ದಾರೆ.
ಮತ್ತೊಬ್ಬರು ಉಡುಪಿ ಕಡಿಯಾಳಿಯ ಅರವಿಂದ್ ಕೆಪಿ. ಇವರದ್ದು ಮಾತೃ ಭಾಷೆ ತುಳುವಲ್ಲದಿದ್ದರೂ ದಕ್ಷಿಣ ಕನ್ನಡಕ್ಕೆ ಅಂಟಿಕೊಂಡ ಜಿಲ್ಲೆಯಿಂದ ಬಂದ ಕಾರಣದಿಂದ ಇವರು ಕೂಡಾ ತುಳುವಿನಲ್ಲೇ ವ್ಯವಹರಿಸಬಲ್ಲರು.
ಇನ್ನು ತುಳು ಮಾತನಾಡಬಲ್ಲ ಮತ್ತೊಬ್ಬ ಸ್ಪರ್ಧಿ ಅಂದ್ರೆ ನಟಿ ದಿವ್ಯಾ ಉರುಡುಗ. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ.
10ನೇ ತರಗತಿಯ ಬಳಿಕ ಮುಂದಿನ ಎಜುಕೇಶನ್ ಸಲುವಾಗಿ ದಿವ್ಯಾ ಬಂದಿದ್ದು ಮಂಗಳೂರಿಗೆ. ಹಲವು ವರ್ಷಗಳ ಕಾಲ ಮಂಗಳೂರಿನಲ್ಲಿದ್ದ ಇವರಿಗೆ ಕರಾವಳಿಯಲ್ಲಿ ಇಂದಿಗೂ ಹಲವಾರು ಗೆಳೆಯರಿದ್ದಾರೆ.
ಈಗ್ಲೂ ಮಂಗಳೂರಿನ ಮೀನೂಟ, ಕಲ್ಲಡ್ಕದ ಟೀ, ಕರಾವಳಿಯ ಐಸ್ ಕ್ರೀಂ ಗಳನ್ನು ನೆನಪಿಸಿಕೊಳ್ಳುವ ದಿವ್ಯಾ ಇದೊಂದು ರೀತಿಯಲ್ಲಿ ನನ್ನ ತವರು ಮನೆ ಅಂದಿದ್ದಾರೆ.
ಈ ಮೂವರಿಗೆ ತುಳುವೇನೋ ಬರುತ್ತದೆ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಅದೆಷ್ಟು ತುಳುವಿನಲ್ಲಿ ಮಾತನಾಡುತ್ತಾರೋ ಗೊತ್ತಿಲ್ಲ.
Discussion about this post