ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆಟೋ ಚಾಲಕನಿಗೆ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ ಅನ್ವಯ 47,500 ರೂಪಾಯಿ ದಂಡ ವಿಧಿಸಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ.
ಸೆ.1 ರಿಂದ ಹೊಸದಾಗಿ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಿಧಿಸಲಾಗಿರುವ ಅತಿ ಗರಿಷ್ಠ ಮೊತ್ತದ ಮೊದಲ ದಂಡ ಇದಾಗಿದೆ.
ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಭುವನೇಶ್ವರದ ಆಟೋ ಚಾಲಕನನ್ನು ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ವೇಳೆ ಪತ್ತೆ ಹಚ್ಚಿದ್ದಾರೆ. ಈ ವೇಳೆ ಈತನ ಹತ್ತಾರು ನಿಯಮ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿದೆ.
ಹೀಗಾಗಿ ಮದ್ಯ ಸೇವನೆ ಮಾಡಿ ಚಾಲನೆ ಮಾಡಿದ್ದಕ್ಕಾಗಿ 10,000 ರೂಪಾಯಿ, ಪರಿಸರ ಮಾಲಿನ್ಯ ನಿಯಮ ಉಲ್ಲಂಘನೆಗೆ 10,000 ರೂಪಾಯಿ, ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡಿ ಷರತ್ತುಗಳನ್ನು ಉಲ್ಲಂಘಿಸಿದಕ್ಕೆ 5,000 ರೂಪಾಯಿ, ಚಾಲನಾ ಪರವಾನಗಿ ಇಲ್ಲದೇ ಚಾಲನೆ ಮಾಡಿರುವುದಕ್ಕೆ 5,000 ರೂಪಾಯಿ, ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕೆ 2,000 ರೂಪಾಯಿ ದಂಡ ವಿಧಿಸಲಾಗಿದೆ.
ಆದರೆ ಅಧಿಕಾರಿಗಳ ವರ್ತನೆ ವಿರುದ್ಧ ತಿರುಗಿ ಬಿದ್ದಿರುವ ಚಾಲಕ ಕಳ್ಳತನವಾಗುವ ಭಯದಿಂದ ವಾಹನದಲ್ಲಿ ದಾಖಲೆಗಳನ್ನು ಇಟ್ಟಿರಲಿಲ್ಲ. ಮನೆಯಲ್ಲಿ ಎಲ್ಲಾ ದಾಖಲೆಗಳನ್ನೂ ಇಟ್ಟಿದ್ದೇನೆ ಬಿಟ್ಟರೆ ತಂದುಕೊಡುತ್ತೇನೆ ಎಂದಿದ್ದಾನೆ.
ಗುರುಗ್ರಾಮದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಆಟೋ ಚಾಲಕನಿಗೆ 32,500 ರೂಪಾಯಿ ದಂಡ ವಿಧಿಸಿದ್ದ ಪ್ರಕರಣದ ಬೆನ್ನಲ್ಲೇ ಭುವನೇಶ್ವರದಲ್ಲಿ ಈ ಘಟನೆ ನಡೆದಿದೆ.
Discussion about this post