ಬೆಂಗಳೂರು : ಆನ್ ಲೈನ್ ನಲ್ಲಿ ಆಹಾರ ವ್ಯವಸ್ಥೆ ಅನ್ನುವುದು ಅವ್ಯವಸ್ಥೆಯ ಆಗರವಾಗಿದೆ.
ಕಾಸಿನಾಸೆಗೆ ಬಿದ್ದಿರುವ ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆಗಳು ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳದೆ, ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅನೇಕರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಹೀಗೆ ಬೆಂಗಳೂರಿನಲ್ಲಿ Zomato ಸಂಸ್ಥೆಯಲ್ಲಿ ಊಟ ಆರ್ಡರ್ ಮಾಡಿದ ಕರ್ಮಕ್ಕೆ ಮಹಿಳೆಯೊಬ್ಬರು ಇದೀಗ ಆಸ್ಪತ್ರೆ ಸೇರುವಂತಾಗಿದೆ.
ಘಟನೆಯ ವಿವರ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿರುವ ಹಿತೇಶ್ ಚಂದ್ರಾಣಿ ಅನ್ನುವವರು Zomato ಮೂಲಕ ಮಧ್ಯಾಹ್ನದ ಊಟ ಆರ್ಡರ್ ಮಾಡಿದ್ದಾರೆ.
3.30ಕ್ಕೆ ಊಟ ಆರ್ಡರ್ ಮಾಡಿದ್ರೆ, ಅರ್ಧ ಗಂಟೆಯಲ್ಲಿ ಫುಡ್ ನಿಮ್ಮ ಮನೆ ಬಾಗಿಲಿಗೆ ಎಂದು ಸಂಸ್ಥೆ ಭರವಸೆ ಕೊಟ್ಟಿತ್ತು. ಆದರೆ ಸಂಸ್ಥೆ ಕೊಟ್ಟ ಭರವಸೆಗೆ ಬದ್ಧವಾಗಿರಲಿಲ್ಲ.
ಹೀಗಾಗಿ ಬೇಸರಗೊಂಡ ಹಿತೇಶ್ ಚಂದ್ರಾಣಿ ಫುಡ್ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ.
ಆದರೆ 4.30ರ ಹೊತ್ತಿಗೆ ಮನೆಗೆ ಬಂದ Zomato ಡೆಲಿವರಿ ಬಾಯ್ ಕಾಮರಾಜ್, ಫುಡ್ ತೆಗೆದುಕೊಳ್ಳುವಂತೆ ಹೇಳಿದ್ದಾನೆ.
ನಾನು ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ ಅಂದ್ರೆ ಕೇಳಲಿಲ್ಲ, ಬದಲಿಗೆ ರೊಚ್ಚಿಗೆದ್ದು ಮನೆಗೆ ನುಗ್ಗಿ ಟೇಬಲ್ ಮೇಲೆ ಪಾರ್ಸೆಲ್ ಇಟ್ಟು, ನಾನು ನಿಮ್ಮ ಮನೆಗೆ ಗುಲಾಮನಲ್ಲ ಅಂದಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಬಳಿಕ ಚಂದ್ರಾಣಿ ಮುಖಕ್ಕೆ ಬಲವಾಗಿ ಹೊಡೆದ ಕಾಮ್ ರಾಜ್ ಅಲ್ಲಿಂದ ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾದ ಮಹಿಳೆ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮಗಾದ ಅನ್ಯಾಯ ಕುರಿತಂತೆ ಬರೆದುಕೊಂಡಿದ್ದಾರೆ. ಜೊತೆಗೆ ರಕ್ತ ಸೋರುತ್ತಿರುವ ವಿಡಿಯೋ ಕೂಡಾ ಪೋಸ್ಟ್ ಮಾಡಿದ್ದಾರೆ.

ವಿಷಯ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಡೆಲಿವರಿ ಬಾಯ್ ನನ್ನು ಬಂಧಿಸಿದ್ದಾರೆ,
ಇನ್ನು ಘಟನೆ ಕುರಿತಂತೆ ಕ್ಷಮೆ ಕೇಳಿರುವ Zomato ಸಂಸ್ಥೆ ಮಹಿಳೆಯ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದೆ.
ಮತ್ತೊಂದು ಕಡೆ ಫುಡ್ ಆರ್ಡರ್ ಮಾಡಿದ ಕಾರಣದಿಂದ ಡೆಲಿವರಿ ಹುಡುಗರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಕೋಪದಿಂದ ಹೊಡೆದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ಈ ಸುದ್ದಿಯನ್ನು ಗಮನಿಸಬೇಕಾದ ಅಂಶ ಅಂದ್ರೆ, ಡೆಲಿವರಿ ಹುಡುಗರು ಅನುಭವಿಸುವ ಒತ್ತಡ. ಫುಡ್ ಆರ್ಡರ್ ಬಂದ ತಕ್ಷಣ ಸಂಬಂಧಪಟ್ಟ ಹೊಟೇಲ್ ಗೆ ಹೋದ್ರೆ, ಅಲ್ಲಿ ಕಾಯಬೇಕಾದ ಅನಿವಾರ್ಯತೆ. ಜೊತೆಗೆ ಕೆಲ ಹೊಟೇಲ್ ಸಿಬ್ಬಂದಿಯೂ ಡೆಲಿವರಿ ಹುಡುಗನ್ನು ತುಂಬಾ ಕೀಳಾಗಿ ನೋಡುತ್ತಾರೆ ಕೂಡಾ.
APP ಗಳಲ್ಲಿ ಈ ಸಮಸ್ಯೆ ಅರಿವಿಲ್ಲದೆ ಫುಡ್ ಡೆಲಿವರಿಗೆ ಡೆಡ್ ಲೈನ್ ವಿಧಿಸಿರುತ್ತದೆ. ಫುಡ್ ತೆಗೆದುಕೊಂಡು ಹೊರಟ್ರೆ ಟ್ರಾಫಿಕ್ ಕಾಟ. ಅಷ್ಟು ಹೊತ್ತಿಗೆ ಡೆಡ್ ಲೈನ್ ಮುಗಿದಿರುತ್ತದೆ.
ಫುಡ್ ಆರ್ಡರ್ ಕ್ಯಾನ್ಸಲ್ ಆದ್ರೆ, ಕೈಯಿಂದ ಕಾಸು ಕೊಡಬೇಕಾದ ದುಸ್ಥಿತಿ ಡೆಲಿವರಿ ಹುಡುಗರದ್ದು.
Discussion about this post