ಬೆಂಗಳೂರು : ಕೊರೋನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಸ್ಥಗಿತಗೊಂಡಿತ್ತು. ಪೊಲೀಸರು ಸ್ಪೆಷಲ್ ಡ್ರೈವ್ ಕೈ ಬಿಟ್ಟ ಕಾರಣದಿಂದ ಎಣ್ಣೆ ಪ್ರಿಯರು ಬಿಂದಾಸ್ ಆಗಿ ರಾತ್ರಿ ಹೊತ್ತು ರಸ್ತೆಗಿಳಿದಿದ್ದರು. ಮಾತ್ರವಲ್ಲದೆ ಅನೇಕ ಅಮಾಯಕರ ಜೀವವನ್ನು ಬಲಿ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ಹೆಚ್ಚುತ್ತಿರುವುದನ್ನು ಗಮನಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಮತ್ತೆ ಸ್ಪೆಷಲ್ ಡ್ರೈವ್ ಪ್ರಾರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಲೈಟಾಗಿ ನಡೆಯುತ್ತಿದ್ದ ತಪಾಸಣೆ ವಿಕೇಂಡ್ ಆಗಿರುವ ಇಂದಿನಿಂದ ಚುರುಕು ಪಡೆದುಕೊಂಡಿದೆ.
ಬೆಂಗಳೂರಿನ ಪ್ರತಿಯೊಂದು ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ಈ ಸಂಬಂಧ ರಸ್ತೆಗಿಳಿದಿದ್ದು, ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ. ಜೊತೆಗೆ ಮದ್ಯಪಾನ ಮಾಡಿದ್ದಾರೆ ಅನ್ನುವ ಅನುಮಾನ ಬಂದವರಿಗೆ ಸ್ಟ್ರಾ ಊದುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಈ ಸಂಬಂಧ ಸಂಚಾರಿ ವಿಭಾಗದ ಪೊಲೀಸ್ ಆಯುಕ್ತ ರವಿಕಾಂತೇಗೌಡ ನಿಯಮಗಳನ್ನು ಬಿಡುಗಡೆ ಮಾಡಿದ್ದು,ಕುಡಿದು ವಾಹನ ಚಾಲನೆ ಮಾಡುತ್ತಿದ್ದಾರೆ ಎಂದು ಅನುಮಾನ ಬಂದವರನ್ನು ಮಾತ್ರ ಪ್ರತ್ಯೇಕ ಸ್ಟ್ರಾ ಬಳಿಸಿ ತಪಾಸಣೆ ಮಾಡಬೇಕು. ಮದ್ಯಪಾನ ಮಾಡಿರುವುದು ಕಂಡು ಬಂದಲ್ಲಿ ಮಾತ್ರ ಆಲ್ಕೋ ಮೀಟರ್ ಬಳಕೆ ಮಾಡಬೇಕು. ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯ ಸಿಬ್ಬಂದಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಕಡ್ಡಾಯವಾಗಿ ಧರಿಸಬೇಕು. ಪ್ರತಿ ತಪಾಸಣೆ ನಂತರ ಹ್ಯಾಂಡ್ ಸಾನಿಟೈಸ್ ಮಾಡಬೇಕು.
ಡ್ರಿಂಕ್ ಅಂಡ್ ಡ್ರೈವ್ ಗೆ ಬಳಸಿದ ಆಲ್ಕೋ ಮೀಟರ್ ಮತ್ತೆ ಮೂರು ದಿನ ಉಪಯೋಗಿಸಬಾರದು. ಸ್ಯಾನಿಟೈಸ್ ಆದ ಆಲ್ಕೋಮೀಟರ್ ನ್ನು ಜಿಪ್ ಲಾಕ್ ಕವರ್ ನಲ್ಲಿಟ್ಟು ಪ್ರತ್ಯೇಕವಾಗಿಡಬೇಕು. ಆಲ್ಕೋ ಮೀಟರ್ ತಪಾಸಣೆಗೆ ನಿರಾಕರಿಸುವ ವಾಹನ ಸವಾರರನ್ನು ಮೆಡಿಕಲ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು ಮದ್ಯಪಾನ ಮಾಡಿರುವುದು ಆಲ್ಕೋ ಮೀಟರ್ ನಲ್ಲಿ ಪತ್ತೆಯಾದರೆ, ವಾಹನವನ್ನು ಪೊಲೀಸರ ಬಳಿಯೇ ಬಿಟ್ಟು ಮನೆ ಸೇರಬಹುದು. ನಂತರ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಬಹುದಾಗಿದ್ದು, ದಂಡದ ಮೊತ್ತ 10 ಸಾವಿರವಾಗಿರುತ್ತದೆ. ಒಂದು ವೇಳೆ ಎರಡನೇ ಸಲ ಡ್ರಿಂಕ್ಸ್ ಡ್ರೈವ್ ಪ್ರಕರಣವಾಗಿದ್ದಾರೆ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳ್ಳಲಿದೆ.
ಇನ್ನು ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆ ಜಗಳ, ಪೊಲೀಸರ ಮೇಲೆ ಹಲ್ಲೆ ಮಾಡಿದರೆ ಉಚಿತವಾಗಿ ರೌಡಿ ಶೀಟರ್ ಖಾತೆ ತೆರೆಯಲಿದ್ದಾರೆ.
Discussion about this post