ಬೆಂಗಳೂರು : ಹೋಟೆಲ್ ನಲ್ಲಿ ಕುಡಿದು ಗಲಾಟೆ ಹಾಗೂ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭೀಮಾ ಜ್ಯುವೆಲ್ಲರ್ ಮಾಲೀಕರ ಪುತ್ರ ವಿಷ್ಣು ಭಟ್ ಎಂಬವರನ್ನು ಬಂಧಿಸಲಾಗಿದೆ. ಈ ವಿಷ್ಣು ಭಟ್ ಭೀಮಾ ಸಂಸ್ಥೆಯ ನಿರ್ದೇಶಕರು ಕೂಡಾ ಹೌದು ಎಂದು ಹೇಳಲಾಗಿದೆ.
ನಗರದ ಹಳೆಯ ವಿಮಾನ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿದ್ದ ಬಿಟ್ ಕಾಯಿನ್ ಮತ್ತು ವೆಬ್ ಸೈಟ್ ಹ್ಯಾಕ್ ಖ್ಯಾತಿಯ ಶ್ರೀಕಿಯನ್ನು ನೋಡಲು ಶನಿವಾರ ಮಧ್ಯಾಹ್ನ ವಿಷ್ಣು ಭಟ್ ಬಂದಿದ್ದಾನೆ. ಈ ವೇಳೆ ಏಕಾಏಕಿ ಹೋಟೆಲ್ ನುಗ್ಗಿರುವುದನ್ನು ಕಂಡ ಮ್ಯಾನೇಜರ್ ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಕೋಪಗೊಂಡ ವಿಷ್ಣು ಭಟ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೊಠಡಿಯಿಂದ ಹೊರಬಂದ ಶ್ರೀಕಿ ಕೂಡಾ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಬಗ್ಗೆ ಹೋಟೆಲ್ ಸಿಬ್ಬಂದಿಯ ದೂರು ಸ್ವೀಕರಿಸಿದ ಪೊಲೀಸರು ಶ್ರೀಕಿ ಮತ್ತು ವಿಷ್ಣು ಭಟ್ಟನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಮಾಧ್ಯಮ ವರದಿಯ ಪ್ರಕಾರ ವಿಷ್ಣು ಭಟ್ ಮದ್ಯ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆಯಂತೆ.
ನಿನ್ನೆ ಶ್ರೀಕಿಯನ್ನು ಬಂಧಿಸಿದಾಗ ಬಿಟ್ ಕಾಯಿನ್ ಸಂಬಂಧ ಶ್ರೀಕಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿತ್ತು, ಆದರೆ ಈಗಿನ ಮಾಹಿತಿಗಳ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ವ್ಯವಹಾರದ ತನಿಖೆಗೂ ಶ್ರೀಕಿ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಅನ್ನಲಾಗಿದೆ.
ಆದರೆ ರಾಜ್ಯದ ಪ್ರತಿಷ್ಟಿತ ಜ್ಯುವೆಲ್ಲರ್ ಶಾಪ್ ಒಂದರ ಮಾಲೀಕರ ಪುತ್ರ, ಸರ್ಕಾರಿ ವೆಬ್ ಸೈಟ್ ಹ್ಯಾಕ್, ವಂಚನೆ, ಬಿಟ್ ಕಾಯಿನ್ ದಂಧೆ, ಡ್ರಗ್ಸ್ ವ್ಯವಹಾರದ ಆರೋಪ ಹೊತ್ತ ಶ್ರೀಕಿಯ ಜೊತೆ ಸಂಬಂಧ ಹೊಂದಿರುವುದು ಇಡೀ ಸಂಸ್ಥೆಯ ವ್ಯವಹಾರದ ಮೇಲೆ ಅನುಮಾನ ಮೂಡಿಸಿದೆ.
ಈ ಹಿಂದೆ ಶ್ರೀಕಿಯನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
Discussion about this post