ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಕಾಮಕೇಳಿ ಸೀಡಿ ಪ್ರಕರಣದ ರೂವಾರಿಗಳು ಎನ್ನಲಾದ ನರೇಶ್ ಗೌಡ ಹಾಗೂ ಶ್ರವಣ್ ಗೆ ಬೆಂಗಳೂರಿನ 91ನೇ ಸಿಸಿಹೆಚ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದುರಂತ ಅಂದ್ರೆ ಸಿಡಿ ಪ್ರಕರಣದ ಕುರಿತಂತೆ ತನಿಖೆ ನಡೆಸುವ ಸಲುವಾಗಿ ರಾಜ್ಯ ಸರ್ಕಾರ ಎಸ್ಐಟಿಯನ್ನು ಸ್ಥಾಪಿಸಿತ್ತು. ಎಸ್ಐಟಿಯಲ್ಲಿ ರಫ್ ಅಂಡ್ ಟಫ್ ಅಧಿಕಾರಿಗಳಿದ್ದರು. ಆದರೆ ನರೇಶ್ ಗೌಡ ಮತ್ತು ಶ್ರವಣ್ ರನ್ನ ಬಂಧಿಸಲು ಇವರಿಂದ ಸಾಧ್ಯವಾಗಲೇ ಇಲ್ಲ.
ಇನ್ನು ಇವರಿಬ್ಬರ ಜಾಮೀನು ಅರ್ಜಿ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಿದ್ದ ಎಸ್ಐಟಿ ವಕೀಲರು ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯಂತೆ, ಅವರಿಂದ ಸಿಡಿ ಗ್ಯಾಂಗ್ ಹಣ ವಸೂಲಿ ಮಾಡಿದೆ. ರಮೇಶ್ ಜೊತೆ ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಲು ಗ್ಯಾಂಗ್ ಯುವತಿಗೆ ಸೂಚಿಸಿದೆ. ಮೊಬೈಲ್, ವಾಟ್ಸ್ಆ್ಯಪ್, ವಿಡಿಯೋ ಕಾಲ್ ಮೂಲಕವೂ ಸಂಪರ್ಕಿಸಲು ತಿಳಿಸಿದ್ದಾರೆ. ಸುಲಿಗೆ, ಬ್ಲಾಕ್ಮೇಲ್ ಉದ್ದೇಶದಿಂದಲೇ ಲೈಂಗಿಕ ಸಂಪರ್ಕವೂ ನಡೆದಿದೆ. ಸಿಡಿ ಗ್ಯಾಂಗ್ ಸದಸ್ಯರು ಹನಿಟ್ರ್ಯಾಪ್ ಮಾಡಿ ಹಲವು ಬಾರಿ ಹಣ ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ಮಾಜಿ ಶಾಸಕ ಎಂ.ವಿ ನಾಗರಾಜ್ ಕೂಡ ಹೇಳಿಕೆ ನೀಡಿದ್ದಾರೆ. ಹೀಗಾಗಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಶ್ರವಣ್ ಹಾಗೂ ನರೇಶ್ ಗೌಡಗೆ ನಿರೀಕ್ಷಣಾ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯಾಗಲಿದೆ ಎಂದು ವಾದಿಸಿತ್ತು.
ಆರೋಪಿಗಳು ತಲೆಮರೆಸಿಕೊಂಡಿರುವುದರಿಂದ ತನಿಖೆ ವಿಳಂಬವಾಗಿದೆ. ಸಿಡಿ ಬಹಿರಂಗವಾದ ದಿನವೇ ಯುವತಿ, ಆರೋಪಿಗಳ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ನಡೆದಿದೆ. ಸಿಡಿ ಪ್ರಕರಣ ಬಹಿರಂಗವಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿದ್ದಾರೆ. ನಂತರ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಗೋವಾಗೆ ಕಳುಹಿಸಿದ್ದಾರೆ. ಯುವತಿ ಹಾಗೂ ಆರೋಪಿಗಳಿಗೆ ಮೊದಲಿಂದಲೂ ಲಿಂಕ್ ಇರುವುದು ಖಚಿತವಾಗಿದೆ. ಯುವತಿ ಮನೆಯಲ್ಲಿ 9.20 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ ಹೀಗಾಗಿ ಜಾಮೀನು ನೀಡಬೇಡಿ ಎಂದು ಮನವಿ ಮಾಡಿತ್ತು. ಆದರೆ ಎಸ್ಐಟಿ ಪರ ವಕೀಲರ ವಾದಕ್ಕೆ ಕೋರ್ಟ್ ಮನ್ನಣೆ ನೀಡಲಿಲ್ಲ.
Discussion about this post