ಕೆಲ ದಿನಗಳ ನಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸಂಸ್ಕೃತ ಮಾತನಾಡುತ್ತಿದ್ದ ಕ್ಯಾಬ್ ಡ್ರೈವರ್ ಒಬ್ಬರ ವಿಡಿಯೋವನ್ನು ಶೇರ್ ಮಾಡಿದ್ದೆವು.
ಇದೀಗ ಈ ಕ್ಯಾಬ್ ಡ್ರೈವರ್ ಯಾರು ಅನ್ನುವುದು ಪತ್ತೆಯಾಗಿದೆ.
ಕೆಲ ವಾರಗಳ ಹಿಂದೆ ಆಪ್ ಆಧಾರಿತ ಕ್ಯಾಬ್ ಚಾಲಕ ಮಲ್ಲಪ್ಪ ವಿ ಪಟ್ಟರ್, ಗಿರಿನಗರದ ಸಂಸ್ಕೃತ ಭಾರತಿ ಸಂಘಟನೆಯಿಂದ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡರು. ಪ್ರಯಾಣಿಕರನ್ನು ಕಂಡಿದ್ದೇ ತಡ ಅವರು ಸಂಸ್ಕೃತ ವಿದ್ವಾಂಸ ಎಂಬುದು ಗೊತ್ತಾಯಿತು. ಮಲ್ಲಪ್ಪ ಸಂಸ್ಕೃತದಲ್ಲಿಯೇ ಅವರ ಜೊತೆ ಮಾತನಾಡಲು ಆರಂಭಿಸಿದರು. ಅವರಿಗೋ ಅಚ್ಚರಿಯಾಯಿತು.
ಸಂಸ್ಕೃತ ಭಾಷೆ ಕಲಿಸುವ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಕ್ಷರಮ್ ನಿಂದ ಬಂದಿದ್ದರಿಂದ ಅವರಿಗೆ ಸಂಸ್ಕೃತ ಗೊತ್ತಿದೆ ಎಂದು ನನಗೆ ಅರ್ಥವಾಯಿತು. ಹೀಗಾಗಿ ಸಂಸ್ಕೃತದಲ್ಲಿ ನಮಸ್ತೆ ಎಂದೆ. ಅದಕ್ಕೆ ಅವರು ಖುಷಿಗೊಂಡು ಸಂಸ್ಕೃತದಲ್ಲಿಯೇ ಮಾತನಾಡಲಾರಂಭಿಸಿದರು, ಅವರು ಕ್ಯಾಬ್ ನಿಂದ ಇಳಿಯುವವರೆಗೆ ಸಂಸ್ಕೃತದಲ್ಲಿಯೇ ನಾವು ಮಾತನಾಡಿದೆವು ಎಂದರು ಮಲ್ಲಪ್ಪ.
ತಮ್ಮ ತಾತ ಭಗವದ್ಗೀತೆ ಓದುವಾಗ ಮಲ್ಲಪ್ಪಕ್ಕೆ 10 ವರ್ಷ ವಯಸ್ಸು. ಅದು ಸಂಸ್ಕೃತದಲ್ಲಿದ್ದರೂ ಅದರ ಅಕ್ಷರ ಕನ್ನಡದಲ್ಲಿತ್ತು. ನನಗೆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಆ ಭಾಷೆ ಕಲಿಯಬೇಕೆಂಬ ಆಸೆ ನನ್ನಲ್ಲಿ ಅದಮ್ಯವಾಗಿತ್ತು ಎನ್ನುತ್ತಾರೆ ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಸಣ್ಣ ಹಳ್ಳಿಯವರಾದ ಮಲ್ಲಪ್ಪ 12 ವರ್ಷದ ಬಾಲಕನಿದ್ದಾಗಲೇ ಬೆಂಗಳೂರಿಗೆ ಬಂದಿದ್ದರು.
ಅಲ್ಲಿ ಬ್ರಹ್ಮೋವಿದ್ಯ ಆಶ್ರಮಕ್ಕೆ ಸೇರಿದರು. ಕೃಷಿಕ ಕುಟುಂಬದವರಾದ ಮಲ್ಲಪ್ಪನವರ ಮನೆಯಲ್ಲಿ ಯಾರಿಗೂ ಸಂಸ್ಕೃತ ಗೊತ್ತಿಲ್ಲ. ಆದರೆ ತಾತನವರಿಂದ ಕಲಿಯಲು ಆರಂಭಿಸಿದೆ. 16ನೇ ವಯಸ್ಸಿಗೆ ಸಂಸ್ಕೃತ ಕಲಿತುಕೊಂಡುಬಿಟ್ಟರು. ನಂತರ ಸಂಸ್ಕೃತದಲ್ಲಿ ವಿದ್ವತ್ ಕಲಿತು ಎಂ ಎ ಸ್ನಾತಕೋತ್ತರವನ್ನು ಮಾಡಿಕೊಂಡಿದ್ದಾರೆ.
ಎಂ ಎ ಮುಗಿದದ್ದೇ ತಡ ಶಾಲೆಯಲ್ಲಿ ಸಂಸ್ಕೃತ ಬೋಧಕರಾಗಿ ಸೇರಿಕೊಂಡರು. ಬೇಸಿಗೆ ರಜೆಯಲ್ಲಿ ಮಲ್ಲಪ್ಪನವರು ಆಸಕ್ತ ಮಕ್ಕಳಿಗೆ 10 ದಿನಗಳ ಸಂಸ್ಕೃತ ತರಗತಿ ಮಾಡುತ್ತಿದ್ದರು. ಮಕ್ಕಳು ಯಾವುದೇ ಹೊಸ ಭಾಷೆಗಳನ್ನು ಬೇಗನೆ ಕಲಿಯುತ್ತಾರೆ. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಮಾತೃಭಾಷೆ. ಅದನ್ನು ಕಲಿಯಲು ಸುಲಭ ಎನ್ನುವ ಮಲ್ಲಪ್ಪನವರಿಗೆ ತಬಲಾ, ಹಾರ್ಮೊನಿಯಂ, ಕೀಬೋರ್ಡ್ ಮತ್ತು ಶಾಸ್ತ್ರೀಯ ಸಂಗೀತಗಳು ಗೊತ್ತಿದೆ.
ಇದೀಗ ಮಲ್ಲಪ್ಪನವರು ವೆಂಕಟ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸಂಸ್ಕೃತ ಹೇಳಿಕೊಡುತ್ತಾರೆ. ಅಲ್ಲಿ ಅವರಿಗೆ ಶಾಲೆಯ ಪ್ರಾಂಶುಪಾಲೆ ಸುಲೋಚನಾ ಬಾಲಕೃಷ್ಣ ಅವರ ಪ್ರೋತ್ಸಾಹ ಸಿಕ್ಕಿದೆ. 3ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸಂಸ್ಕೃತ ಭಾಷೆ ಹೇಳಿಕೊಡುವ ಮಲ್ಲಪ್ಪ ಬೇಸಿಗೆ, ದಸರಾ ಮತ್ತು ಇತರ ಸರ್ಕಾರಿ ರಜೆಗಳ ದಿನಗಳಲ್ಲಿ ಕ್ಯಾಬ್ ಚಾಲಕರಾಗಿ ಸೇವೆ ಸಲ್ಲಿಸುತ್ತಾರೆ.
Discussion about this post