ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಡಾ.ರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಶಾಸಕ ಹ್ಯಾರಿಸ್ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ತಮ್ಮದೇ ಕ್ಷೇತ್ರದ ನೀಲಸಂದ್ರ ವಾರ್ಡಿನಲ್ಲಿರುವ ಲಕ್ಷ್ಮಣರಾವ್ ನಗರದ ವೃತ್ತದ ಹೆಸರನ್ನು ಎನ್.ಎ. ಹ್ಯಾರಿಸ್ ಎಂದು ಬದಲಾಯಿಸಲಾಗಿದೆ. ಜೊತೆಗೆ ಪ್ರತಿಮೆ ಇಡಲು ಸೂಕ್ತವಾದ ಜಾಗ ನಿರ್ಮಿಸಿ ಅದಕ್ಕೆ ಭಾವಚಿತ್ರವನ್ನು ಕೂಡಾ ಅಳವಡಿಸಲಾಗಿದೆ.
ಇವೆಲ್ಲವೂ ಒಂದು ವರ್ಷದ ಹಿಂದೆ ನಡೆದ ಕಾರ್ಯ. ಹ್ಯಾರಿಸ್ ಅವರ ಬೆಂಬಲಿಗರು 2020 ಮಾರ್ಚ್ 8 ರಂದು ಲಕ್ಷ್ಮಣರಾವ್ ವೃತ್ತಕ್ಕೆ ಎನ್.ಎ. ಹ್ಯಾರಿಸ್ ವೃತ್ತ ಎಂದು ನಾಮಕರಣ ಮಾಡಿದ್ದರು.
ವಿಚಿತ್ರ ಅಂದ್ರೆ ತಮ್ಮ ಹೆಸರಿನ ವೃತ್ತವನ್ನು ತಾವೇ ಉದ್ಘಾಟಿಸಿದ್ದರು. ಸಾಕ್ಷಿ ಅನ್ನುವಂತೆ ಭಾವಚಿತ್ರದ ಕೆಳ ಭಾಗದಲ್ಲಿ ಎನ್ ಎ ಹ್ಯಾರಿಸ್ ಸರ್ಕಲ್, ಎನ್.ಎ. ಹ್ಯಾರಿಸ್ ಅವರಿಂದ ಉದ್ಘಾಟನೆ ಎಂದು ಬರೆಸಲಾಗಿದೆ.
ಯಾವಾಗ ರಾಜ್ ಕುಮಾರ್ ಬಗೆಗಿನ ಮಾತುಗಳು ವೈರಲ್ ಆಯ್ತೋ, ಇದರ ಬೆನ್ನಲ್ಲೇ ಹ್ಯಾರಿಸ್ ಸರ್ಕಲ್ ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಯ್ತು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಹ್ಯಾರಿಸ್, ತಮ್ಮ ಅಭಿಮಾನಿಗಳು, ಅಭಿಮಾನದಿಂದ ಇಟ್ಟಿದ್ದಾರೆ. ಇದು ಅಧಿಕೃತವಲ್ಲ, ಇದಕ್ಕೂ ತಮಗೂ ಸಂಬಂಧವಿಲ್ಲ ಅಂದಿದ್ದಾರೆ.
ಇದಾದ ಬೆನ್ನಲ್ಲೇ ಪಾಲಿಕೆ ಸಿಬ್ಬಂದಿ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ.
ಹ್ಯಾರಿಸ್ ಮಾತುಗಳನ್ನು ಕೇಳಿದ್ರೆ ಅಭಿಮಾನಗಳು ಅಭಿಮಾನಕ್ಕೆ ಏನು ಬೇಕಾದರೂ ಮಾಡಬಹುದು, ಕಾನೂನು ಬಾಹಿರವಾಗಿಯೂ ನಡೆದುಕೊಳ್ಳಬಹುದು ಅಂದಾಯ್ತು.
ಒಂದು ವೃತ್ತದ ಹೆಸರು ಬದಲಾಯಿಸಬೇಕಾದರೆ ಪಾಲಿಕೆಯಲ್ಲಿ ಚರ್ಚೆಯಾಗಬೇಕು, ಪಾಲಿಕೆ ನಿರ್ಧರಿಸಬೇಕು. ಅದನ್ನು ಬಿಟ್ಟು ಒಬ್ಬ ಶಾಸಕರ ಅಭಿಮಾನಿಗಳು ನಿರ್ಧರಿಸುವುದಲ್ಲ. ಅಷ್ಟೊಂದು ಅಭಿಮಾನವಿರುವುದಾದ್ರೆ ಅಭಿಮಾನಿಗಳು ತಮ್ಮ ಮನೆಗಳಿಗೆ ಹ್ಯಾರಿಸ್ ನಿಲಯ ಎಂದು ಇಟ್ಟುಕೊಳ್ಳಲಿ.
Discussion about this post