ದೆಹಲಿ, ಗುರ್ಗಾಂವ್, ನೋಯ್ಡಾ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು ಜನ ಉಸಿರಾಡುವುದಕ್ಕೂ ಕಷ್ಟವಾಗುತ್ತಿದೆ. ಈ ಸ್ಥಿತಿ ಇದೀಗ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಅಂದ್ರೆ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೂ ಸಹ ಮಾಸ್ಕ್ ಧರಿಸುವಂತಾಗಿದೆ.
ದೀಪಾವಳಿ ಆಚರಣೆಯ ಬಳಿಕ ಈ ಭಾಗಗಳಲ್ಲಿ ಶುದ್ಧ ಗಾಳಿಯ ಪ್ರಮಾಣ ಗಂಭೀರ ಮಟ್ಟದಲ್ಲಿ ಇಳಿಮುಖಗೊಂಡಿದೆ. ಇದರ ಪರಿಣಾಮ ಇದೀಗ ದೇವಳಗಳ ನಗರಿ ಎಂದೇ ಹೆಸರುವಾಸಿಯಾಗಿರುವ ವಾರಣಾಸಿಯಲ್ಲಿರುವ ವಿವಿಧ ದೇವತಾ ಮಂದಿರಗಳಿಗೂ ತಟ್ಟಿದ್ದು ಇಲ್ಲಿನ ದೇವತೆಗಳ ವಿಗ್ರಹಗಳಿಗೆ ಮಾಸ್ಕ್ ತೊಡಿಸಲಾಗಿದೆ.
ಇಲ್ಲಿನ ದೇವರ ವಿಗ್ರಹಗಳಿಗೆ ಮಾಸ್ಕ್ ತೊಡಿಸುವ ಮೂಲಕ ಭಕ್ತಾಧಿಗಳು ಇದೀಗ ತಾವು ನಂಬುವ ದೇವರ ಆರೋಗ್ಯ ಕಾಪಾಡಲು ನಿರ್ಧರಿಸಿದ್ದಾರೆ. ಸಿಗ್ರಾದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ಶಿವ, ದುರ್ಗೆ, ಕಾಳಿ ಮತ್ತು ಸಾಯಿ ಬಾಬಾ ವಿಗ್ರಹಗಳ ಮುಖಕ್ಕೆ ಮಾಸ್ಕ್ ತೊಡಿಸಲಾಗಿದೆ.
ದೇವರ ವಿಗ್ರಹಗಳಿಗೆ ಈ ರೀತಿ ಮುಖಗವಸನ್ನು ತೊಡಿಸಿರುವುದನ್ನು ನೋಡಿದ ಭಕ್ತಾದಿಗಳು ತಾವೂ ಮಾಸ್ಕ್ ತೊಟ್ಟುಕೊಳ್ಳಲು ಪ್ರಾರಂಭಿಸಿದ್ದಾರಂತೆ.
‘ನಾವು ನಮ್ಮ ದೇವರನ್ನು ಜೀವಂತ ಶಕ್ತಿಗಳೆಂದೇ ನಂಬುತ್ತೇವೆ. ಕಡುಬೇಸಿಗೆಯ ದಿನಗಳಲ್ಲಿ ನಾವು ಈ ದೇವತಾ ವಿಗ್ರಹಗಳಿಗೆ ಗಂಧವನ್ನು ಲೇಪಿಸುವ ಮೂಲಕ ತಂಪಾಗಿರಿಸುತ್ತೇವೆ ಇನ್ನು ಚಳಿಗಾಲದಲ್ಲಿ ವಿಗ್ರಹಗಳಿಗೆ ಉಣ್ಣೆಯ ಬಟ್ಟೆಗಳನ್ನು ತೊಡಿಸುವ ಮೂಲಕ ನಮ್ಮ ದೇವರನ್ನು ಬೆಚ್ಚಗೆ ಇರಿಸುತ್ತೇವೆ ಹಾಗೆಯೇ ಇದೀಗ ಎಲ್ಲಾ ಕಡೆ ವಾತಾವರಣದಲ್ಲಿ ಗಾಳಿ ಕಲುಷಿತಗೊಂಡಿರುವುದರಿಂದ ದೇವರ ವಿಗ್ರಹಗಳಿಗೂ ಮಾಸ್ಕ್ ತೊಡಿಸಿದ್ದೇವೆ ಇದರಲ್ಲಿ ವಿಶೇಷವೇನೂ ಇಲ್ಲ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಮಿಶ್ರಾ ಹೇಳಿದ್ದಾರೆ.
Discussion about this post