ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಹೇರಳವಾಗಿ ಬರುತ್ತಿವೆ. ಅಂತಹ ಒಂದು ಹೊಸ ನಿರ್ದೇಶಕ, ನಟರ ಚಿತ್ರ ‘ಅಂದವಾದ’ ಟ್ರೈಲರ್ ಸೋಮವಾರ ( ಅಕ್ಟೋಬರ್ 14) ರಂದು ಗುರುಕಿರಣ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಹೊಸ ಭರವಸೆ ಮೂಡಿಸಿದೆ.
ಬಿಡುಗಡೆಯಾದ ಒಂದು ದಿನದಲ್ಲೇ ಚಿತ್ರದ ಟ್ರೈಲರ್ 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಚಿತ್ರದ ನಿರೂಪಣೆ ಬಗ್ಗೆ ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರೈಲರ್ ನಲ್ಲಿ ಏನಿದೆ?
ಚಿತ್ರದ ಟ್ರೈಲರ್ ನ ಪೂರ್ತಿ ನಾಯಕ, ನಾಯಕಿ ಆವರಿಸಿಕೊಂಡಿದ್ದಾರೆ. ಇದರ ಮೂಲಕ ಚಿತ್ರವು ಒಂದು ಸುಂದರ ಪ್ರೇಮ ಕಥನವನ್ನು ಹೇಳುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ. ಸಮುದ್ರದ ತೀರ ಪ್ರದೇಶದಲ್ಲಿ ನಾಯಕ ನಿಂತುಕೊಳ್ಳುವ ಮೂಲಕ ಟ್ರೈಲರ್ ಪ್ರಾರಂಭವಾಗುತ್ತದೆ.
ನಾಯಕ, ನಾಯಕಿಯ ಪ್ರೇಮ ಸನ್ನಿವೇಶ, ತಾಕಲಾಟ, ಮೌನ ಸಂಭಾಷಣೆ ನೋಡುಗರನ್ನು ಸೆಳೆದಿಡುತ್ತದೆ. ನವಿರಾದ ಬಾಲ್ಯದ ಎಳೆಯೂ ಒಂದು ದೃಶ್ಯದಲ್ಲಿ ಕಾಣುತ್ತದೆ. ಒಟ್ಟಾರೆ ಚಿತ್ರವು ಯುವ ಮನಸ್ಸುಗಳಿಗೆ ಮುದ ನೀಡುತ್ತದೆ ಎಂಬುದನ್ನು ಟ್ರೈಲರ್ ಬಿಚ್ಚಿಡುತ್ತದೆ.
ಚಿತ್ರವನ್ನು ಚಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್ ಫ್ರೇಮ್ಸ್ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಕ್ರಮ್ ವರ್ಮನ್ ರಾಗ ಸಂಯೋಜನೆ ಮಾಡಿದ್ದಾರೆ.
ಅಂದವಾದ ಚಿತ್ರದಲ್ಲಿ ಜೈ ನಾಯಕನಾಗಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರ ಅಕ್ಕ ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಈ ಮುನ್ನ ಸೋಡಾಬುಡ್ಡಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.
ಉಳಿದಂತೆ ಶ್ರೀಧರ್, ಹರೀಶ್ ರೈ, ಅಮರ್ ಸಲ್ವಾ ತಾರಾಗಣದಲ್ಲಿದ್ದಾರೆ. ಅಂದವಾದ ಟ್ರೈಲರ್ ಚಿತ್ರದ ಬಗ್ಗೆ ಭರವಸೆ ಮೂಡಿಸಿದೆ. ಚಿತ್ರವು ಇದೇ 25 ರಂದು ತೆರೆಗೆ ಅಪ್ಪಳಿಸಲಿದೆ.
Discussion about this post