ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮವಸ್ತ್ರ ಮಾದರಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.ಬಹು ವರ್ಷಗಳ ಬೇಡಿಕೆಯಂತೆ ಖಾಕಿ ಸೀರೆ ಬದಲು ಪ್ಯಾಂಟು-ಶರ್ಟು ಸಮವಸ್ತ್ರ ಧರಿಸುವ ಪದ್ಧತಿಗೆ ಅನುಮತಿ ಕೊಡಲಾಗಿದೆ.
ಆದೇಶ ಪ್ರಕಾರ,ಮಹಿಳಾ ಅಧಿಕಾರಿಗಳು ಇನ್ನುಮುಂದೆ ಖಾಕಿ ಪ್ಯಾಂಟ್- ಶರ್ಟ್, ಬ್ರೌನ್ ಆಕ್ಸ್ಫರ್ಡ್ ಶೂ, ಬ್ರೌನ್ ಕ್ರಸ್ಟೆಡ್ ಲೆದರ್ ಬೆಲ್ಟ್ ಹಾಗೂ ಪೀಕ್ ಅಥವಾ ಬ್ಲ್ಯೂ ಕ್ಯಾಪ್ ವಿತ್ ಬ್ಯಾಡ್ಜ್ ಧರಿಸಬೇಕು.
ಅದೇ ರೀತಿ ಮಹಿಳಾ ಪೇದೆಗಳಿಗೆ ಬ್ಲ್ಯಾಕ್ ಆಕ್ಸ್ಫರ್ಡ್ ಶೂ ಮತ್ತು ಬ್ಲ್ಯಾಕ್ ಕ್ರಸ್ಟೆಡ್ ಲೆದರ್ ಬೆಲ್ಟ್ ಹಾಗೂ ಬೆರೆಟ್ ಕ್ಯಾಪ್ ವಿತ್ ಬ್ಯಾಡ್ಜ್ ಧರಿಸಲು ಅವಕಾಶ ನೀಡಲಾಗಿದೆ.
ಮೂರು ತಿಂಗಳ ಗರ್ಭಿಣಿ ಅಧಿಕಾರಿ ಮತ್ತು ಸಿಬ್ಬಂದಿಗೆ ಸಮವಸ್ತ್ರ ಧರಿಸುವ ನಿಯಮದಲ್ಲಿ ವಿನಾಯಿತಿ ನೀಡಲಾಗಿದೆ.ಅಗತ್ಯವಿದ್ದಲ್ಲಿ ವೈದ್ಯರ ಪ್ರಮಾಣಪತ್ರ ಸಲ್ಲಿಸಿ, ನಿಯಮದಲ್ಲಿ ಸಡಿಲಿಕೆ ಪಡೆದುಕೊಳ್ಳಬಹುದು.
ಬಳಿಕ ಮಾತೃತ್ವ ರಜೆ ಮೇಲೆ ತೆರಳುವವರೆಗೆ ಬುಷ್ ಶರ್ಟ್ – ಪ್ಯಾಂಟ್ ಸಮವಸ್ತ್ರ ಧರಿಸಬಹುದು. ಕರ್ತವ್ಯಕ್ಕೆ ಮರಳಿದ ಮೇಲೆ ನಿಗದಿತ ಮಾದರಿಯ ಸಮವಸ್ತ್ರವನ್ನೇ ಧರಿಸಬೇಕು ಎಂದು ಸೂಚಿಸಲಾಗಿದೆ.
ಈ ಸಂಬಂಧ ಆಯಾ ಸಿಬ್ಬಂದಿಗೆ ಅನುಕೂಲವಾಗುವಂತೆ ಸಮವಸ್ತ್ರ ಹೊಲಿದು ಕೊಡಲು ಪೊಲೀಸ್ ಕಲ್ಯಾಣ ಕೇಂದ್ರಗಳಿಗೆ ಸೂಚನೆ ಕೊಡುವಂತೆ ಸೂಚಿಸಲಾಗಿದ್ದು, ಅಕ್ಟೋಬರ್ ಅಂತ್ಯದ ಒಳಗೆ ಡಿಜಿಪಿ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ಎಲ್ಲಾ ಘಟಕಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.
ಇದೀಗ ಡಿಜಿಪಿ ನೀಲಮಣಿ ರಾಜು ಈ ಆದೇಶದ ಅನ್ವಯ ಮತ್ತೊಂದು ಆದೇಶ ಹೊರಡಿಸಿದ್ದು, ಇನ್ನು ಒಂದು ವಾರಗಳ ಒಳಗೆ ಎಲ್ಲರೂ ಕಡ್ಡಾಯ ಸಮವಸ್ತ್ರ ನೀತಿಗೆ ಒಳಪಡಬೇಕು. ಮತ್ತು ಸೀರೆಗೆ ಗುಡ್ ಬೈ ಹೇಳಬೇಕು ಎಂದಿದ್ದಾರೆ. ಮಾತ್ರವಲ್ಲದೆ ಮೇಕಪ್ ಮತ್ತು ಹೇರ್ ಸ್ಟೈಲ್ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಸೂಚಿಸಲಾಗಿದೆ.
ಹೊಸ ಆದೇಶದಿಂದ ಹಳಬರಿಗೆ ಒಂದಿಷ್ಟು ಸಮಸ್ಯೆಯಾಗಲಿದೆ.ಪೇದೆ, ಮುಖ್ಯಪೇದೆ ಹಾಗೂ ಎ.ಎಸ್.ಐಗಳು ಸೀರೆ ಉಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈವರೆಗೆ ಸೀರೆ, ಚಪ್ಪಲಿ ತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಸಿಬ್ಬಂದಿ, ದಿಢೀರ್ ಎಂದು ಪ್ಯಾಂಟು,ಶರ್ಟು,ಬೂಟು ಧರಿಸಿ ಅಂದರೆ ಕೊಂಚ ಸಮಸ್ಯೆಯಾಗಲಿದೆ.
ಕಳ್ಳ-ಕಾಕರನ್ನು ಬೆನ್ನತ್ತಿ ಹಿಡಿಯಲು,ಓಡಲು ಅಸಾಧ್ಯ. ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶ. ಶಿಸ್ತುಪಾಲನೆ, ಏಕಾಗ್ರತೆ, ಏಕರೂಪತೆ ತರುವ ಉದ್ದೇಶದಿಂದ ಈ ಆದೇಶವನ್ನು ಜಾರಿಗೊಳಿಸಲಾಗಿದೆ.
https://www.youtube.com/watch?v=y56pY0ED2qk&t=16s
Discussion about this post