ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಅಬ್ಬರಕ್ಕೆ ಖ್ಯಾತ ನಟಿ ಕವಿತಾ ಬದುಕು ನರಕವಾಗಿ ಪರಿಣಮಿಸಿದೆ. ವುಹಾನ್ ವೈರಸ್ ಗೆ ನಟಿ ಕವಿತಾ ಅವರ ಪತಿ ಮತ್ತು ಪುತ್ರ ಬಲಿಯಾಗಿದ್ದಾರೆ. ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದಾರೆ.
ಕೇವಲ 15 ದಿನಗಳಲ್ಲಿ ಗಂಡ ಮತ್ತು ಮಗ ಇಬ್ಬರೂ ಸಾವನ್ನಪ್ಪಿರುವುದು ಕವಿತಾ ಅವರ ಬದುಕಿನಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಕವಿತಾ ಕೆಲವು ದಿನಗಳ ಹಿಂದಷ್ಟೇ ಕೊರೋನಾ ಸೋಂಕಿನಿಂದಾಗಿ ತಮ್ಮ ಮಗನನ್ನು ಕಳೆದುಕೊಂಡಿದ್ದರು. ಅವರ ಮಗ ಸಂಜಯ್ ರೂಪ್ಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಜೂನ್ 15ರಂದು ಸಂಜಯ್ ಅಸುನೀಗಿದ್ದರು.
ಬಳಿಕ ಕವಿತಾ ಅವರ ಪತಿ ದಶರಥ ರಾಜ್ ಅವರಿಗೂ ಕೊರೋನಾ ಪಾಸಿಟಿವ್ ಆಗಿತ್ತು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳಿದಿದ್ದಾರೆ .
ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಕವಿತಾ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಅನೇಕ ಸಿನಿಮಾಗಳಲ್ಲಿ ಕವಿತಾ ಅಭಿನಯಿಸಿದ್ದಾರೆ. ತಮ್ಮ 11ನೇ ವರ್ಷ ವಯಸ್ಸಿನಲ್ಲಿಯೇ ನಟಿ ಕವಿತಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 1976ರಲ್ಲಿ ತೆರೆಕಂಡ ‘ಓ ಮಂಜು’ ನಟಿ ಕವಿತಾ ಅಭಿನಯದ ಚೊಚ್ಚಲ ಚಿತ್ರ. ‘ಸಿರಿ ಸಿರಿ ಮುವ್ವ’, ‘ಯುಗಳಗೀತಂ’, ‘ಮೀನಾಕ್ಷಿ’, ಕನ್ನಡದ ‘ಸಹೋದರರ ಸವಾಲ್’, ‘ಕಿಲಾಡಿ ಕಿಟ್ಟು’ ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ. ಕೆಲ ಸೀರಿಯಲ್‌ಗಳಲ್ಲೂ ಕವಿತಾ ಕಾಣಿಸಿಕೊಳ್ಳುತ್ತಿದ್ದಾರೆ.
Discussion about this post