ಹೊಸದಿಲ್ಲಿ : ವಿಶ್ವವನ್ನು ಆತಂಕಕ್ಕೆ ತಳ್ಳಿರುವ ಕೊರೋನಾ ವೈರಸ್ ರೂಪಾಂತರಿ ತಳಿ ಡೆಲ್ಟಾ ಪ್ಲಸ್ ಇದೀಗ ಮೊದಲ ಬಲಿ ಪಡೆದಿದೆ. ಮಧ್ಯಪ್ರದೇಶದಲ್ಲಿ ಬುಧವಾರ ಈ ದುರ್ಘಟನೆ ಸಂಭವಿಸಿದೆ.
ಉಜ್ಜೈನಿಯಲ್ಲಿ ಸಂಗ್ರಹಿಸಲಾಗಿದ್ದ ಸ್ಯಾಂಪಲ್ ನಲ್ಲಿ ಇಬ್ಬರಿಗೆ ಕೊರೋನ ವೈರಸ್ ನ ಡೆಲ್ಟಾ ಪ್ಲಸ್ ಪ್ರಭೇದ ತಗಲಿರುವುದು ಪತ್ತೆಯಾಗಿತ್ತು. ಅವರಿಬ್ಬರೂ ಪತಿ ಪತ್ನಿಯರಾಗಿದ್ದರು.
ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಇಬ್ಬರಿಗೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಡೆಲ್ಟಾ ಪ್ಲಸ್ ಎಂದು ಗೊತ್ತಾದ ಬಳಿಕ ಮತ್ತಷ್ಟು ನಿಗಾವಹಿಸಲಾಗಿತ್ತು. ಆದರೆ ಇದೀಗ ಡೆಲ್ಟಾ ಪ್ಲಸ್ ಗೆ ಗುರಿಯಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ಆದರೆ ಅವರ ಪತಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಗಮನಾರ್ಹ ಅಂದ್ರೆ ಪತಿ ಕೊರೋನಾ ಸೋಂಕು ತಡೆಯುವ ಸಲುವಾಗಿ ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರು. ಮಹಿಳೆ ಒಂದು ಡೋಸ್ ಕೂಡಾ ಪಡೆದಿರಲಿಲ್ಲ. ಈ ಮೂಲಕ ಡೆಲ್ಟಾ ಪ್ಲಸ್ ಪ್ರಬೇಧವನ್ನು ಲಸಿಕೆ ಸೋಲಿಸಲಿದೆ ಅನ್ನುವ ವಿಶ್ವಾಸ ಮೂಡಿಸಿದೆ. ಮಧ್ಯಪ್ರದೇಶದಲ್ಲಿ ಈ ವರೆಗೆ ಒಟ್ಟು ಐದು ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣಗಳು ವರದಿಯಾಗಿದೆ. 3 ಕೇಸ್ ಗಳು ಭೋಪಾಲ್ ನಿಂದ ವರದಿಯಾದರೆ, 2 ಕೇಸ್ ಗಳು ಉಜ್ಜೈನಿಯಲ್ಲಿ ವರದಿಯಾಗಿದೆ. ಐವರ ಪೈಕಿ ನಾಲ್ವರು ಚೇತರಿಸಿಕೊಂಡಿದ್ದಾರೆ.
Discussion about this post