Advertisements

ಭಾರತದಲ್ಲಿ ಬೆದರಿಕೆ ಇದೆ ಎಂದು ಹೊಸ ದೇಶ ಕಟ್ಟಿದ ನಿತ್ಯಾನಂದ…

ವಿವಾದಿತ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನನ್ನು ಕಾನೂನಿನ ಕುಣಿಕೆಗಳು ಬಿಗಿಗೊಳಿಸಲಾರಂಭಿಸಿದೆ. ಕರ್ನಾಟಕದಲ್ಲಿ ಹತ್ತಾರು ಕೇಸುಗಳನ್ನು ಮೈಮೇಲೆ ಹೊತ್ತುಕೊಂಡಿದ್ದ ನಿತ್ಯಾನಂದ ಹಾಗೂ ಆತನ ಶಿಷ್ಯರು ಹೇಗೋ ಬೀಸೋ ದೊಣ್ಣೆಯಿಂದ ಪಾರಾಗುತ್ತಿದ್ದರು.

ಆದರೆ ಗುಜರಾತ್ ನ್ಯಾಯಾಲಯದಲ್ಲಿ ದಾಖಲಾಗಿರುವ ಕೇಸ್ ನಿಂದ ಆತನಿಗೆ ಸಂಕಷ್ಟ ಗ್ಯಾರಂಟಿ ಅನ್ನುವುದು ಖಚಿತವಾಗಿದೆ. ಮಾತ್ರವಲ್ಲದೆ ಅಲ್ಲಿನ ಪೊಲೀಸರು ಕೂಡಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಹೀಗಾಗಿ ಪಾಸ್‍ಪೋರ್ಟ್ ಅವಧಿ ಮುಕ್ತಾಯಗೊಂಡಿದ್ದರೂ ನೇಪಾಳ ಮೂಲಕ ನಕಲಿ ವೆನೆಜುವೆಲಾ ಪಾಸ್‍ಪೋರ್ಟ್ ಪಡೆದು ಭಾರತವನ್ನು ತೊರೆದಿದ್ದಾನೆ.

ಈ ನಡುವೆ ಭಾರತ ತೊರೆದಿರುವ ನಿತ್ಯಾನಂದ ಹೊಸ ದೇಶವನ್ನು ಕಟ್ಟಿದ್ದಾನೆ. ಅಲ್ಲಿ ಪ್ರಧಾನಿಯನ್ನು ನೇಮಿಸಿ ಸಚಿವ ಸಂಪುಟವನ್ನು ರಚಿಸಿದ್ದಾನೆ ಎಂದು  ಅನರ್ಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ವರದಿ ಮಾಡಿದೆ.

ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿರುವ ನಿತ್ಯಾನಂದ ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ. ಇದು ತನ್ನ ದೇಶ ಎಂದು ಹೇಳಿದ್ದಾನಂತೆ. ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‌ಪೋರ್ಟ್‌‌‌‌ಗಳನ್ನು ಕೂಡಾ ಸಿದ್ಧಪಡಿಸಲಾಗಿದೆ. 

ತನ್ನನ್ನು ತಾನೇ ದೇವಮಾನವ ಎಂದು ಘೋಷಿಸಿಕೊಂಡಿರುವ ನಿತ್ಯಾನಂದ ಕೈಲಾಸ ರಾಷ್ಟ್ರವನ್ನು ಘೋಷಿಸಿಕೊಂಡಿದ್ದಾನೆ. ಈ ಸ್ವಯಂ ಘೋಷಿತ ರಾಷ್ಟ್ರಕ್ಕೆ  ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಷ್ಟೇ ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಮನವಿಯನ್ನು ಹೊರಡಿಸಿದ್ದಾನೆ.

ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

ಈ ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಆಸೆ ಬೇರೆ ಹುಟ್ಟಿಸಿರುವ ನಿತ್ಯಾನಂದ  www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟ್ ತೆರೆದು, ಪಾಸ್ ಪೋರ್ಟ್ ಪಡೆಯುವುದು ಹೇಗೆ, ಸನ್ಯಾಸಿಯಾಗುವುದು ಹೇಗೆ, ಪೌರತ್ವ ಪಡೆಯುವುದು ಹೇಗೆ ಎಂದೆಲ್ಲಾ ವಿವರಣೆಗಳನ್ನು ಹಾಕಿದ್ದಾನೆ.

ಇಷ್ಟು ಮಾತ್ರವಲ್ಲದೆ ತಾನು ಖರೀದಿಸಿದ ಜಾಗವನ್ನು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಲು ವಿಶ್ವಸಂಸ್ಥೆಗೆ ಮನವಿ ಬೇರೆ ಸಲ್ಲಿಸಲು ನಿರ್ಧರಿಸಿದ್ದಾನಂತೆ ನಿತ್ಯಾನಂದ. ಜೊತೆಗೆ ಇದೇ ಅರ್ಜಿಯಲ್ಲಿ ಭಾರತದಲ್ಲಿ ನನಗೆ ಬೆದರಿಕೆ ಇದೆ. ಹೀಗಾಗಿ ಇಲ್ಲಿ ನೆಲೆಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ರಿಪಬ್ಲಿಕ್ ವರದಿ ತಿಳಿಸಿದೆ. 

ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
Advertisements

Leave a Reply

%d bloggers like this: