Advertisements

ಜಮೀನಿನಿಂದಲೇ ಈರುಳ್ಳಿ ಕದ್ದ ಖದೀಮರು

ಕತ್ತರಿಸುತ್ತಿದ್ದಾಗ ಮಾತ್ರ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಇದೀಗ ಖರೀದಿಸುವಾಗಲು ಕಣ್ಣೀರು ತರಿಸುತ್ತಿದೆ. ಕೆಜಿಗೆ 30 ರೂಪಾಯಿ 40 ರೂಪಾಯಿಯಷ್ಟಿದ್ದ ಈರುಳ್ಳಿ ಇದೀಗ 130 ರೂಪಾಯಿಯ ಗಡಿ ದಾಟಿದೆ.

ಪರಿಸ್ಥಿತಿ ನೋಡಿದರೆ ಕೆಜಿಗೆ 150 ರೂಪಾಯಿ ದಾಟಿದರೂ ಅಚ್ಚರಿಯಿಲ್ಲ. ಹೀಗಾಗಿ ಇದೀಗ ನಗ ನಗದು ಕಾಪಾಡುವುದಕ್ಕಿಂತಲೂ ಈರುಳ್ಳಿ ಕಾಯುವುದೇ ದೊಡ್ಡ ಸಾಹಸವಾಗಿದೆ.

ಕಳ್ಳರ ಕಣ್ಣು ಇದೀಗ ಈರುಳ್ಳಿ ಮೇಲೆ ಬಿದ್ದಿದೆ. ಹೀಗಾಗಿ ಈರುಳ್ಳಿ ಬೆಳೆದ ಜಮೀನಿಗೆ ನುಗ್ಗುವ ಖದೀಮರು ಮೂಟೆ ಮೂಟೆ ಈರುಳ್ಳಿಯನ್ನು ಕದಿಯುತ್ತಿದ್ದಾರೆ.

ಪ್ರತೀ ವರ್ಷ ದರ ಕುಸಿತದಿಂದ ಕಂಗಲಾಗುತ್ತಿದ್ದ ರೈತರು, ಈ ಬಾರಿ ದರ ಏರಿಕೆ ಕಂಡು ಈ ಹಿಂದೆ ಆಗಿರುವ ನಷ್ಟವನ್ನು ಈ ಬಾರಿಯಾದರೂ ತುಂಬಿಸಿಕೊಳ್ಳೋವ ಅನ್ನುವ ಆಲೋಚನೆಯಲ್ಲಿದ್ದರು. ಆದರೆ ಅದಕ್ಕೆ ಈರುಳ್ಳಿ ಕಳ್ಳರು ಕಲ್ಲು ಹಾಕಿದ್ದಾರೆ.

ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ರಾತ್ರೋರಾತ್ರಿ ಕಳ್ಳರು ಕಳ್ಳತನ ಮಾಡಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.

ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಎಂಬವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ರಾತ್ರೋರಾತ್ರಿ ಕಳ್ಳರು ಕಳ್ಳತನ ಮಾಡಿದ್ದಾರೆ.

ಗುರುಬಸಯ್ಯ ಅವರು 1.5 ಎಕರೆ ನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದು ರೈತ ಎಂದುಕೊಂಡಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ.

ಇದರೊಂದಿಗೆ 25 ಕೆಜಿ ಹಸಿ ಮೆಣಸಿನಕಾಯಿಯನ್ನು ಕೂಡಾ ಖದೀಮರು ಕಳ್ಳತನ ಮಾಡಿದ್ದಾರೆ.

Advertisements

Leave a Reply

%d bloggers like this: