Peruser!!! It is a trendy supermarket: read articles on day to day basis in English & Kannada. Read,Share & Care
Posted on November 26, 2019 by TorrentSpree
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಯಗಂತಿ ಉಮಾಮಹೇಶ್ವರ ದೇಗುಲ ಆಸ್ತಿಕರನ್ನು ಕೈ ಬೀಸಿ ಕರೆಯುತ್ತದೆ. ಕರ್ನೂಲ್ ಕಡೆಗೆ ಹೋದವರು ಈ ದೇವಸ್ಥಾನಕ್ಕೆ ಭೇಟಿ ನೀಡದೆ ಬರುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ನಂದಿಯ ವಿಗ್ರಹ. ವರ್ಷದಿಂದ ವರ್ಷಕ್ಕೆ ನಂದಿಯ ವಿಗ್ರಹ ಬೆಳೆಯುತ್ತಿರುವ ಕಾರಣ, ಇದನ್ನು ದೇವರ ಪವಾಡ ಎಂದೇ ನಂಬಿರುವ ಜನ ಇಲ್ಲಿಗೊಂದು ವಿಸಿಟ್ ಕೊಟ್ಟೇ ಕೊಡುತ್ತಾರೆ.
ಹದಿನೈದನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ ಇದಾಗಿದ್ದು. ಈ ಬೃಹತ್ ದೇಗುಲವನ್ನು ನಿರ್ಮಿಸಿದವರು ವಿಜಯನಗರ ಸಾಮ್ರಾಜ್ಯವನ್ನು ಆಳಿಸಿದ್ದ ಸಂಗಮ ರಾಜಮನೆತನದ ಅರಸ ಹರಿಹರ ಬುಕ್ಕ ರಾಯ.
ಇನ್ನೊಂದು ಮಾಹಿತಿ ಪ್ರಕಾರ ಅಗಸ್ತ್ಯ ಮುನಿಗಳು ಇಲ್ಲಿ ವೆಂಕಟೇಶ್ವರನ ದೇಗುಲ ನಿರ್ಮಿಸಲು ಬಯಸಿದ್ದರಂತೆ. ಆದರೆ, ನಿರ್ಮಾಣಗೊಂಡ ಮೂರ್ತಿಯ ಉಗುರೊಂದು ಮುರಿದು ಹೋಗಿತ್ತಂತೆ. ಹೀಗಾಗಿ, ಭಗ್ನಗೊಂಡ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ. ಇದರಿಂದ ಬಹುವಾಗಿ ನೊಂದುಕೊಂಡ ಅಗಸ್ತ್ಯ ಮುನಿಗಳು ಶಿವನ ತಪಸ್ಸು ಮಾಡಿದರಂತೆ. ಬಳಿಕ ಉಮಾಮಹೇಶ್ವರರು ಒಂದೇ ಕಲ್ಲಿನಲ್ಲಿ ಇಲ್ಲಿ ರೂಪ ಪಡೆದರು ಅನ್ನುತ್ತದೆ ಸ್ಥಳ ಪುರಾಣ.
ನಂದಿ ಅದೆಷ್ಟರ ಮಟ್ಟಿಗೆ ಬೆಳೆದಿದೆ ಅಂದ್ರೆ ಈ ಹಿಂದೆ ನಂದಿಗೆ ಪ್ರದಕ್ಷಿಣೆ ಬರಲು ಸಾಕಷ್ಟು ಜಾಗ ಇತ್ತಂತೆ. ಆದರೆ, ಈಗ ಆ ಜಾಗವನ್ನೆಲ್ಲಾ ಬೆಳೆದ ನಂದಿ ಆವರಿಸಿಕೊಂಡಿದ್ದಾನೆ. ಅದೂ ಅಲ್ಲದೆ, ನಂದಿಯ ಬೆಳವಣಿಗೆಯ ಕಾರಣದಿಂದ ಅಲ್ಲೇ ಇದ್ದ ಒಂದು ಕಲ್ಲಿನ ಕಂಬವನ್ನೂ ತೆಗೆಯಲಾಗಿದೆ ಅನ್ನುತ್ತಾರೆ ಭಕ್ತರು.
ಇನ್ನು ಕಲಿಯುಗ ಅಂತ್ಯವಾಗುವ ಹೊತ್ತಿಗೆ ಈ ನಂದಿಯ ವಿಗ್ರಹ ಜೀವ ತಳೆದು ಎದ್ದು ಬಂದು ಸ್ವರ ಏರಿಸಿ ಕೂಗುತ್ತದೆ ಅನ್ನುವ ನಂಬಿಕೆಯೂ ಭಕ್ತರಲ್ಲಿದೆ.
ಹಾಗಂತ ನಂದಿ ಬೆಳೆಯುತ್ತಿದೆ ಅನ್ನುವುದು ಕೇವಲ ಭಕ್ತರ ನಂಬಿಕೆ ಅಂದುಕೊಳ್ಳಬೇಡಿ. ವರ್ಷಕ್ಕೆ ವರ್ಷಕ್ಕೆ ನಂದಿ ಬೆಳೆಯುತ್ತಿದೆ ಅನ್ನುವುದು ಸತ್ಯ, ಇದಕ್ಕೆ ಪುರಾತತ್ವ ಇಲಾಖೆಯ ದಾಖಲೆಗಳೇ ಸಾಕ್ಷಿ.
ಇಲ್ಲಿನ ನಂದಿ ಬೆಳೆಯುವುದು ಬರೀ ನಂಬಿಕೆ ಮಾತ್ರ ಅಲ್ಲ ನಿಜ ಕೂಡಾ. ಈ ಅಂಶವನ್ನು ಸ್ವತಃ ಪುರಾತತ್ವ ಇಲಾಖೆ ಕೂಡಾ ದೃಢಪಡಿಸಿದೆ. ಈ ನಂದಿ ಪ್ರತಿ 20 ವರ್ಷಕ್ಕೊಮ್ಮೆ ಒಂದು ಇಂಚು ದೊಡ್ಡದಾಗುತ್ತದೆಯಂತೆ. ಹೀಗಾಗಿ, ಪ್ರತಿ ಹದಿನೈದು ವರ್ಷಕ್ಕೊಮ್ಮೆ ಪುರಾತತ್ವ ಇಲಾಖೆ ಈ ನಂದಿಯ ಗಾತ್ರದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದೆ
ನಂದಿ ಬೆಳೆಯಲು ಪ್ರಕಾರ ಭಕ್ತರ ಕಾರಣವೇ ಬೇರೆ. ಆದರೆ ಪುರಾತತ್ವ ಇಲಾಖೆ ಬೇರೆಯದ್ದೇ ಕಾರಣ ಕೊಟ್ಟಿದೆ. ಕಲ್ಲುಗಳು ಬೆಳೆಯುವುದು ಹೊಸದಲ್ಲ. ರಾಸಾಯನಿಕ ಕ್ರಿಯೆಯಿಂದ ಕಲ್ಲುಗಳು ಬೆಳೆಯುತ್ತವೆ. ಬಂಡೆಯಲ್ಲಿ ಸಿಲಿಕಾದ ಅಂಶ ಮತ್ತು ಕಬ್ಬಿಣದ ಕಣಗಳಿವೆ. ಒಮ್ಮೊಮ್ಮೆ ಖನಿಜ ಸಿಲಿಕಾದ ಇತರ ಕಣಗಳಿಗೆ ಪರಿವರ್ತನೆಯಾದಾಗ ಕಲ್ಲು ವಿಸ್ತರಿಸಿಕೊಳ್ಳುತ್ತದೆ ಅನ್ನುವುದು ಇವರ ವಾದ.
ಈ ದೇವಸ್ಥಾನದ ಮತ್ತೊಂದು ವಿಶೇಷ ಅಂದರೆ ಈ ದೇವಸ್ಥಾನದಲ್ಲಿ ಕಾಗೆಗಳು ಕಾಣಸಿಗುವುದೇ ಇಲ್ಲ. ಇದಕ್ಕೆ ಕಾರಣ ಅಗಸ್ತ್ಯ ಮುನಿಗಳ ಶಾಪವಂತೆ. ಅಗಸ್ತ್ಯರು ತಪಸ್ಸು ಮಾಡುತ್ತಿರುವಾಗ ಕಾಗೆಗಳು ನಿರಂತದ ತಪಸ್ಸಿಗೆ ಭಂಗ ತರುತ್ತಿದ್ದವಂತೆ. ಹೀಗಾಗಿ, ಅಗಸ್ತ್ಯರು ಶಾಪ ಕೊಟ್ಟಿದ್ದರಿಂದ ಇಲ್ಲಿಗೆ ಕಾಗೆಗಳು ಬರುವುದಿಲ್ಲ ಅನ್ನುವ ಎಂಬ ನಂಬಿಕೆ ಇದೆ.
Category: Viral Stories