ನಗೆಯ ಬುಗ್ಗೆ, ನವಿರು ಪ್ರೇಮಕಥೆಯ ಕನ್ನಡ ವ್ಯಾಕರಣ ಸವರ್ಣದೀರ್ಘ ಸಂಧಿ’

ಕನ್ನಡ ಮಣ್ಣಿನ ಘಮಲನ್ನು ಪಸರಿಸುತ್ತಾ ಇಂದಿನ ದಿನಮಾನಕ್ಕೆ ಸರಿ ಹೊಂದುವಂತಹ ಕಥೆಯನ್ನು ಹಾಸ್ಯ ರೂಪದಲ್ಲಿ ಹೇಳುತ್ತಾ ಬಂದಿರುವ ಹೊಸಬರ ಚಿತ್ರ ಸವರ್ಣದೀರ್ಘ ಸಂಧಿ ಸಿನಿ ಪ್ರೇಕ್ಷಕರ ಮನ ಗೆದ್ದಿದೆ.

ಸವರ್ಣದೀರ್ಘ ಸಂಧಿ ಚಿತ್ರದಲ್ಲಿ ಗಮನ ಸೆಳೆಯುವುದು ಪಾತ್ರಗಳ ಹೆಸರುಗಳು. ಕನ್ನಡ ಕವಿಯ ಹೆಸರನ್ನು ಇಟ್ಟುಕೊಂಡ ನಾಯಕ ಮುದ್ದಣ್ಣ (ವೀರೇಂದ್ರ ಶೆಟ್ಟಿ) ರೌಡಿ ಗ್ಯಾಂಗ್ ಕಟ್ಟಿಕೊಂಡಿರುತ್ತಾನೆ. ಸಮಾಜಕ್ಕೆ ಉಪಕಾರ ಮಾಡಲು ರೌಡಿಸಂ ಮಾಡುವುದು ಈ ತಂಡದ ವಿಶೇಷ.

ತಮ್ಮ ಕಾಯಕವನ್ನು ಪಾಸಿಟಿವ್ ರೌಡಿಸಂ ಎಂದು ಕರೆದುಕೊಳ್ಳುತ್ತಾರೆ. ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ರಕ್ಷಿಸಲು ಇವರ ಗ್ಯಾಂಗ್ ನಲ್ಲಿ ಒಬ್ಬ ಲಾಯರ್ ಇರುತ್ತಾನೆ.

ಫ್ಲಾಶ್ ಬ್ಯಾಕ್ ಒಂದರಲ್ಲಿ ಹಳ್ಳಿಯಲ್ಲಿ ಅನಾಥನಾಗಿ ಜೀತದಾಳು ಕೆಲಸ ಮಾಡುತ್ತಾ ಬೆಳೆಯುವ ನಾಯಕ ತಿಮ್ಮ (ಬಾಲ್ಯದ ಹೆಸರು) ಕೆಲಸ ಮಾಡುವ ಹುಡುಗನ ಜೊತೆ ಕನ್ನಡ ಮೇಷ್ಟ್ರ ಬಳಿ ವ್ಯಾಕರಣ ಪಾಠ ಕಲಿಯುವ ದೃಶ್ಯಗಳು ಮೂಡಿಬರುತ್ತವೆ.

ಮೇಷ್ಟ್ರ ಮಗಳು ಮನೋರಮೆಯ ಜೊತೆ ಸ್ನೇಹವೂ ಆಗುತ್ತದೆ. ಆದರೆ ಆಕಸ್ಮಿಕ ಘಟನೆಯಿಂದ ಮೇಷ್ಟ್ರ ಸಖ್ಯದಿಂದ ದೂರವಾಗಿ ನಗರ ಸೇರುತ್ತಾನೆ. ಅಲ್ಲಿ ಪೈಲ್ವಾನ್ ಮನೆ ಸೇರುತ್ತಾನೆ. ಇವನೇ ಮುಂದೆ ಮುದ್ದಣ್ಣ ಎಂದು ಪ್ರಖ್ಯಾತಿ ಪಡೆಯುತ್ತಾನೆ. ಪೈಲ್ವಾನ್ ನಿಧನದ ನಂತರ ರೌಡಿಗಳ ಗ್ಯಾಂಗನ್ನು ಮುನ್ನಡೆಸುತ್ತಾನೆ.
ಇಲ್ಲಿ ನಾಯಕ ಅವಿದ್ಯಾವಂತನಾದರೂ ಕನ್ನಡ ವ್ಯಾಕರಣದಲ್ಲಿ ಉದ್ಧಾಮ ಪಂಡಿತ. ಕನ್ನಡ ಸಂಧಿ, ಪದ್ಯಗಳು ಅವನ ಬಾಯಲ್ಲಿ ಆಗಾಗ ಕೇಳಿ ಬರುತ್ತವೆ. ನಾಯಕನ ಊರಿಗೆ ಹೊಸದಾಗಿ ಬರುವ ಪೊಲೀಸ್ ಕಪಾಲೀಶ್ವರನ್ ಮುದ್ದಣ್ಣ ಗ್ಯಾಂಗ್‍ನ ನಾಯಕ ಮುದ್ದಣ್ಣನನ್ನು ಹೇಗಾದರೂ ಮಾಡಿ ಜೈಲಿಗಟ್ಟಬೇಕು ಎಂದು ಶಪಥ ಮಾಡುತ್ತಾನೆ. ಇವರಿಬ್ಬರ ನಡುವಿನ ತಾಕಲಾಟವೇ ಚಿತ್ರದ ಹೂರಣ.

ಪರೋಪಕಾರಿ ರೌಡಿಸಂ, ಕನ್ನಡ ವ್ಯಾಕರಣ ಪಾಠಗಳ ನಡುವೆ ಪ್ರೀತಿಯ ಎಳೆಯೂ ಇದೆ. ನಾಯಕನ ಸಾಮಾಜಿಕ ಕೆಲಸವನ್ನು ನೋಡಿ ಗಾಯಕಿಯಾದ ನಾಯಕಿ ಅಮೃತವರ್ಷಿಣಿಗೆ (ಕೃಷ್ಣ) ಮಾಂಕುರವಾಗುತ್ತದೆ. ನಾಯಕನ ಕನ್ನಡ ಪ್ರೇಮವನ್ನು ಕಂಡು ಇನ್ನೂ ಹತ್ತಿರವಾಗುತ್ತಾಳೆ. ಆದರೆ ವೈರಿಗಳ ಕುತಂತ್ರದಿಂದ ನಾಯಕಿ ನಾಯಕನಿಂದ ದೂರವಾಗಬೇಕಾಗುತ್ತದೆ. ಇಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತದೆ.

ನಾಯಕನ ವೈರಿಗಳಾರು, ನಾಯಕಿ ಏಕೆ ದೂರವಾಗುತ್ತಾಳೆ, ಮುದ್ದಣ್ಣನಿಗೆ ಆಕೆ ಸಿಗುತ್ತಾಳೆಯೇ, ನಾಯಕ ತನ್ನ ವೈರಿಗಳನ್ನು ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಕುತೂಹಲಕಾರಿ ಅಂಶಗಳಿಗೆ ಚಿತ್ರ ನೋಡಿಯೇ ಉತ್ತರ ಕಂಡುಕೊಳ್ಳಬೇಕು.

ಸನ್ನಿವೇಶಕ್ಕೆ ತಕ್ಕಂತೆ ನಾಯಕನ ಬಾಯಲ್ಲಿ ನುಡಿಯುವ ಸಂಧಿ, ಪದ್ಯಗಳು, ಪೊಲೀಸರನ್ನು ಗೇಲಿ ಮಾಡಲು ಅವುಗಳನ್ನು ಬಳಸಿಕೊಳ್ಳುವ ಪರಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ (ಸಂಭಾಷಣೆ ವೀರೇಂದ್ರ ಶೆಟ್ಟಿ).
ಸಂಭಾಷಣೆಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ. ಅಲ್ಲದೆ ಕನ್ನಡ ವ್ಯಾಕರಣದ ಸವರ್ಣದೀರ್ಘ ಸಂಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಮೊದಲ ಚಿತ್ರದಲ್ಲಿಯೇ ನಾಯಕಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ವ್ಯಾಕರಣ ಪಾಠ ಮಾಡುವ ಮೇಷ್ಟ್ರ ಪಾತ್ರವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಉಳಿದಂತೆ ಬರುವ ಪೊಲೀಸರು, ರೌಡಿಗಳು, ಇತರ ಪಾತ್ರಗಳೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪದ್ಮಜಾರಾವ್? ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಿತ್ರದ ಗಟ್ಟಿಯಾದ ಕಥಾನಕವನ್ನು ಇನ್ನೊಂದಷ್ಟು ಸೊಗಸಾಗಿ ತೋರಿಸಬಹುದಿತ್ತು. ಆದರೂ ನಿರೂಪಣೆಯಿಂದ ಸಿನಿರಸಿಕರನ್ನು ಸೆಳೆಯುತ್ತದೆ. ಮನೋಮೂರ್ತಿಯವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ “ಕೊರಳಾದೆ ನಾ ಕೃಷ್ಣ ನಿನ್ನ ಕೈಯಲ್ಲಿ..” ಸೇರಿದಂತೆ ಇತರ ಗೀತೆಗಳು ಕೇಳಲು ಇಂಪಾಗಿವೆ.

ಚಿತ್ರದ ಮೊದಲಾರ್ಧದಲ್ಲಿ ಕಂಡು ಬರುವ ಮಲೆನಾಡ ಸೌಂದರ್ಯವನ್ನು ಕ್ಯಾಮರಾ ಆಕರ್ಷಕವಾಗಿ ಸೆರೆ ಹಿಡಿದಿದೆ (ಛಾಯಾಗ್ರಹಣ ಲೋಕನಾಥ್).

ವೀರೇಂದ್ರ ಶೆಟ್ಟಿ ಸವರ್ಣದೀರ್ಘ ಸಂಧಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.

ನಿರ್ಮಾಣದ ನೊಗವನ್ನೂ ಹೊತ್ತಿರುವ ವೀರೇಂದ್ರ ಅವರು ನಾಯಕನಾಗಿಯೂ ಗಮನ ಸೆಳೆದಿದ್ದಾರೆ. ಆದರೆ ಕೆಲವು ಸನ್ನಿವೇಶಗಳಿಗೆ ಜೀವ ತುಂಬಬಹುದಿತ್ತು ಎನಿಸದೆ ಇರದು. ಸಂಕೇತ್ ಶಿವಪ್ಪ ಸಂಕಲನ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ.

“ಅದು ಸುವರ್ಣದೀರ್ಘ ಅಲ್ಲ ಸವರ್ಣದೀರ್ಘ ಸಂಧಿ” ಎಂದು ಚಿತ್ರದಲ್ಲಿ ಆಗಾಗ ಕೇಳಿ ಬರುವ ಸಾಲುಗಳು ಕನ್ನಡ ಪದಗಳನ್ನು ತಪ್ಪಾಗಿ ಉಚ್ಚರಿಸುವ ಮಂದಿಗೆ ತಿವಿದಂತಿದೆ.

ಮೊದಲ ಪ್ರಯತ್ನದಲ್ಲೇ ವೀರೇಂದ್ರ ಶೆಟ್ಟಿ ಯಶಸ್ವಿಯಾಗಿದ್ದಾರೆ. ನಕ್ಕು ಹಗುರಾಗಬೇಕು ಎನ್ನುವ ಮನಸುಗಳಿಗೆ ಚಿತ್ರ ಯಥೇಚ್ಛ ಸರಕನ್ನು ಒದಗಿಸುತ್ತದೆ. ಒಟ್ಟಿನಲ್ಲಿ ನಿರ್ಮಾಪಕರಾದ ವೀರೇಂದ್ರ ಶೆಟ್ಟಿ, ಮನೋ ಮೂರ್ತಿ, ಲುಷಿಂಗ್ಟನ್ ಮತ್ತು ಹೇಮಂತ್ ಕುಮಾರ್ ಹಾಕಿದ ದುಡ್ಡಿಗೆ ಮೋಸವೇನು ಆಗಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: