Advertisements

ನಳಿನ್ ಕುಮಾರ್ ಕಟೀಲ್’ಗೆ ಬಿಸಿ ಮುಟ್ಟಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ….!

ಯಡಿಯೂರಪ್ಪ ಸಂಪುಟದಲ್ಲಿ ಕರಾವಳಿಗೆ ಸಚಿವ ಸ್ಥಾನ ಸಿಗದಿರುವ ಕಾರಣದಿಂದ ಬಿಜೆಪಿ ಮತ ಹಾಕಿದ ಮಂದಿ ಈಗಾಗಲೇ ಆಕ್ರೋಶಿತರಾಗಿದ್ದಾರೆ. ಕೋಪ ತಣಿಸಲು ಅನ್ನುವಂತೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲಾಗಿತ್ತು.

ಆದರೆ ಇದು ಆಕ್ರೋಶವನ್ನು ತಣಿಸಲಿಲ್ಲ, ಬದಲಾಗಿ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಆದರೂ ಪ್ರಧಾನಿ ನರೇಂದ್ರ ಮೋದಿಗಾಗಿ ಎಲ್ಲವನ್ನೂ ಸಹಿಸಿಕೊಂಡ ಮಂದಿ ಒಳಗೊಳಗೆ ಕುದಿಯುತ್ತಿದ್ದಾರೆ.

ಇದು ಇಂದು ಕೂಡಾ ಬೆಳಕಿಗೆ ಬಂದಿದೆ.ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ನಳಿನ್ ಕುಮಾರ್ ಅಭಿನಂದನಾ ಸಮಾರಂಭಕ್ಕೆ ಉಡುಪಿ ಭಾಗದ ಇಬ್ಬರು ಶಾಸಕರು ಗೈರಾಗುವ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದು ಬಹಿರಂಗವಾಗಿದೆ. ವಿಶೇಷ ಅಂದರೆ ಕಾರ್ಯಕ್ರಮಕ್ಕೆ ಗೈರಾದವರು ಬಂಟ ಸಮುದಾಯದ ಶಾಸಕರು.

ನಳಿನ್ ಕುಮಾರ್ ಕಟೀಲ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬೈಂದೂರು ಸುಕುಮಾರ ಶೆಟ್ಟಿ ಬಂಟ ಸಮುದಾಯದವರು.

ಕರಾವಳಿಯ ವಾಜಪೇಯಿ ಎಂದೇ ಪ್ರಸಿದ್ಧರಾಗಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಕಾಣದ ಕೈಗಳು ಯಶಸ್ವಿಯಾಗಿತ್ತು. ಹೀಗಾಗಿ ಈ ಸಭೆಗೆ ಅವರು ಗೈರು ಹಾಜರಾಗಿದ್ದಾರೆ.

ಮತ್ತೊಂದು ಕಡೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕೂಡಾ ನಳಿನ್ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಸುಕುಮಾರ ಶೆಟ್ಟಿ ಯಡಿಯೂರಪ್ಪ ಬೆಂಬಲಿಗನಾಗಿರೋದರಿಂದ ಕಟೀಲ್ ಅವರ ಅಭಿನಂದನಾ ಸಭೆಗೆ ಬಂದಿಲ್ಲ ಎನ್ನಲಾಗಿದೆ.

ಯಡಿಯೂರಪ್ಪನವರು ಸಚಿವ ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟರಿಗೆ ಸ್ಥಾನ ಸಿಗುವ ನಿರೀಕ್ಷೆಯನ್ನು ಜಿಲ್ಲಾ ಬಿಜೆಪಿ ಕಾರ್ಯಕರ್ತರು  ಹಾಗೂ ಬಂಟ ಸಮುದಾಯ ಇರಿಸಿತ್ತು. ಆದರೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಲಾಗಿತ್ತು.

ಕೇವಲ ಅಭಿನಂದನಾ ಸಮಾರಂಭ ಮಾತ್ರವಲ್ಲದೆ, ನಳಿನ್ ಕುಮಾರ್ ಕಟೀಲು ಕರೆದಿದ್ದ ಜಿಲ್ಲಾ ಪ್ರಮುಖರ ಸಭೆಗೂ ಇವರಿಬ್ಬರೂ ಗೈರಾಗುವ ಮೂಲಕ ರಾಜ್ಯ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಈ ಮೂಲಕ ಪಕ್ಷ ಸಂಘಟನೆ ಚಟುವಟಿಕೆಯಿಂದ ದೂರವುಳಿಯುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Advertisements

Leave a Reply

%d bloggers like this: