Advertisements

ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಸೊಸೆಯಂದಿರೇ ಕಾರಣ : ಯುವ ಕಾಂಗ್ರೆಸ್ ಮುಖಂಡನ ಆರೋಪ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್.ಡಿ. ದೇವೇಗೌಡರು ಸೋಲುವುದಕ್ಕೆ ಅವರ ಇಬ್ಬರು ಸೊಸೆಯಂದಿರು ಕಾರಣ ಎಂದು ಹೊಳೆನರಸೀಪುರದ ಜನ ಹೇಳುತ್ತಿದ್ದಾರೆ ಅಂತಾ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರ ಪುತ್ರ ಆರ್. ರಾಜೇಂದ್ರ ಹೇಳಿದ್ದಾರೆ.

ಗೌಡರ ಇಬ್ಬರೂ ಸೊಸೆಯಂದಿರು ತಮ್ಮ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ಒಬ್ಬರು ಹಾಸನ, ಮತ್ತೊಬ್ಬರು ಮಂಡ್ಯಕ್ಕೆ ಮುಖ ಮಾಡಿದ್ರು.

ಆದರೆ ದೇವೇಗೌಡರಿಗೆ ಸೀಟು ಬಿಟ್ಟುಕೊಡಲು ಯಾರು ಕೂಡಾ ಸಿದ್ದವಿರಲಿಲ್ಲ. ಕೊನೆಗೆ ಅನಿವಾರ್ಯವಾಗಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಿದರು.

ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ನಾವು ಕೆಲಸ ಮಾಡಿದ್ದೇವೆ, ಆದರೆ ಜೆಡಿಎಸ್ ಕಾರ್ಯಕರ್ತರು ಅವರ ನಾಯಕನನ್ನು ಗೆಲ್ಲಿಸಲು ಶ್ರಮ ಹಾಕಲಿಲ್ಲ ಎಂದು  ರಾಜೇಂದ್ರ ದೂರಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ ಎಂದು ಮೈತ್ರಿಗೆ ಒಪ್ಪಿಗೆ ಸೂಚಿಸಿ ಕೆಲಸ ಮಾಡಿದೆವು, ಆದರೆ ಕಾಂಗ್ರೆಸ್ ಪಕ್ಷವೇ ದೊಡ್ಡ ಹೊಡೆತ ತಿನ್ನುವಂತಾಯ್ತು ಅಂದ  ರಾಜೇಂದ್ರ ಸಿಎಂ ಕುಮಾರಸ್ವಾಮಿ ಕಾರ್ಯವೈಖರಿಯನ್ನು ಟೀಕಿಸಿದರು.

ರಾಜ್ಯದಲ್ಲಿ ಜನಹಿತ ಕಡೆಗಣನೆಯಾಗಿದ್ದು, ಬರ ಇದ್ದರೂ ಮುಖ್ಯಮಂತ್ರಿ ಅತ್ತ ಗಮನಹರಿಸಿಲ್ಲ. ಹೆಚ್ಚು ಸಮಯವನ್ನು ತಾಜ್  ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಕಳೆಯುತ್ತಿದ್ದಾರೆ . ಇದನೆಲ್ಲಾ ಗಮನಿಸುತ್ತಿರುವ ಜನ ಅವರಿಗೆಲ್ಲಾ ಮತ ಹಾಕ್ತಾರೆಯೇ ಎಂದು ಪ್ರಶ್ನಿಸಿದರು.

Advertisements

Leave a Reply

%d bloggers like this: