Advertisements

ಕರಾವಳಿ ಕೈ ನಾಯಕರನ್ನು ಸೈಲೆಂಟ್ ಆಗಿ ಸೈಡಿಗೆ ಸರಿಸಿದ ಕೆಪಿಸಿಸಿ

ಕರಾವಳಿ ಅಂದರೆ ಮಂಗಳೂರು ಭಾಗದಲ್ಲಿ ಅನೇಕ ಕಾಂಗ್ರೆಸ್ ನಾಯಕರು ಉದಯಿಸಿದ್ದಾರೆ. ದುರಂತ ಅಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ ನಾಯಕರನ್ನು ಹೊಸ ತಲೆಮಾರಿನ ನಾಯಕರು ಮರೆಯುತ್ತಿದ್ದಾರೆ.

ಇದಕ್ಕೆ ಸಾಕ್ಷಿಯಾಗಿದ್ದು ಮಂಗಳೂರಿನಲ್ಲಿ ಇಂದು ನಡೆದ ಪರಿವರ್ತನಾ ಯಾತ್ರೆ. ವೇದಿಕೆಯಲ್ಲಿ ಹಾಕಿದ್ದ ಬ್ಯಾನರ್ . ಈ ಬ್ಯಾನರ್ ನಲ್ಲಿ ಕರಾವಳಿಯ ಹೈಕಮಾಂಡ್ ಎಂದೇ ಕರೆಸಿಕೊಂಡಿರುವ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ, ಎಐಸಿಸಿಯಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ ಆಸ್ಕರ್ ಫರ್ನಾಂಡಿಸ್ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಫೋಟೋಗಳೇ ಇರಲಿಲ್ಲ.

ಇವರೆಲ್ಲರನ್ನೂ ಸಲೀಸಾಗಿ ಸೈಡಿಗೆ ಸರಿಸಿದ ಕಾಂಗ್ರೆಸ್ಸಿಗರು, ಕರಾವಳಿ ಭಾಗಕ್ಕೆ ಗೊತ್ತು ಪರಿಚಯ ಇಲ್ಲದ ನಾಯಕರ ಫೋಟೋಗಳನ್ನು ಮುದ್ರಿಸಿದ್ದರು.

ಇದಕ್ಕೆ ಮತ್ತೊಂದು ಕಾರಣ ಕರಾವಳಿ ಕಾಂಗ್ರೆಸ್ ನಲ್ಲಿ ಎಲ್ಲರೂ ನಾಯಕರಾಗಿರುವುದು, ಕಾರ್ಯಕರ್ತರ ಕೊರತೆ ಇರುವ ಕಾರಣದಿಂದ ಎಲ್ಲರಿಗೂ ಬ್ಯಾನರ್ ಗಳಲ್ಲಿ ಮುಖ ತೋರಿಸುವ ಆಸೆ.

ಕರಾವಳಿ ಕಾಂಗ್ರೆಸ್ ನ ಹಿರಿಯ ಮುಖಗಳನ್ನು ಮರೆತ ಕಾರಣದಿಂದಲೇ, ಕರಾವಳಿಯಲ್ಲಿ ಕಾಂಗ್ರೆಸ್ ಸುನಾಮಿಗೆ ಸಿಕ್ಕ ಹಡಗಿನಂತಾಗಿದೆ. ಬಿಜೆಪಿಯ ಬಿರುಗಾಳಿ ಬೀಸಬೇಕಾಗಿಲ್ಲ, ಸಣ್ಣಗೊಂದು ಚಳಿಗಾಳಿ ಬೀಸಿದರೆ ಸಾಕು, ಹಾಗಾಗಿದೆ.

ಕರಾವಳಿಯಲ್ಲಿ ಇಂದಿಗೂ ಕಾಂಗ್ರೆಸ್ ಅನ್ನು ಪ್ರೀತಿಸುವ ಅನೇಕ ಹಿರಿಯ ಮತದಾರರಿದ್ದಾರೆ. ಅವರೆಲ್ಲರೂ ಪೂಜಾರಿ ಸಾಲ ಮೇಳ, ಆಸ್ಕರ್ ಅವರ ಆತ್ಮೀಯತೆಯ ಮಾತು, ಮೊಯ್ಲಿಯವರ ಸರಳತೆ ಮೆಚ್ಚಿ ಕಾಂಗ್ರೆಸ್ ಗೆ ಮತ ಹಾಕುತ್ತಾರೆ.

ಆಗಿನ ನಾಯಕರು ಮನೆ ಮನೆಗೆ, ಗ್ರಾಮ ಗ್ರಾಮಕ್ಕೆ ಭೇಟಿ ಕೊಡುತ್ತಿದ್ದರು. ಈಗ ಖಾದರ್ ಒಬ್ಬರನ್ನು ಬಿಟ್ಟರೆ ಮತ್ಯಾರಿಗೂ ಮತದಾರನ ಸಂಪರ್ಕವೇ ಇಲ್ಲ. ಎಲ್ಲವನ್ನೂ ತುಂಡು ನಾಯಕರು ನಿಭಾಯಿಸುತ್ತಿದ್ದಾರೆ. ಅದರೊಂದಿಗೆ ಹಿರಿಯ ನಾಯಕರ ಫೋಟೋ ಮಾಯವಾಯ್ತು ಅಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ನ ಮಾನ ಉಳಿಸಲು ಖಾದರ್ ಒಬ್ಬರೇ ಗತಿ.

ಇನ್ನಾದರೂ ಕರಾವಳಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹಿರಿಯ ನಾಯಕರ, ಜಿಲ್ಲಾ ಮುಖಂಡರ ಫೋಟೋ ಗಳನ್ನು ಹಾಕುವುದನ್ನು ಕಾಂಗ್ರೆಸ್ ಮಂದಿ ಕಲಿತರೆ ಒಳಿತು. ಇಲ್ಲವಾದರೆ ನಳಿನಿ ಹಠಾವೋ ಅನ್ನುವ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಹೋರಾಟದಲ್ಲಿ ಕಾಂಗ್ರೆಸ್ ಕೂಡಾ ಮಾಯವಾಗುತ್ತದೆ.

Advertisements

One Comment on “ಕರಾವಳಿ ಕೈ ನಾಯಕರನ್ನು ಸೈಲೆಂಟ್ ಆಗಿ ಸೈಡಿಗೆ ಸರಿಸಿದ ಕೆಪಿಸಿಸಿ

  1. Pingback: ಶಪಥ ಮುರಿದ ಜನಾರ್ಧನ ಪೂಜಾರಿ : ಕುದ್ರೋಳಿ ದೇವಸ್ಥಾನ ಪ್ರವೇಶ – torrentspree

Leave a Reply

%d bloggers like this: