Advertisements

ಕುಮಾರಸ್ವಾಮಿ ಸರ್ಕಾರದಲ್ಲಿ ಶಿವರಾತ್ರಿ ಆಚರಣೆಗೂ ಕಂಟಕ : ಜಾಗರಣೆ ವೇಳೆ ಯಕ್ಷಗಾನ ಭಜನೆ ನಿಲ್ಲಿಸಿದ ಪೊಲೀಸರು

ಕರಾವಳಿ ಭಾಗದಲ್ಲಿ ಯಕ್ಷಗಾನ, ಭಜನೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಶಿವರಾತ್ರಿ ಸಂದರ್ಭದಲ್ಲಿ ಕರಾವಳಿಯ ಶಿವ ದೇವಸ್ಥಾನಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಕರಾವಳಿಯ ಸಂಭ್ರಮ ಒಂದು ಹೆಜ್ಜೆ ಮುಂದೆ ಅನ್ನಬಹುದು.

ಆದರೆ ಈ ಬಾರಿಯ ಶಿವರಾತ್ರಿ ದಿನ ನಡೆದ ಘಟನೆಗಳನ್ನು ನೋಡಿದರೆ ಇನ್ನು ಮುಂದೆ ಕರಾವಳಿಯಲ್ಲಿ ಶಿವರಾತ್ರಿ ಆಚರಿಸೋದು ಕಷ್ಟ. ಆಚರಿಸಬೇಕಾದರೂ ಪೊಲೀಸರಿಂದ ಅನುಮತಿ ಪಡೆಯಬೇಕಾಗಬಹುದು. ಅವರು ಅನುಮತಿ ಇಲ್ಲ ಅಂದು ಬಿಟ್ಟರೆ ಹಗಲು ಹೊತ್ತಿನಲ್ಲೇ ಶಿವ ಜಾಗರಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ.

ಮಂಗಳೂರು ಹೊರವಲಯದಲ್ಲಿರುವ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಶಿವರಾತ್ರಿ ಜಾಗರಣೆಯನ್ನು ಆಯೋಜಿಸಲಾಗಿತ್ತು. ಭಕ್ತರ ಜಾಗರಣೆ ಸಲುವಾಗಿ ಯಕ್ಷಗಾನ,ಭಜನೆ ಕಾರ್ಯಕ್ರಮಗಳು ನಿಗದಿಯಾಗಿತ್ತು. ಕೊಲ್ಲಂಗಾನ ಯಕ್ಷಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನ ಆಯೋಜನೆಗೊಂಡಿತ್ತು.

ಸರಿ ಸುಮಾರು ರಾತ್ರಿ 10.30ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಬಂದ ಕಾವೂರು ಪೊಲೀಸ್ ಠಾಣೆ ಸಿಬ್ಬಂದಿ, ನಿಮ್ಮ ಭಜನಾ ಕಾರ್ಯಕ್ರಮದಿಂದ ತೊಂದರೆಯಾಗುತ್ತಿದೆ. ತಕ್ಷಣ ಕಾರ್ಯಕ್ರಮ ನಿಲ್ಲಿಸಿ ಅಂದಿದ್ದಾರೆ. ಇದು ಪ್ರತೀ ವರ್ಷದ ಆಚರಣೆ ನಿಲ್ಲಿಸಲಾಗದು ಎಂದು ಸಂಘಟಕರು ಉತ್ತರಿಸಿದ್ದಾರೆ. ಬಳಿಕ ಯಕ್ಷಗಾನ ನಡೆಯುತ್ತಿದ್ದ ಕಡೆಗೆ ತೆರಳಿದ ಪೊಲೀಸರು ಧ್ವನಿವರ್ಧಕ ಧ್ವನಿ ಮಟ್ಟವನ್ನು ತೀರಾ ಕಡಿಮೆ ಮಾಡಿದ್ದಾರೆ.

ಇದಕ್ಕೆ ಪ್ರೇಕ್ಷಕರು ಹಾಗೂ ಆಸ್ತಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಪೊಲೀಸರು ಮತ್ತು ಭಕ್ತಾದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀನಿವಾಸಗೌಡ ಸ್ಥಳಕ್ಕೆ ಯಕ್ಷಗಾನವನ್ನು ಡಿಜೆಗೆ ಹೋಲಿಸಿದರು. ಇದು ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.

ಕೊನೆಗೆ ಸ್ಥಳಕ್ಕೆ ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ  ಆಗಮಿಸಿದರು. ಅವರ ಮಾತಿಗೂ ಪೊಲೀಸರು ಜಗ್ಗಲಿಲ್ಲ. ಕೊನೆಗೆ ಪಾಲಿಕೆ ಸದಸ್ಯರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಗೆ ಕರೆ ಮಾಡಿ ವಿಷಯ ತಿಳಿಸಿದರು.ಮಂಗಳೂರು ಆಯುಕ್ತರಿಗೆ ಕರೆ ಮಾಡಿದ ಸಚಿವರು ಕಾರ್ಯಕ್ರಮ ಮುಂದುವರಿಸುವಂತೆ ಸೂಚಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿಯವರು ಠಾಣೆಗೆ ಫೋನ್ ಮಾಡಿ ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅರುಣ್ ಚಕ್ರವರ್ತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಇದು ಸತ್ಯವೇ ಆಗಿದ್ದರೆ, ನಾಳೆಯಿಂದ ನಿದ್ದೆ ಹಾಳಾಗುತ್ತದೆ ಎಂದು ರಾತ್ರಿಯ ರೈಲು ಓಡಾಟ, ರಾತ್ರಿಯ ಸಮುದ್ರದ ತೆರೆ ಹೀಗೆ ಅನೇಕ ವಿಷಯಗಳಿಗೆ ಬ್ರೇಕ್ ಹಾಕಬೇಕಾಗಿ ಬರಬಹುದು.

ಇನ್ನು ಪಾಂಡೇಶ್ವರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು, ಅಲ್ಲಿಗೂ ತೆರಳಿದ ಪೊಲೀಸರು ಧ್ವನಿವರ್ಧಕದ ಶಬ್ಧ ಪ್ರಮಾಣ ಇಳಿಸಿ ಕಿರಿ ಕಿರಿ ಮಾಡಿದ್ದಾರೆ. ಶಕ್ತಿನಗರದಲ್ಲೂ ಶಿವರಾತ್ರಿ ನಡೆಯುತ್ತಿದ್ದ ಭಜನೆಯನ್ನು ನಿಲ್ಲಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ.

ಈ ಕೆಲಸವನ್ನು ಪೊಲೀಸರು ಮಾಡಿರಬಹುದು. ಆದರೆ ಆಸ್ತಿಕರಿಗೆ ಆಗಿರುವ ನೋವಿನ ಜವಾಬ್ದಾರಿಯನ್ನು ರಾಜ್ಯದ ಮುಖ್ಯಮಂತ್ರಿಯೇ ಹೊರಬೇಕು. ರಾಜ್ಯದ ದೊರೆಯಾದಿ ಪ್ರಜೆಗಳ ಹಿತ ಕಾಪಾಡುವುದು ಮುಖ್ಯಮಂತ್ರಿಗಳ ಜವಾಬ್ಜಾರಿ. ಹಾಗಂತ ಇದು ಸಿಎಂ ಕುಮ್ಮಕ್ಕಿನಿಂದ ನಡೆದಿರುವ ಕಾರ್ಯವಲ್ಲ, ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸಾಕಷ್ಟು ದೈವ ಭಕ್ತಿಯನ್ನು ಹೊಂದಿದೆ. ಪೂಜೆ,ವೃತದಲ್ಲಿ ಸಾಕಷ್ಟು ಪ್ರೀತಿಯನ್ನು ಹೊಂದಿದ್ದಾರೆ.

ಅಂದ ಮೇಲೆ ಕರಾವಳಿಯ ಕಲೆಗೆ ಕಂಟಕರಾದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ತಾನೇ. ದರ್ಪ ತೋರಿದ ಅಧಿಕಾರಿಗಳನ್ನು ನೀರಿಲ್ಲದ ಜಾಗಕ್ಕೆ ವರ್ಗಾವಣೆ ಮಾಡಿಸಿ ಪಾಠ ಕಲಿಸದಿದ್ದರೆ, ರಾಜ್ಯದ ಜನ ದರ್ಪ ತೋರಿದ ಅಧಿಕಾರಿ ಮೇಲೆ ತಿರುಗಿ ಬೀಳುವುದಿಲ್ಲ. ದೊರೆಯ ಮೇಲೆ ತಿರುಗಿ ಬೀಳುತ್ತಾರೆ.

Advertisements

Leave a Reply

%d bloggers like this: