Advertisements

ಸದನ ಕಲಾಪದಲ್ಲಿ ರೇಪ್ ವಿಚಾರ : ಮಾಧ್ಯಮಗಳ ಮಸಾಲೆ ಕಸಿದ ಸ್ಪೀಕರ್

ನಿನ್ನೆ ಸದನ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ಹೋಲಿಸಿಕೊಂಡಿದ್ದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತ್ತು. ಮಹಿಳಾ ಶಾಸಕಿಯರು ಕೂಡಾ ಚಕಾರವೆತ್ತಿರಲಿಲ್ಲ.

ಇಂದು ಮಾಧ್ಯಮಗಳನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು ( ಕೆಲವರು ಪೂರ್ತಿ ವರದಿಯನ್ನೇ ತಿರುಚಿದ್ದರು). ಶಾಸಕಿಯರ ಅಭಿಪ್ರಾಯ ಕೇಳಬೇಕಾಗಿದ್ದ ಮಾಧ್ಯಮಗಳು ನೀವು ಸೈಲೆಂಟ್ ಆಗಿದ್ದು ಯಾಕೆ, ನೀವು ಯಾಕೆ ವಿರೋಧಿಸಲಿಲ್ಲ, ವಿರೋಧಿಸಬೇಕಿತ್ತಲ್ವ ಎಂದು ತಮ್ಮ ಅಭಿಪ್ರಾಯವನ್ನು ಶಾಸಕಿಯರ ಮೇಲೆ ಹೇರಿತ್ತು.

ಎಲ್ಲರೂ ಸೇರಿಕೊಂಡು ರೇಪ್ ಮಾಡ್ತಿದ್ದೀರಿ : ಸ್ಪೀಕರ್ ರಮೇಶ್ ಕುಮಾರ್

ಇದರಿಂದ ಕಿರಿಕಿರಿಗೆ ಒಳಗಾದ ಶಾಸಕಿಯರು ಇಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಮನವಿಯೊಂದನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಪ್ರಕಟಿಸಿರುವ ರಮೇಶ್ ಕುಮಾರ್ ನಿನ್ನೆಯ ಮಾತುಕತೆ ಹಾಗೂ ಮುಂದಿನ ಕ್ರಮದ ಕುರಿತಂತೆ ಮಾತನಾಡಿದ್ದಾರೆ.

“ ಅನಿತಾ ಕುಮಾರಸ್ವಾಮಿ ಅಂಜಲಿ ನಿಂಬಾಳ್ಕರ್, ರೂಪಕಲಾ ಶಶಿಧರ್, ಲಕ್ಷ್ಮಿ ಹೆಬ್ಬಾಳ್ಕರ್ ಖನೇಜ್ ಫಾತಿಮಾ, ಸೌಮ್ಯ ರೆಡ್ಡಿ, ವಿನಿಶಾ ನಿರೋ ಇವರುಗಳು ನನ್ನ ಕಚೇರಿಯಲ್ಲಿ ಭೇಟಿ ಮಾಡಿ ನಿನ್ನೆ ಸಭೆಯ ಕಲಾಪ ನಡೆಯುವ ವೇಳೆಗೆ, ನಾನು ಸಾಂದರ್ಭಿಕವಾಗಿ, ಒಬ್ಬ ರೇಪ್ ವಿಕ್ಟಿಮ್ ಪರಿಸ್ಥಿತಿ ಏನಾಗುತ್ತೆ. ರೇಪ್ ಆಗುವುದಕ್ಕಿಂತಲೂ ವಿಚಾರಣೆ ವೇಳೆ ಹೆಚ್ಚು ಅಪಮಾನವಾಗುತ್ತದೆ.

ಯಾವುದೇ ಉದ್ದೇಶಕ್ಕೆ ಕಾನೂನು ಮಾಡಿರುತ್ತೇವೆ, ಆ ಉದ್ದೇಶನೇ ಹಾರಿ ಹೋಗುತ್ತೆ ಅಂತಾ ಹೇಳಿದೆ. ಆ ಸಂದರ್ಭದಲ್ಲಿ ಅದನ್ನ ನಕ್ಕು ಬಿಟ್ಟಿದ್ದಾರೆ. ಕೆಲವರು ಮಾಧ್ಯಮದವರು ಇದನ್ನ ಹೆಣ್ಣು ಮಕ್ಕಳಿಗೆ ಮಾಡಿದ ಅವಹೇಳನ ಅಂತಾ ಹೇಳಿ, ಎರಡು ದಿವಸದಿಂದ ಅವರಿಗೆ ಏನು ಮಸಾಲೆ ಸಿಕ್ಕಿರಲಿಲ್ಲ. ಪಾಪ ಅವರು ಜೀವನ ಮಾಡಬೇಕಲ್ವ. ಸೋ ಇದನ್ನು ಹಿಡಿದುಕೊಂಡಿದ್ದಾರೆ.

ಈ ಹೆಣ್ಣು ಮಕ್ಕಳು ನಮ್ಮ ಬಳಿ ಬಂದು ನಾವೆಲ್ಲಾ ಗೌರವದಿಂದ ಸದನದಲ್ಲಿ ನಡೆದುಕೊಳ್ಳುತ್ತಿದ್ದೇವೆ. ಸದನದ ಕಲಾಪದ ಬಗ್ಗೆ ಆಸಕ್ತಿ ಇದೆ. ನಮ್ಮನ್ನು ಚುಚ್ಚಿ ಚುಚ್ಚಿ ಕೇಳ್ತಾರೆ, ನೀವೆಲ್ಲಾ ಇದ್ರಿ ಅವರೆಲ್ಲಾ ನಗ್ತಾ ಇದ್ರು ಅಂತಾ ಕೇಳ್ತಾರೆ. ಅವರ ಸೆಂಟಿಮೆಂಟ್ ನನಗೆ ಅರ್ಥವಾಗುತ್ತೆ.

ಅಲ್ ಮೋಸ್ಟ್ ಎಲ್ಲರೂ ಕೂಡಾ ಅನಿತಾ ಕುಮಾರಸ್ವಾಮಿಯವರನ್ನು ಹೊರತುಪಡಿಸಿದ್ರೆ ಉಳಿದವರೆಲ್ಲಾ ಫಸ್ಟ್ ಟೈಮ್ ಬಂದಿದ್ದಾರೆ.

ಹೆಣ್ಣು ಮಕ್ಕಳ ಮನಸ್ಸು ನೋಯಿಸುವುದು ನನ್ನ ಉದ್ದೇಶವಲ್ಲ. ಹಾಗಿದ್ದ ಮೇಲೆ ನನ್ನ ತಾಯಿ ಉದಾಹರಣೆ ಯಾಕೆ ಹೇಳುತ್ತಿದ್ದೆ. ತಣ್ಣೀರನ್ನು ಆರಿಸಿ ಕುಡಿಯುವ ಪರಿಸ್ಥಿತಿಯ ಸಮಾಜದಲ್ಲಿ ನಾವಿದ್ದೇವೆ.

ಮಾಧ್ಯಮಗಳ ಕೈಗೆ ಸಿಕ್ಕಿ ಬಿದ್ರೆ ಕಷ್ಟ. ಪಾಸಿಯಿಂದ ಪಾರಾಗಬಹುದು, ಆದರೆ ಮಾಧ್ಯಮಗಳಿಂದ ಸಾಧ್ಯವಿಲ್ಲ. ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬೇಡ, ಮಸಾಲೆ ಖಾಲಿ ಮಾಡೋಣ ಅಂತಾ ಹೇಳಿ ನಾನು ನನ್ನ ಕಾರ್ಯಾಲಯಕ್ಕೆ ಆದೇಶಿಸುತ್ತಿದ್ದೇನೆ, ನಿನ್ನೆ ಈ ಬಗ್ಗೆ ಏನು ಮಾತುಗಳು ಬಂದಿದೆ ಎಲ್ಲವನ್ನೂ ರೆಕಾರ್ಡ್ ನಿಂದ ತೆಗೆದು ಬಿಡಿ”

ಜೊತೆಗೆ ಯಾರಿಗೆಲ್ಲಾ ನೋವಾಗಿದ್ದರೆ ಅದಕ್ಕೂ ಕ್ಷಮೆ ಯಾಚಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್, ಇದೇ ವಿಷಯದಲ್ಲಿ ಇನ್ನೆರಡು ದಿನ ಉಜ್ಜಾಡೋಣ ಅಂದುಕೊಂಡಿದ್ದ ಮಾಧ್ಯಮಗಳ ಕೈಯಿಂದ ಮಸಾಲೆ ಕಿತ್ತುಕೊಂಡಿದ್ದಾರೆ.

ನಾಳೆ ಅದ್ಯಾವ ಮಾಧ್ಯಮ ‘ಫಲಶೃತಿ’ ಎಂದು ಬರೆದುಕೊಳ್ಳುತ್ತದೋ ಗೊತ್ತಿಲ್ಲ.

Advertisements

Leave a Reply

%d bloggers like this: