ದಿವಂಗತ ಡಿಕೆ ರವಿ ಜೀವನದ ಕಥೆಯನ್ನು ಹೊಂದಿದೆ ಎನ್ನಲಾದ ನೀನಾಸಂ ಸತೀಶ್ ನಟನೆಯ ‘ಚಂಬಲ್’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಚಿತ್ರದ ವಿರುದ್ಧ ದಿ. ಡಿಕೆ ರವಿ ತಾಯಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ನನ್ನ ಮಗನ ಜೀವನ ಕಥೆಯನ್ನು ಚಂಬಲ್ ಸಿನಿಮಾದಲ್ಲಿ ಬಳಸಲಾಗಿದೆ. ಈ ಕುರಿತು ಕುಟುಂಬದ ಸದಸ್ಯರ ಕಡೆಯಿಂದ ಚಿತ್ರತಂಡ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಬಿಡುಗಡೆಗೆ ಮುನ್ನ ನನಗೆ ಸಿನಿಮಾ ತೋರಿಸಬೇಕು. ಒಂದು ವೇಳೆ ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ರೆ ದೂರು ಕೊಡಲು ಸಿದ್ಧಳಾಗಿದ್ದೇನೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ…?
ಮಾನ್ಯರೇ,
ದಿವಂಗತ ಡಿ ಕೆ ರವಿ ಅವರ ತಾಯಿ
ಗೌರಮ್ಮನಾದ ನಾನು ನಿಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಇತ್ತೀಚೆಗೆ
ಬಿಡುಗಡೆಯಾದ ಚಂಬಲ್ ಟ್ರೇಲರ್ ನಲ್ಲಿ ನನ್ನ ಮಗನ ಕಥೆ, ಸಂಭಾಷಣೆ
ಹಾಗು ಜೀವನ ಶೈಲಿಯನ್ನು ನಮ್ಮ ಅನುಮತಿ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಆದ ಕಾರಣ ಈ ಚಿತ್ರ
ಬಿಡುಗಡೆಯ ಮುನ್ನ ಒಮ್ಮೆ ವೀಕ್ಷಿಸಲು ಇಚ್ಛಿಸುತ್ತೇನೆ. ಚಿತ್ರದಲ್ಲಿ ಸತ್ಯಕ್ಕೆ ದೂರವಾದ
ಅಂಶಗಳಿದ್ದಲ್ಲಿ ಚಿತ್ರಕ್ಕೆ ತಡೆತರುವ ಬಗ್ಗೆ ಮತ್ತು ಸರಿಯಿಲ್ಲದಿದ್ದಲ್ಲಿ ಚಿತ್ರದ ನಿರ್ಮಾಪಕರು
(ಎನ್ ದಿನೇಶ್ ರಾಜಕುಮಾರ್ ಮತ್ತು ಮಾಥ್ಯೂ ವರ್ಗಿಸ್) ಹಾಗು ನಿರ್ದೇಶಕರು (ಜೇಕಬ್ ವರ್ಗಿಸ್) ಆದ
ಇವರ ವಿರುದ್ಧ ಕಾನೂನು ಕ್ರಮಕೈಗೊಂಡು ಕುಟುಂಬಸ್ಥರಿಗೆ ರಾಯಲ್ಟಿ ಪಾವತಿಸಬೇಕಾಗಿ ಕೋರುತ್ತಿದ್ದೇನೆ.
ತಮ್ಮ ವಿಶ್ವಾಸಿ,
ಗೌರಮ್ಮ