Advertisements

ಮಂಡ್ಯಕ್ಕೆ ಸುಮಲತಾ ಕೊಡುಗೆಯೇನು – ಸಿಎಂ ಪ್ರಶ್ನೆ..? ಪತ್ನಿ ಮತ್ತು ಪುತ್ರನ ಕೊಡುಗೆಯೇನು ಕುಮಾರಸ್ವಾಮಿಗಳೇ..?

ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಇದೀಗ ಜೆಡಿಎಸ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಣ್ಣಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರೆ, ಜೆಡಿಎಸ್ ನಾಯಕರು ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ.

ಒಂದು ನಿಟ್ಟಿನಲ್ಲಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಿದ್ದಾರೆ ಅನ್ನುವುದು ಸ್ಪಷ್ಟ. ಕಾಂಗ್ರೆಸ್ ಅನ್ನು ದೂರವಿಡಬೇಕು ಎಂದು ಜೆಡಿಎಸ್ ಬೆಂಬಲಿಸಿದ್ದ ಮತದಾರರು, ಸಮ್ಮಿಶ್ರ ಸರ್ಕಾರ ರಚನೆಯಾದ ವೇಳೆ ಕೋಪಗೊಂಡಿದ್ದರು. ಇದೀಗ ಅಂಬರೀಶ್ ಮತ್ತು ಸುಮಲತಾ ವಿಚಾರದಲ್ಲಿ ಜೆಡಿಎಸ್ ನಾಯಕರು ಆಡುತ್ತಿರುವ ಮಾತುಗಳು ಈ ಭಾಗದ ಮತದಾರರನ್ನು ಮತ್ತೆ ಕೆಣಕುವಂತೆ ಮಾಡಿದೆ.

ಸುಮಲತಾ ಅವರಿಗೆ ಎಲ್ಲಿ ಸಹಾನೂಭೂತಿಯ ಅಲೆ ಸಹಾಯ ಮಾಡುತ್ತದೋ ಅನ್ನುವ ಆತಂಕದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರು ಸುಮಲತಾ ಮಂಡ್ಯದ ಗೌಡ್ತಿಯೇ ಅಲ್ಲ ಅಂದಿದ್ದಾರೆ. ಅಲ್ಲಿಗೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಧೂಳಿಪಟವಾಗಲು ಮುನ್ನುಡಿ ಬರೆದಿದ್ದಾರೆ.

ಈ ನಡುವೆ ಮಂಡ್ಯ ಲೋಕಸಭೆ ಕ್ಷೇತ್ರದಿಂದು ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ, ಆಕೆಯ ಪತಿ ಅಂಬರೀಷ್ ಅವರ ನಿಧನದಿಂದ ಅನುಕಂಪದ ಅಲೆಯ ಲಾಭ ಪಡೆಯಲು ಅವರು ಯತ್ನಿಸುತ್ತಿದ್ದಾರೆ. ಇದೊಂದು ಭಾವನಾತ್ಮಕ ವಿಷಯ ಎಂದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಜೆಡಿಎಸ್ ಸಿದ್ಧತೆ ನಡೆಸಿತ್ತು, ಆದರೆ ಸುಮಲತಾ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವಿಷಯದಿಂದಾಗಿ ಜೆಡಿಎಸ್  ಎಲ್ಲಾ ಪ್ಲಾನ್ ಉಲ್ಟಾ ಹೊಡೆದಿದೆ. ಹೀಗಾಗಿ ಇಂತಹ ಹೇಳಿಕೆಗಳು ಹೊರ ಬರುತ್ತಿದೆ.

ಸರಿ ಕುಮಾರಸ್ವಾಮಿ ಹೇಳಿದಂತೆ ಮಂಡ್ಯಕ್ಕೆ ಕ್ಷೇತ್ರಕ್ಕೆ ಸುಮಲತಾ ಅವರಿಂದ ನಯಾ ಪೈಸೆಯ ಕೊಡುಗೆ ಸಿಕ್ಕಿಲ್ಲ,ಅಂದ ಮೇಲೆ ನಿಖಿಲ್ ಕುಮಾರಸ್ವಾಮಿಯಿಂದ ಮಂಡ್ಯಕ್ಕೆ ಸಿಕ್ಕಿದ್ದೇನು, ಸೀತಾರಾಮ ಕಲ್ಯಾಣದ ಬಿಟ್ಟಿ ಟಿಕೆಟ್ ಬಿಟ್ಟರೆ ಮತ್ತೇನೂ ಸಿಕ್ಕಿಲ್ಲ.

ಇನ್ನು ಅನಿತಾ ಕುಮಾರಸ್ವಾಮಿ ಕಡೆಯಿಂದ ರಾಮನಗರಕ್ಕೆ ಸಿಕ್ಕಿದ್ದೇನು. ನೀವು ರಾಜೀನಾಮೆ ಕೊಟ್ಟ ಕಾರಣಕ್ಕೆ ಅವರು ಅಲ್ಲಿ ನಿಲ್ಲಬೇಕಾಯ್ತು. ಬದಲಾಗಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಿತ್ತು ತಾನೇ.

ಬಿಎಂ ಫಾರೂಕ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೀರಿ, ಮಂಗಳೂರಿಗೆ ಅವರ ಕೊಡುಗೆಯೇನಿದೆ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಹಾಗಾದರೆ ಸುಮಲತಾ ಸ್ಪರ್ಧೆಯಿಂದ ಜೆಡಿಎಸ್ ಭಯಪಡುವುದ್ಯಾಕೆ ಗೊತ್ತಾ. ಕಾರಣವಿದೆ.

ಮಂಡ್ಯ ಜಿಲ್ಲೆಯ 1,030 ಗ್ರಾಮಗಳ ಪೈಕಿ 916 ಗ್ರಾಮಗಳಲ್ಲಿ ಅಂಬರೀಷ್  ಅಭಿಮಾನಿ ಸಂಘಗಳಿವೆ. ಸುಮಲತಾ ಅವರು ಕಣಕ್ಕಿಳಿದರೆ ಇವರೆಲ್ಲರೂ ಕಣ್ಣು ಮುಚ್ಚಿ ಗೆಲ್ಲಿಸುತ್ತಾರೆ. ಚಂದನವನ ಕೂಡಾ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತದೆ. ಹೀಗಾದರೆ ನಿಖಿಲ್ ರಾಜಕೀಯ ಭವಿಷ್ಯ ಮಂಕಾಗುತ್ತದೆ. ಮಂಡ್ಯ ಹೊರತುಪಡಿಸಿದರೆ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಕ್ಷೇತ್ರ ಬೇರೆ ಯಾವುದೂ ಕೂಡಾ ಇಲ್ಲ.

ಸರಿಯಪ್ಪ ಉತ್ತರ ಕರ್ನಾಟಕದ ಯಾವುದಾದರೂ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಗೆಲ್ಲಲಿ. ಅದು ನಿಜವಾದ ತಾಕತ್ತು, ಛಾಲೆಂಜ್.

Advertisements

Leave a Reply

%d bloggers like this: