Advertisements

ಜಾರಿಯಾಗದ ಯೋಜನೆ ನಿಮ್ಮದಾಗಲು ಹೇಗೆ ಸಾಧ್ಯ ಸಿದ್ರಾಮಣ್ಣ…?

ನರೇಂದ್ರ ಮೋದಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಸಣ್ಣ ವರ್ಗದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ ಎರಡು ಸಾವಿರ ರೂ.ನಂತೆ ವರ್ಷಕ್ಕೆ ಆರು ಸಾವಿರ ರೂ. ನೀಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ರಾಷ್ಟ್ರದ ಗಮನ ಸೆಳೆದಿದೆ. ಕಾಂಗ್ರೆಸ್ ಇದನ್ನು ದಿನಕ್ಕೆ 17 ರೂಪಾಯಿ ಎಂದು ಟೀಕಿಸಿದೆ. ಆದರೆ ದೇಶದ ರೈತ ವರ್ಗ ಈ ಯೋಜನೆಯನ್ನು ಸ್ವಾಗತಿಸಿದೆ.

ಈ ನಡುವೆ ಸಿದ್ದರಾಮಯ್ಯ ಇದೇ ವಿಚಾರದಲ್ಲಿ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಕರ್ನಾಟಕ ಸರ್ಕಾರ ಘೋಷಿಸಿದ ರೈತ ಬೆಳಕು ಯೋಜನೆಯ ನಕಲು ಅಂದಿದ್ದಾರೆ.

ಅರೇ ನೀವು ಬಜೆಟ್ ನಲ್ಲಿ ರೈತ ಬೆಳಕು ಯೋಜನೆ ಘೋಷಣೆ ಮಾಡಿದ್ದು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಜನ ತವರು ನೆಲದಲ್ಲಿ ಸೋಲಿಸಿದರು, ಕುಮಾರಸ್ವಾಮಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅನ್ನು ಸೈಡಿಗಿಟ್ಟು ಮತ್ತೊಮ್ಮೆ ಸೋಲಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹೊಸದಾಗಿ ಬಜೆಟ್ ಮಂಡಿಸಿದ ಸಿಎಂ, ಕುಮಾರಸ್ವಾಮಿ, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಯೋಜನೆ ಮುಂದುವರಿಸಲಾಗುವುದು ಎಂದಿದ್ದರು. ಆದರೆ ಅದು ಬರೀ ಮಾತಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ ರೈತ ಬೆಳಕು ಅನ್ನುವ ಯೋಜನೆಯೂ ಬಜೆಟ್ ಪುಸ್ತಕದಲ್ಲಿದೆ.

ಒಂದು ವೇಳೆ ರೈತ ಬೆಳಕು ಯೋಜನೆ ಜಾರಿಯಾಗಿದ್ದರೆ, ಕಿಸಾನ್‌ ಸಮ್ಮಾನ್‌ ಯೋಜನೆ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ಗೆ ಅದ್ಭುತ ಅವಕಾಶವಿತ್ತು. ಆದರೆ ಅದಕ್ಕೆ ಸಮ್ಮಿಶ್ರ ಸರ್ಕಾರದ ನಾಯಕ ಕವಡೆ ಕಾಸಿನ ಕಿಮ್ಮತ್ತು ಕೊಡದ ಕಾರಣದಿಂದ ಕಾಂಗ್ರೆಸ್ ನಾಯಕರು ಕೈ ಕೈ ಹಿಸುಕುವಂತಾಗಿದೆ.

ಆದರೆ ಸಿದ್ದರಾಮಯ್ಯ ನನ್ನ ಯೋಜನೆಯನ್ನು ಮೋದಿ ಕಾಪಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಜಾರಿಯಾಗದ ಯೋಜನೆಯನ್ನು ತನ್ನದು ಅನ್ನುವುದು ಸಿದ್ದರಾಮಯ್ಯರಂತಹ ಹಿರಿಯ ರಾಜಕಾರಣಿಗೆ ಶೋಭೆಯಲ್ಲ.

ಏನಿದು ರೈತ ಬೆಳಕು..?

ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ಉದ್ದೇಶದಿಂದ ‘ರೈತ ಬೆಳಕು’ ಯೋಜನೆ ಘೋಷಿಸಲಾಗಿತ್ತು. ಅದರಡಿ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿವರ್ಷ ಗರಿಷ್ಠ 10 ಸಾವಿರ ರೂ. ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್‌ಗೆ 5 ಸಾವಿರ ರೂ. ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡುವುದು. 70 ಲಕ್ಷ ರೈತರು ಇದರ ಪ್ರಯೋಜನ ಪಡೆಯುವ ಅಂದಾಜು ಮಾಡಲಾಗಿತ್ತು.

ಮತ್ತೊಂದು ಮಜಾ ಕೇಳಿ, ಕಿಸಾನ್‌ ಸಮ್ಮಾನ್‌ ಯೋಜನೆ ದೊಡ್ಡದೊಂದು ಸುಳ್ಳು, ಇದು ಚುನಾವಣೆ ಸಲುವಾಗಿ ಘೋಷಿಸಿದ ಯೋಜನೆ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ರೈತ ಬೆಳಕು ಯೋಜನೆ ಘೋಷಿಸಿದ್ದು ಏನು…ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು.

Advertisements

Leave a Reply

%d bloggers like this: