Advertisements

ಸಿದ್ದರಾಮಯ್ಯ ಮುಂದೆ ಟೇಬಲ್ ಕುಟ್ಟಿದ್ರೆ ಹುಷಾರ್ :ಸಿದ್ದು ಬೆವರಿಳಿಸಿದ ತಾ.ಪಂ ಮಾಜಿ ಅಧ್ಯಕ್ಷೆ

ಬೆಳಗ್ಗೆ ಸಿಎಂ ಕುಮಾರಸ್ವಾಮಿ ಹಾಕಿದ ರಾಜೀನಾಮೆ ಬಾಂಬ್ ಸಿದ್ದರಾಮಯ್ಯ ಅವರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. ಇದೇ ಕಾರಣಕ್ಕಾಗಿ ಮೊದಲೇ ಸಿಡುಕು ಸ್ವಭಾವದ ಸಿದ್ದರಾಮಯ್ಯ ಮೈಸೂರಿನಲ್ಲಿ ತನ್ನದೇ ಪಕ್ಷದ ಕಾರ್ಯಕರ್ತೆಯೊಬ್ಬರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಅಬ್ಬರಿಸುವ ಪರಿ ನೋಡಿದರೆ ಇನ್ನೇನು ಮಹಿಳೆಗೆ ಕಪಾಳಮೋಕ್ಷ  ಬಾಕಿಯೊಂದು ಅನ್ನುವಂತಿತ್ತು.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೇಲೆ ದರ್ಪ ತೋರಿದ್ಧಾರೆ . ಕ್ಷೇತ್ರದ ಶಾಸಕರು ನಮ್ಮ ಕೈಗೆ ಸಿಗುವುದಿಲ್ಲ ಎಂದು ದೂರು ಹೇಳಿದ ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ಧಾರೆ.

ಮೈಸೂರಿನ ಟೀ. ನರಸೀಪರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್​ ಪವರ್​ ಎಕ್ಸ್​ಚೇಂಜ್​ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್​ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಶಾಸಕ ಡಾ. ಯತೀಂದ್ರ ನಮ್ಮ ಕೈಗೆ ಸಿಗುತ್ತಿಲ್ಲ, ಹಲವಾರು ಸಮಸ್ಯೆಗಳಿವೆ. ಆದರೆ ಹೇಳಿಕೊಳ್ಳಲು ಶಾಸಕರೇ ಕಾಣಸಿಗುತ್ತಿಲ್ಲ ಎಂದು ದೂರು ಹೇಳಿದರು. ಈ ವೇಳೆ ಕೋಪಗೊಂಡ ಸಿದ್ದರಾಮಯ್ಯ, ತಮ್ಮ ಮಗನನ್ನು ಸಮರ್ಥಿಸಿಕೊಳ್ಳಲು ಮಹಿಳೆ ಕೈಯಿಂದ ಮೈಕ್​ ಕಿತ್ತುಕೊಂಡು ದರ್ಪ ತೋರಿದ್ದಾರೆ.

ಸಿದ್ದು – ಮಹಿಳೆ ಮಧ್ಯೆ ನಡೆದ ಮಾತುಗಳೇನು?

ಜಮಾಲಾರ್‌ : ಇಲ್ಲಿ ಕರೆಂಟ್ ಮೀಟರ್ ಹಾಕಿದ್ದಾರೆ. ಆಫ್ ಮಾಡಿದ್ರೂ ಕರೆಂಟ್ ಚಾರ್ಜ್ ಆಗ್ತಾ ಇದೆ. ಅಂದ್ರೆ ವಿದ್ಯುತ್‌ ಸೋರಿಕೆಯಾಗ್ತಿದೆ. ಅಲ್ಲೇ ಓಡಾಡೋ ಜನರಿಗೆ ಹೆಚ್ಚು ಕಡಿಮೆ ಆದ್ರೆ ಏನ್ ಕತೆ? ನೀವೇನೋ ಪರಿಹಾರ ಕೊಟ್ಟು ಬಿಡ್ತೀರಾ ಅಷ್ಟೆ. ದಯವಿಟ್ಟು ಸಾಹೇಬ್ರಿಗೆ ಹೇಳ್ತಿದ್ದೀನಿ, ನಿಮ್ಮ ಮನೆಯವರು, ಮಕ್ಕಳು ಅಂತಾ ಅದನ್ನ ಸರಿ ಮಾಡಿಕೊಡಿ.

ಇನ್ನು ಟ್ರೆಸರಿಗೆ ಹೋದ್ರೆ, ವಯಸ್ಸಾದವರು ಮೂರು ತಿಂಗಳಿಂದ ಪಿಂಚಣಿ ಬಂದಿಲ್ಲ ಅಂತಾ ಹೋದ್ರೆ ‘ಹೋಗಮ್ಮ’ ಬರುತ್ತೆ ಅಂತಾರೆ. ಏನು ನಾವು ಜೀತದಾಳಾ? 8 ತಿಂಗಳಿಂದ ಹೋಗ್ತಾ ಇದ್ದೀನಿ. ನಾನು ಮಾಜಿ ತಾ.ಪಂ. ಉಪಾಧ್ಯಕ್ಷೆ. ಆದ್ರೂ ಕೆಲಸ ಮಾಡಿಸಿಕೊಡಲಾಗ್ತಿಲ್ಲ. ಅಸಿಸ್ಟೆಂಟ್ ತಹಶೀಲ್ದಾರ್‌ ಅಂತೂ ಒಂದು ಸೈನ್‌ಗೆ ಗೋಳಾಡಿಸ್ತಾರೆ.

ಏನೋ… ಚಿಕ್ಕ ಬಾಯಲ್ಲಿ ದೊಡ್ಡ ಮಾತಾಡಿಬಿಟ್ಟಿದ್ದೀನಿ, ರೆವಿನ್ಯೂ ಡಿಪಾರ್ಟ್‌ಮೆಂಟ್‌ಗೆ ಬುದ್ಧಿ ಕಲಿಸಿ. ಹಾಗೇನೇ ನಮ್ಮೂರು ಗರ್ಗೇಶ್ವರಿಗೆ ಕುಡಿಯುವ ನೀರು ಬೇಕು.

ಅಷ್ಟರಲ್ಲೇ ಮಧ್ಯೆ ಬಾಯಿ ಹಾಕಿದ ಕೆಲವರು, ಮಹಿಳೆಯನ್ನು ಸುಮ್ಮನಿರಿಸಲು ಮುಂದಾಗಿದ್ದಾರೆ.

ಮತ್ತೆ ಮಾತು ಮುಂದುವರಿಸಿದ ಮಹಿಳೆ ‘ಸಾಹೇಬ್ರು ಇವತ್ತು ಸಿಕ್ಕಿದ್ದಾರೆ. ಎಲೆಕ್ಷನ್ ಟೈಮಲ್ಲಿ ಸಿಕ್ಕಿರೋದು’ ಅಂದಿದ್ದೇ ತಡ, ಅಲ್ಲೀವರೆಗೂ ತಾಳ್ಮೆಯಿಂದ ಎಲ್ಲವನ್ನೂ ಕೇಳ್ತಿದ್ದ ಸಿದ್ದರಾಮಯ್ಯರ ಬಿಪಿ ಮೀಟರ್ ಏರ ತೊಡಗಿತು.

‘ಯಾಕೆ, ಎಂಎಲ್‌ಎ ಸಿಕ್ಕಲ್ವೇನಮ್ಮಾ?’ ಅಂತಾ ಮಹಿಳೆಯನ್ನೇ ಪ್ರಶ್ನಿಸ್ತಾರೆ. ಆದ್ರೆ ಜಮಾಲಾರ್‌ ಮತ್ತೂ ಧ್ವನಿ ಏರಿಸಿ ಇಲ್ಲಾ ಸಾರ್ ಅಂದುಬಿಟ್ಟರು. ‘ಇಲ್ಲಾ ಸಾರ್, ಸಿಕ್ಕಲ್ಲಾ’ ಅಂಥಾ ಹೇಳ್ತಾ ಟೇಬಲ್ ಬೇರೆ ಕುಟ್ಟಿದರು.

ಅಷ್ಟೇ ಸಾಕು ಸಿದ್ದರಾಮಯ್ಯ ಪಿತ್ತ ನೆತ್ತಿಗೇರಿತು. ಮೈ ಮೇಲೆ ಅದೇನೋ ಶಕ್ತಿ ಪ್ರವಾಹಿಸಿತು ಅನ್ನುವಂತೆ ಎದ್ದು ನಿಂತವರು ಮಹಿಳೆಯ ಕೈಯಲ್ಲಿದ್ದ ಮೈಕನ್ನ ಕಿತ್ತುಕೊಳ್ಳಲು ಮುಂದಾಗಿಬಿಟ್ರು.

‘ಏಯ್‌, ಮೆಲ್ಲಗೆ ಮಾತಾಡು, ಬಿಡಿಲ್ಲಿ’ ಅಂತ ಮೈಕ್ ಕಿತ್ತುಕೊಂಡ ಸಿದ್ದರಾಮಯ್ಯ, ‘ಹೋಗಮ್ಮಾ ಆಚೆಗೆ, ನನ್ನೆದುರಿಗೇನೇ ಟೇಬಲ್ ಕುಟ್ಟುತ್ತೀಯಾ? ಕೂತ್ಕೋ ಅಲ್ಲಿ’ ಅಂತಾ ದಬಾಯಿಸಿದ್ದರು. ಮುಚ್ಚಮ್ಮಾ ಬಾಯಿನಾ, ಮಾತಾಡೋಕ್ಕೆ ಬಿಟ್ರೆ ಏನೇನೋ ಮಾತಾಡ್ತಾಳೆ. ಆ ಹುಡುಗ (ಯತೀಂದ್ರ) ಇಲ್ಲೇ ಬರ್ತಾ ಇರ್ತಾನೆ. ಹೋಗಿ ಹೇಳ್ಕೋಬೇಕು ನೀನು.

ಜಮಾಲಾರ್‌: ಸಾರ್ ಬರ್ತಾ ಇಲ್ಲ, ಎಂಎಲ್‌ಎ..

‘ಏಯ್… ನನಗೆ ಯಾವತ್ತಾದ್ರೂ ಬಂದು ಹೇಳಿದ್ದೀಯಾ? ಎಷ್ಟು ಸಲ ಬಂದಿದ್ದೀನಿ ನಾನು. ಪತ್ರ ಬರೆದಿಟ್ಟು ಬರಕ್ಕಾಗಲ್ಲ. ನಾನು ಬಂದಾಗ ಬರಬೇಕು ನೀನು’ ಹೀಗಂತ ಹೇಳಿದ ಸಿದ್ದರಾಮಯ್ಯ, ಮಹಿಳೆಯನ್ನ ಕಡೆಗೂ ತೆಪ್ಪಗಾಗಿಸಿದ್ರು. ನಂತರ ತಮ್ಮನ್ನ ತಾವೇ ಸಮಾಧಾನ ಪಡಿಸಿಕೊಂಡು ಮಾತಾಡೋಕ್ಕೆ ನಿಂತ್ರು.

ಸಿದ್ದರಾಮಯ್ಯ: ನೋಡಮ್ಮಾ, ಕಂಪ್ಲೇಂಟ್ ಮಾಡೋದು ಸರಿಯಾಗಿ ಮಾಡಬೇಕು. ಟೇಬಲ್ ತಟ್ಟುತ್ತೀಯಲ್ಲಾ. ಹೇಳೋದಕ್ಕೆ ರೀತಿ ಇರಬೇಕು ನೀನು. ಇಲ್ಲಿ ಟೇಬಲ್ ಕುಟ್ಟಿ ಮಾತಾಡೋದಲ್ಲ. ನನ್ನೆದುರಿಗೆ ಟೇಬಲ್ ಕುಟ್ಟಿ… ಏನೋ ದೇಶಕ್ಕೆ ಬಹಳ ಅನ್ಯಾಯ ಮಾಡಿಬಿಟ್ಟಿದ್ದೀವಿ ಅಂದ್ರೆ ಏನು? ನಿಮ್ಮೂರಿಗೆ ಕೆಲಸ ಮಾಡಿಸಿರೋದು ಯಾರಮ್ಮಾ?

ಸಿದ್ದರಾಮಯ್ಯ: ತಹಶೀಲ್ದಾರ್ ಕೆಲಸ ಮಾಡ್ತಿಲ್ಲ ಅಂದ್ರೆ ಹೇಳಬೇಕು. ಅಧಿಕಾರಿಗಳು ತಪ್ಪು ಮಾಡಿದ್ರೆ ಹೇಳಬೇಕು. ಇದು ಸಮ್ಮಿಶ್ರ ಸರ್ಕಾರ. ಅವರ ಅಧಿಕಾರಿಗಳನ್ನ ಹಾಕಿಸಿಕೊಂಡು ಬಿಟ್ಟಿರ್ತಾರೆ. ನೀನು ತಿಳ್ಕೋಬೇಕು. ಇದು ನಮ್ಮ ಸರ್ಕಾರ ಅಲ್ಲ. ಕೋ ಎಲಿಯೇಷನ್ ಗೌವರ್ನಮೆಂಟ್‌. ಅವನು ಎಂಎಲ್‌ಎ, (ಟಿ.ನರಸೀಪುರ ಎಂಎಲ್‌ಎ) ತಹಶೀಲ್ದಾರರನ್ನೆಲ್ಲಾ ಹಾಕಿಸಿಕೊಂಡಿರ್ತಾನೆ. ಅಸಿಸ್ಟೆಂಟ್ ಕಮಿಷನರ್‌ಗಳನ್ನ ಹಾಕಿಸಿಕೊಂಡಿರ್ತಾರೆ. ಆದ್ರೂ ನಾವು ಹೇಳ್ತೀವಿ, ನೀನು ಯಾವತ್ತಾದ್ರೂ ಬಂದು ಹೇಳಿದ್ದೀಯಾ? ಹೇಳಿದ್ರೆ ಅವನಿಗೆ ಉಗೀತಿದ್ದೆ. ಹೇಳೋದಕ್ಕೂ ರೀತಿ ಬೇಕಲ್ಲಾ?

ಜಮಾಲಾರ್‌: ತಪ್ಪಾಗೋಯ್ತು ಸಾರ್. ಕೋಪದಲ್ಲಿ….

ಸಿದ್ದರಾಮಯ್ಯ: ನೀನು ಹೇಳೋದನ್ನೇ ಬೇರೆ ರೀತಿ ಹೇಳಬಹುದಿತ್ತಲ್ಲಾ? ಕುಟ್ಟಿ ಹೇಳೋದೇನು? ರಾಜಕೀಯಕ್ಕೆ ಬಂದು 40 ವರ್ಷ ಆಯಿತು ಬಂದು… ತಾಯಿ… 8 ಬಾರಿ ಎಂಎಲ್‌ಎ ಆಗಿದ್ದೀನಿ…

ಸಿದ್ದರಾಮಯ್ಯ:  ಯತೀಂದ್ರನಿಗೆ ಹೇಳಬೇಕು ನೀನು. ಕೆಲಸ ಆಗಲಿಲ್ಲ ಅಂದ್ರೆ, ಅಧಿಕಾರಿಗಳು ಅವರ ಮಾತು ಕೇಳದೇ ಇದ್ರೆ ನನಗೆ ಹೇಳು. ಯಾವ ಅಧಿಕಾರಿಗಳದ್ದೂ ನನಗೇನೂ ಮುಲಾಜಿಲ್ಲ. ಜನಗಳ ಕೆಲಸ ಮಾಡೋದಕ್ಕೇನೇ ಅಧಿಕಾರಿಗಳಿರೋದು. ಮಾಡಬೇಕು. ಪುಕ್ಕಟೆ ಮಾಡಲ್ಲ. ಸಂಬಳ ತಗೊಂಡು ಕೆಲಸ ಮಾಡೋದಕ್ಕೆ ಬಂದಿದ್ದಾರೆ. ನಿನ್ನ ಕೆಲಸವನ್ನೂ ಮಾಡಿಸಿಕೊಡೋಣ ನಡಿ… ಮಾಡಿಸ್ತೀನಿ.

ಹೀಗಂತ ಹೇಳಿ ಸಿದ್ದರಾಮಯ್ಯ ಸ್ಥಳದಿಂದ ಹೊರಟಿದ್ದರು. ಆದ್ರೆ ಮಹಿಳೆಯ ಕೈಯಿಂದ ಮೈಕ್ ಕಿತ್ತುಕೊಳ್ಳೋವಾಗ ಆಕೆಯ ಬಟ್ಟೆ ತುದಿಯೂ ಸಿದ್ದರಾಮಯ್ಯರ ಕೈಗೆ ಸಿಕ್ಕುಕೊಂಡಿದ್ದು ಅಭಾಸ ಉಂಟು ಮಾಡಿತ್ತು. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಯ್ತು. ಅವರು ಮೈಕ್ ಕಿತ್ತುಕೊಂಡರೋ ಬಟ್ಟೆ ಕಿತ್ತುಕೊಂಡರೇ ಅನ್ನುವುದನ್ನು ಅರಿತುಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು.

ಇನ್ನು ಸಿದ್ದರಾಮಯ್ಯ ವಿರೋಧಿಗಳಂತು, ಸಿದ್ದರಾಮಯ್ಯ ಬಟ್ಟೆ ಎಳೆದಿದ್ದಾರೆ ಅನ್ನುವಂತೆ ಬಿಂಬಿಸಿತು.

ಎಲ್ಲಾ ಸರಿ ಸಿದ್ದರಾಮಯ್ಯ ಅದೆಷ್ಟು ಬಾರಿ ಟೇಬಲ್ ಕುಟ್ಟಿಲ್ಲ, ಅದ್ಯಾಕೋ ಅವರಿಗೆ ಮರೆತು ಹೋಗಿದೆ. ಒಂದಂತು ಸತ್ಯ, ಸಿದ್ದರಾಮಯ್ಯ ಅವರಿಗೆ ಇಷ್ಟರ ಮಟ್ಟಿಗೆ ಕೋಪ ಸರಿಯಲ್ಲ.

Advertisements

2 Comments on “ಸಿದ್ದರಾಮಯ್ಯ ಮುಂದೆ ಟೇಬಲ್ ಕುಟ್ಟಿದ್ರೆ ಹುಷಾರ್ :ಸಿದ್ದು ಬೆವರಿಳಿಸಿದ ತಾ.ಪಂ ಮಾಜಿ ಅಧ್ಯಕ್ಷೆ

  1. Pingback: ಆಕೆ ನನ್ನ ಸೋದರಿ ಸಮಾನ :ಘಟನೆ ಆಕಸ್ಮಿಕ :ಟ್ವಿಟರ್ ನಲ್ಲಿ ಸಿದ್ದು ಕ್ಷಮೆಯಾಚನೆ – torrentspree

  2. Pingback: ಸಿಟ್ಯಾಕೋ…ಸಿಡುಕ್ಯಾಕೋ : ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಗೆ ಧರ್ಮದೇಟು – torrentspree

Leave a Reply

%d bloggers like this: