Advertisements

ಪತ್ನಿಯಲ್ಲಿ ತಾಯಿಯನ್ನು ಕಂಡೆ :ಪತ್ನಿ ಕಾಲಿಗೆರಗಿದ ರಾಘಣ್ಣ

ಅಮ್ಮನ ಮನೆ’ ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ ಶನಿವಾರ (ಜನವರಿ 12) ಬೆಂಗಳೂರಿನಲ್ಲಿ ನಡೆಯಿತು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಘವೇಂದ್ರ ರಾಜಕುಮಾರ್‌ ಕಾರ್ಯಕ್ರಮದಲ್ಲಿ ತುಂಬಾ ಬಾವುಕರಾಗಿದ್ದರು.

ವೇದಿಕೆಯಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ತಮ್ಮ ಅತ್ತೆ ನಾಗಮ್ಮ, ಪತ್ನಿ ಮಂಗಳಾ ಅವರ ಬಗ್ಗೆ ಗುಣಗಾನ ಮಾಡುತ್ತಲೇ ಭಾವುಕರಾದರು. ಈ ವೇಳೆ, ಅತ್ತೆ ನಾಗಮ್ಮನ ಕಾಲಿಗೆ ನಮಸ್ಕರಿಸಿದ ರಾಘಣ್ಣ ನಂತರ ಪತ್ನಿ ಮಂಗಳಾ ಅವರ ಹಣೆಗೊಂದು ಪ್ರೀತಿಯ ಮುತ್ತನಿಟ್ಟು ಅವರ ಕಾಲಿಗೂ ನಮಸ್ಕರಿಸಿದರು.

“ನಾನು ಪತ್ನಿ ಮಂಗಳಾ ಅವರಲ್ಲಿ ನನ್ನ ತಾಯಿಯನ್ನು ನೋಡುತ್ತಿದ್ದೇನೆ. ಅಮ್ಮ ನನ್ನ ಚಿಕ್ಕ ವಯಸ್ಸಿನಲ್ಲಿ ಪಾಲನೆ ಮಾಡಿದರೆ, ಕೆಲ ವರ್ಷಗಳ ಹಿಂದೆ ನಾನು ಅನಾರೋಗ್ಯದಲ್ಲಿದ್ದಾಗ ಪತ್ನಿ ಸಾಕಷ್ಟು ಸಾಥ್‌ ಕೊಟ್ಟರು. ನನ್ನ ಪತ್ನಿ ಮಂಗಳಾ ನನ್ನ ಬದುಕಿನ ಮತ್ತೊಬ್ಬ ತಾಯಿ. ಇನ್ನು, ನನ್ನ ತಂದೆಯ ಸಹೋದರಿ ಅತ್ತೆ ನಾಗಮ್ಮ ಅವರು ಸಹ ತಾಯಿ ಸ್ವರೂಪದಂತೆ ಇದ್ದಾರೆ.

ನಾನು ಹುಟ್ಟಿದ್ದ ಸಂದರ್ಭದಲ್ಲಿ ನನ್ನ ತಾಯಿ ಚಿತ್ರೀಕರಣ ಸೇರಿದಂತೆ ವಜ್ರೇಶ್ವರಿ ಕಂಬೈನ್ಸ್‌ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಆ ಒತ್ತಡದ ಕೆಲಸಗಳ ಮಧ್ಯೆ ನನ್ನನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಅತ್ತೆ ನಾಗಮ್ಮ ಕೂಡ ಅವರ ಮಗಳಿಗೆ ಜನ್ಮ ನೀಡಿದ್ದರು. ಆ ವೇಳೆ ನನಗೂ ಎದೆ ಹಾಲು ಉಣಿಸುವ ಮೂಲಕ ನನ್ನನ್ನು ಸಾಕಿ ಸಲುಹಿದ್ದಾರೆ’ ಎಂದು ನೆನಪು ಮೆಲುಕು ಹಾಕುತ್ತಲೇ ಭಾವುಕರಾದರು.

ಅಮ್ಮನ ಮನೆ ಚಿತ್ರ ಗಂಡಸಿನ ಬದುಕಿನಲ್ಲಿ ಬರುವ ಮೂವರು ತಾಯಂದಿರ ಕುರಿತ ಕಥೆ ಹೇಳುತ್ತದೆ. ಹಾಗಾಗಿ, ಅಂದು ವೇದಿಕೆಗೆ ರಾಘವೇಂದ್ರ ರಾಜಕುಮಾರ್‌ ಅವರ ಅತ್ತೆ ನಾಗಮ್ಮ, ಪತ್ನಿ ಮಂಗಳಾ ಹಾಗೂ ಭಾವಿ ಸೊಸೆ ಶ್ರೀದೇವಿ ಅವರನ್ನು ಆಹ್ವಾನಿಸಿ ಅವರ ಮೂಲಕವೇ “ಅಮ್ಮನ ಮನೆ’ ಚಿತ್ರದ ಟೀಸರ್‌ ಬಿಡುಗಡೆ ಮಾಡಿಸಲಾಯಿತು.

ನಿಖಿಲ್‌ ಮಂಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರ ಸೆನ್ಸಾರ್‌ ಆಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.

Advertisements

One Comment on “ಪತ್ನಿಯಲ್ಲಿ ತಾಯಿಯನ್ನು ಕಂಡೆ :ಪತ್ನಿ ಕಾಲಿಗೆರಗಿದ ರಾಘಣ್ಣ

  1. Pingback: ರವಿಚಂದ್ರನ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್! – torrentspree

Leave a Reply

%d bloggers like this: