Advertisements

ಪತಿಯನ್ನು ಮುಗಿಸಲು ಆತನೇ ಕಟ್ಟಿದ ಮಾಂಗಲ್ಯವನ್ನೇ ಕೊಟ್ಟ ಕಿರಾತಕಿ

ಮನೆ ಮಾಲೀಕನ ಮಗನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಅರಿತಿದ್ದ ಪತಿಯನ್ನು ಮುಗಿಸಲು ಹಂತಕನಿಗೆ ಗಂಡ ಕಟ್ಟಿದ ಮಾಂಗಲ್ಯ ಸರವನ್ನೇ ಕೊಟ್ಟು ಸುಪಾರಿ ನೀಡಿದ ಪತ್ನಿಯನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅರಕೆರೆಯ ಬಿಟಿಎಸ್‌ ಲೇಔಟ್‌ ನಿವಾಸಿ ಮಮತಾ (28), ಆಕೆಯ ಪ್ರಿಯಕರ ಪ್ರಶಾಂತ್‌ (20), ಸಹಚರರಾದ ಅನಿಲ್‌ ಬಿಸ್ವಾಸ್‌ ಅಲಿ ಯಾಸ್‌ ಖಾನು (21), ಜಾಕೀರ್‌ಪಾಷ ಅಲಿಯಾಸ್‌ ಜಾಕ್‌ ಮಲ್ಲಿಕ್‌ (20), ಹರೀಶ್‌ ಕುಮಾರ್‌ ಅಲಿಯಾಸ್‌ ಗಲಗಲ (20) ಹಾಗೂ “ಮತ್ತೊಬ್ಬ” ಎಂದು ಗುರುತಿಸಲಾಗಿದೆ.

ಅರೆಕೆರೆಯ ಬಿಟಿಎಸ್ ಲೇಔಟ್ ನಲ್ಲಿ ನಾಗರಾಜ (38) ಪತ್ನಿ ಮಮತಾ ಜೊತೆಗೆ ಸಂಸಾರ ನಡೆಸುತ್ತಿದ್ದರು. ಡಿ.14ರಂದು ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ನಾಗರಾಜ್ ಊಟ ಮುಗಿಸಿ ಟಿವಿ ನೋಡುತ್ತಿದ್ದರು. ಈ ವೇಳೆ ರಾತ್ರಿ 9.15ರ ಸುಮಾರಿಗೆ ಮನೆಗೆ ನುಗ್ಗಿದ ನಾಲ್ವರು ಅಪರಿಚಿತರು ನಾಗರಾಜು ಅವರನ್ನು ಎಳೆದಾಡಿ ಮುಖಕ್ಕೆ ಹೊಡೆದು ಕತ್ತಿನಲ್ಲಿದ್ದ 40 ಗ್ರಾಂ ಸರ, ಮೊಬೈಲ್ ಹಾಗೂ ಇವರ ಪತ್ನಿ ಮಮತಾರ ಕೈಯಲಿದ್ದ 2 ಚಿನ್ನದ ಉಂಗುರಗಳನ್ನು ಕಿತ್ತುಕೊಂಡಿದ್ದರು.

ಇದೇ ಸಮಯಕ್ಕೆ ನೀರಿನ ಕ್ಯಾನ್ ತೆಗೆದುಕೊಂಡು ವಾಣಿ ಎಂಬುವವರು ಮನೆಗೆ ಬಂದಾಗ ಆರೋಪಿಗಳೆಲ್ಲರೂ ಪಕ್ಕದ ಕಟ್ಟಡಕ್ಕೆ ನೆಗೆದು ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದರು.ಈ ಬಗ್ಗೆ ನಾಗರಾಜು ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಈ ಸಂಬಂಧ ತನಿಖೆ ಪ್ರಾರಂಭಿಸಿದ್ದರು.

ಈ ನಡುವೆ ಮರು ದಿನ ಅಂದರೆ ಡಿಸೆಂಬರ್ 15 ರಂದು ಕೆಲಸಕ್ಕೆಂದು ಹೋದ ಪತ್ನಿ ಮಮತಾ ವಾಪಸ್ ಬಂದಿರಲಿಲ್ಲ. ಮಾತ್ರವಲ್ಲದೆ ಮನೆ ಮಾಲೀಕರ ಮಗ ಕೂಡಾ ಅದೇ ದಿನದಿಂದ ನಾಪತ್ತೆಯಾಗಿದ್ದ. ಎಡವಟ್ಟಾಗಿದೆ ಅಂದುಕೊಂಡ ನಾಗರಾಜ್ ಡಿಸೆಂಬರ್ 18 ರಂದು ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣಿಸುತ್ತಿಲ್ಲ ಎಂದು ದೂರು ದಾಖಲಿಸಿದ್ದಾರೆ. ಜೊತೆಗೆ ಮನೆ ಮಾಲೀಕನಿಗೂ ಹೆಂಡ್ತಿಗೂ ಸಂಬಂಧವಿದ್ದಿರಬೇಕು ಅಂದಿದ್ದಾರೆ.

ಪ್ರಶಾಂತ್‌, ಅನಿಲ್‌ ಬಿಸ್ವಾಸ್‌, ಜಾಕೀರ್‌ಪಾಷ, ಹರೀಶ್‌ ಕುಮಾರ್‌ ಆನ್‌ಲೈನ್‌ ಮಾರ್ಕೆಟಿಂಗ್‌ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದರು. ಈ ಪೈಕಿ ಜಾಕೀರ್‌ ವಿರುದ್ಧ ನಗರ ಕೆಲ ಠಾಣೆಗಳಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ಬಂಧಿತರಿಂದ ಒಂದು ಚಿನ್ನದ ಮಾಂಗಲ್ಯ ಸರ, ಒಂದು ಜತೆ ಓಲೆ, ಮಾಟಿ, ಬೆಳ್ಳಿಯ ಕಾಲು ಚೈನು, ಚಿನ್ನದ ಸರ, ಒಂದು ಕಾರು, ಒಂದು ಬೈಕ್‌, ಮಂಕಿ ಕ್ಯಾಂಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ

ಆಂಧ್ರಪ್ರದೇಶ ಮೂಲದ ನಾಗರಾಜ್‌ 10 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಪತ್ನಿ ಮಮತಾ ಹಾಗೂ ಗಂಡು ಮಗು ಜತೆ ಹುಳಿಮಾವುನಲ್ಲಿ ವಾಸವಿದ್ದರು. 8 ತಿಂಗಳ ಹಿಂದಷ್ಟೇ ಅರಕೆರೆಯ ಬಿಟಿಎಸ್‌ ಲೇಔಟ್‌ ನಲ್ಲಿರುವ ಆರೋಪಿ ಪ್ರಶಾಂತ್‌ ತಂದೆ ಮಾಲೀಕತ್ವದ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ನಾಗರಾಜ್‌ ಪೇಂಟಿಂಗ್‌ ಕೆಲಸ ಮಾಡುತ್ತಿದ್ದು, ಪತ್ನಿ ಮಮತಾ ಮೆಡಿಕಲ್‌ ಸ್ಟೋರ್‌ನಲ್ಲಿ ಸಹಾಯಕಿ ಆಗಿದ್ದರು. ಈ ನಡುವೆ ಮಮತಾ ಹಾಗೂ ಪ್ರಶಾಂತ್‌ ನಡುವೆ ಆತ್ಮೀಯತೆ ಬೆಳೆದಿದ್ದು, ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಗೊತ್ತಾಗಿದೆ.

ಪತ್ನಿಯ ಅಕ್ರಮ ಸಂಬಂಧದ ಸುಳಿವು ಸಿಕ್ಕ ನಾಗರಾಜ್‌, ಈ ಕುರಿತು ಮಮತಾಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಈ ವಿಚಾರವನ್ನು ಮಮತಾ, ಪ್ರಿಯಕರ ಪ್ರಶಾಂತ್‌ ಬಳಿ ಹೇಳಿಕೊಂಡಿದ್ದಳು. ಮುಂದಿನ ದಿನಗಳಲ್ಲಿ ಗಂಡನೇ ನಮ್ಮ ಪ್ರೀತಿಗೆ ವಿಲನ್ ಎಂದು ಅವರನ್ನು ಕೊಲೆಗೈದು ಬೇರೆಡೆ ಹೋಗಿ ಜೀವನ ಸಾಗಿಸಲು ಮಮತಾ ಪ್ಲಾನ್ ಮಾಡಿಕೊಂಡಿದ್ದಳು.

ಬಳಿಕ ಪ್ರಶಾಂತ್‌ ಮತ್ತು ಮಮತಾ ಸೇರಿ ನಾಗರಾಜ್‌ರನ್ನು ಕೊಲ್ಲಲು ಜಾಕೀರ್‌ ಪಾಷಗೆ 1.5 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರು. ಆದರೆ, ಅಡ್ವಾನ್ಸ್‌ ಕೊಡಲು ಹಣ ಇಲ್ಲದ್ದರಿಂದ ಮಮತಾ ತನ್ನ ಮಾಂಗಲ್ಯ ಸರವನ್ನೇ ಬಿಚ್ಚಿ ಕೊಟ್ಟಿದ್ದಳು. ನಂತರ ತನ್ನ ಚಿನ್ನದ ಸರ ಕಳುವಾಗಿದೆ ಎಂದು ಪತಿಗೆ ಸುಳ್ಳು ಹೇಳಿದ್ದಳು.

ಈ ನಡುವೆ ಡಿಸೆಂಬರ್ 15 ರಂದು ಪರಾರಿಯಾದ ಮಮತ ಹಾಗೂ ಪ್ರಶಾಂತ್ ಹುಬ್ಬಳ್ಳಿ, ಮುಂಬೈನಲ್ಲಿ ಕೆಲವು ದಿನ ಕಳೆದಿದ್ದಾರೆ. ಹಣ ಖಾಲಿಯಾಗುತ್ತಿದ್ದಂತೆ ಬೆಂಗಳೂರಿಗೆ ವಾಪಸ್‌ ಬಂದಿದ್ದರು. ಈ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ” ಮಾಂಗಲ್ಯದ ಮೂಲಕ ಸುಪಾರಿ ಕೊಟ್ಟ ರಹಸ್ಯ ಬಯಲಾಗಿದೆ.

Advertisements

Leave a Reply

%d bloggers like this: