Advertisements

ಲೋಕಾ ಸಮರಕ್ಕೆ ತಯಾರಾಗದ ಬಿಜೆಪಿ – ಕೇಂದ್ರ ನಾಯಕರ ಅಸಮಾಧಾನ

ಲೋಕಸಭೆ ಚುನಾವಣೆ ಇನ್ನು ಕೆಲವು ತಿಂಗಳುಗಳೇ ಬಾಕಿ. ರಾಜಕೀಯ ಪಕ್ಷಗಳು ಇದಕ್ಕಾಗಿ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಆದರೆ ರಾಜ್ಯ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದು ಹೇಗೆ ಎಂದು ಲೆಕ್ಕಚಾರ ಹಾಕುತ್ತಿದೆ.

ರಾಜ್ಯ ನಾಯಕರ ನಡೆಯಿಂದ ಕೇಂದ್ರದ ನಾಯಕರು ಕೂಡಾ ಬೇಸತ್ತು ಹೋಗಿದ್ದಾರಂತೆ. ಇಂದು ಉರುಳಿಸುತ್ತಾರೆ, ನಾಳೆ ಉರುಳಿಸುತ್ತಾರೆ ಎಂದು ಕಾದರೆ ಲೋಕಸಭಾ ಚುನಾವಣೆಯೇ ಮುಗಿದು ಹೋಗುತ್ತದೆ ಎಂದು ಅರಿತಿರುವ ರಾಷ್ಟ್ರ ನಾಯಕರು, ಸರ್ಕಾರ ರಚನೆಗೆ ಸೂಕ್ತ ವಾತಾವರಣ ಮತ್ತು ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲೇ ಸಮಯ ಕಳೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರಂತೆ.

ಹೀಗಾಗಿ ರಾಜ್ಯದಲ್ಲಿ ಲೋಕ ಸಮರಕ್ಕೆ ಹೈಕಮಾಂಡ್ ನೇರ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಗಳಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಸೋಲಿಸುವುದು ದೊಡ್ಡ ಸವಾಲು ಅನ್ನಿಸಿರುವುದರಿಂದ ಕೇಂದ್ರದ ನಾಯಕರೇ ರಾಜ್ಯದಲ್ಲಿ ಠಿಕಾಣಿ ಹೂಡಲಿದ್ದಾರೆ.

ರಾಜ್ಯದ ಲೋಕಸಭಾ ಕ್ಷೇತ್ರವಾರು ಚುನಾವಣಾ ಪ್ರಭಾರಿಗಳು ಹಾಗೂ ಸಂಚಾಲಕರ ನೇಮಕವಾದರೂ ಪ್ರಚಾರಕ ಕಾರ್ಯಕ್ಕೆ ಸಿದ್ಧತೆಗಳೇ ನಡೆದಿಲ್ಲ. ಕೆಲ ನಾಯಕರು ಕ್ಷೇತ್ರ ಪ್ರಭಾರಿ ಬದಲಾವಣೆಗೆ ಮನವಿ ಮಾಡಿದ್ದಾರೆ. ಆದರೆ ಆ ಬೇಡಿಕೆ ಇನ್ನೂ ಈಡೇರಿಲ್ಲ. ಹೀಗಾಗಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರಲ್ಲಿ ಬಲ ತುಂಬುವ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.

ಇನ್ನು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಕಾರ್ಯ ವೈಖರಿಗೂ ಅಸಮಾಧಾನ ವ್ಯಕ್ತವಾಗುತ್ತಿದೆ. ನಾಯಕರ ಏಕಪಕ್ಷೀಯ ನಿರ್ಧಾರಗಳು ಕಾರ್ಯಕರ್ತರಲ್ಲಿ ನೋವು ಉಂಟು ಮಾಡುತ್ತಿದೆ.

ಹೀಗಾಗಿ ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಯನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರ್ಕಾರ ರಚನೆ ಪ್ರಯತ್ನದ ಜೊತೆಗೆ ಲೋಕಸಭಾ ಚುನಾವಣೆ ಸಿದ್ಧತೆ ನಡೆಸುವಂತೆ ಸೂಚಿಸಿದೆ. ಆದರೆ ನಿರೀಕ್ಷೆಯ ಪ್ರಗತಿ ಗೋಚರಿಸುತ್ತಿಲ್ಲ. ಹೀಗಾಗಿ ಸೂಕ್ತ ಸಂದರ್ಭದಲ್ಲಿ ಮಧ್ಯಪ್ರವೇಶಿಸುವ ವರಿಷ್ಠರು ತಮ್ಮದೇ ಮೇಲ್ವಿಚಾರಣೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ.

ಇದಕ್ಕೆ ಪೂರಕ ಅನ್ನುವಂತೆ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಕೂಡಾ ಮಾತನಾಡಿದ್ದಾರೆ. ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿರುವ ಅವರು “ ಬಿಜೆಪಿ ಸರ್ಕಾರ ರಚನೆ ಆಸೆ ಬಿಟ್ಟು ಲೋಕಸಭಾ ಚುನಾವಣೆ ಸಿದ್ಧತೆಗೆ ಗಮನ ನೀಡುವುದು ಉತ್ತಮ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಸರ್ಕಾರ ರಚನೆಯಲ್ಲೇ ಮೈಮರೆತರೆ ಬಿಜೆಪಿಯ ಕೆಲ ದೌರ್ಬಲ್ಯಗಳನ್ನು ಬಳಸಿಕೊಂಡು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಲಾಭ ಪಡೆದುಕೊಳ್ಳುವ ಸಂಭವ ಇದೆ ಎಂದಿದ್ದಾರೆ.

Advertisements

Leave a Reply

%d bloggers like this: