Advertisements

ಹವ್ಯಕ ಮಾಧ್ಯಮ… ಒಂದು ಆತ್ಮಾವಲೋಕನ…? ಶಾಕಿಂಗ್ ಸುದ್ದಿ ಕೊಟ್ಟ ದ್ವಾರಕಾನಾಥ್

ಸಿ.ಎಸ್. ದ್ವಾರಕಾನಾಥ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ ವ್ಯಕ್ತಿ. ಹಿಂದುಳಿದ ವರ್ಗಗಳ ಬಗ್ಗೆ ಅವರಿಗೆ ಉಳ್ಳ ಕಾಳಜಿ ಅವರನ್ನು ಈ ಮಟ್ಟಕ್ಕೆ  ಏರಿಸಿದೆ. ಆದರೆ ಅದೇ ಕಾರಣಕ್ಕಾಗಿ ಎಡ ಹಾಗೂ ಬಲ ಎರಡಕ್ಕೂ ಸಲ್ಲದಂತಾಗಿದ್ದಾರೆ.

ಅವರ ಚಿಂತನೆಗಳು ಈಗಿನ ಯುವಕರಿಗೆ ತಲುಪುತ್ತದೆಯೋ ಇಲ್ಲವೋ, ಗೊತ್ತಿಲ್ಲ. ಮುಂದಿನ ಪೀಳಿಗೆ ಮಂದಿಗೆ ಅವರ ಮಾತುಗಳು ಖಂಡಿತಾ ಬೇಕು. ಅದಕ್ಕೆ ಪೂರಕವಾಗಿರುವುದು ಅವರು ಫೇಸ್ ಬುಕ್ ನಲ್ಲಿ ಹಾಕಿರುವ ಬರಹ.

ಕನ್ನಡ ಮಾಧ್ಯಮ ಲೋಕದ ಕಣ್ಣು ತೆರೆಸಿರುವ ಬರಹ ಇದಾಗಿದೆ. ಹಾಗಂತ ಕನ್ನಡ ಪತ್ರಿಕೆ ಓದುಗರು ಕೂಡಾ ಕಣ್ಣು ತೆರೆಯಬೇಕಾಗಿದೆ. ಓದುಗನ ಮೇಲೆ ಸಂಪಾದಕ ಅನ್ನಿಸಿಕೊಂಡವ ಹೇಗೆ ತನ್ನತನ ಬೀರುತ್ತಾನೆ ಎಂದು.

ದ್ವಾರಕಾನಾಥ್ ಅವರ ಬರಹ ಓದಿ… ಆಮೇಲೆ ನಮ್ಮ ಮಾತು….

“ಮೂರು ಪರ್ಸೆಂಟ್ ಇರಬಹುದಾದ ಒಟ್ಟಾರೆ ಬ್ರಾಹ್ಮಣರಲ್ಲಿ, ಅದರಲ್ಲೂ ಮೂರು ಪರ್ಸೆಂಟ್ ಹವ್ಯಕರು ಉಪಜಾತಿ ಯಾಗಿ ಇರಬಹುದೇನೋ? ಈ ಸಮುದಾಯ ಇರುವುದು ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ, ಅದರಲ್ಲೂ ಅತಿ ಕಡಿಮೆ ಸಂಖ್ಯೆಯಲ್ಲಿ. 

ಇಷ್ಟು ‘ಮೈಕ್ರೋಸ್ಕೋಪಿಕ್ ಮೈನಾರಿಟಿ’ ಇರುವ ಸಮುದಾಯವೊಂದರ ಸಮಾವೇಶದ ಸುದ್ದಿಯನ್ನು ನಮ್ಮ ಕನ್ನಡ ಪ್ರಿಂಟ್ ಮೀಡಿಯ ಮಹತ್ತರ ಸುದ್ದಿಯಾಗಿ ಮೂರು ದಿನದಿಂದ ಬಹುತೇಕ ಮುಖಪುಟದಲ್ಲಿ ಎಡಬಿಡದೆ ಪ್ರಕಟಿಸುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ!! ಹವ್ಯಕರನ್ನು ಹೊರತುಪಡಿಸಿ ಇತರೆ ಬ್ರಾಹ್ಮಣರೂ ಸೇರಿದಂತೆ ಬಹುಸಂಖ್ಯಾತ ಜಾತಿಗಳಿಗೆ ಈ ಸುದ್ದಿ ಅಷ್ಟೇನೂ ಮಹತ್ವದಲ್ಲ, ಅದೊಂದು ಸಾದಾರಣ ಸುದ್ದಿಯಷ್ಟೆ. ಆದರೂ ಈ ಉಪಜಾತಿಯ ಸಮಾವೇಶಕ್ಕೆ ಕನ್ನಡ ದಿನಪತ್ರಿಕೆಗಳಲ್ಲಿ ಇಷ್ಟು ಮಾನ್ಯತೆ ಇಷ್ಟೊಂದು ಸ್ಪೇಸು ನೀಡುವ ಅವಶ್ಯಕತೆಯೇನಿರಬಹುದು? 

ಕನ್ನಡದ ಒಂಬತ್ತು ದಿನಪತ್ರಿಕೆಗಳಲ್ಲಿ ಎಂಟು ಪತ್ರಿಕೆಗಳು ಬ್ರಾಹ್ಮಣರ ಸಂಪಾದಕತ್ವದಲ್ಲಿವೆ! ಅದರಲ್ಲೂ ಆರು ಪತ್ರಿಕೆಗಳು ಹವ್ಯಕ ಉಪಜಾತಿಯ ಸಂಪಾದಕತ್ವದಲ್ಲಿವೆ!!

ಪಟ್ಟಿ ಹೀಗಿದೆ ನೋಡಿ..

1. ವಿಜಯವಾಣಿ: ಹರಿಪ್ರಸಾದ್ 
ಕೋಣೆಮನೆ(ಹವ್ಯಕ)
2. ವಿಜಯ ಕರ್ನಾಟಕ: ತಿಮ್ಮಪ್ಪ 
ಭಟ್ಟ(ಹವ್ಯಕ)
3. ಪ್ರಜಾವಾಣಿ: ರವೀಂದ್ರ ಭಟ್ಟ(ಹವ್ಯಕ)
4. ವಿಶ್ವವಾಣಿ: ವಿಶ್ವೇಶ್ವರ ಭಟ್ಟ(ಹವ್ಯಕ)
5. ಕನ್ನಡ ಪ್ರಭ: ರವಿ ಹೆಗಡೆ(ಹವ್ಯಕ)
6. ಹೊಸದಿಗಂತ: ವಿನಾಯಕ
ಭಟ್ಟ(ಹವ್ಯಕ)
7. ಉದಯವಾಣಿ: ಹಿಂದೆ ಶಿವಸುಬ್ರಮಣ್ಯ(ಹವ್ಯಕ) ಇದ್ದರು ಈಗ ಹವ್ಯಕರಲ್ಲದ ಇತರೆ ಬ್ರಾಹ್ಮಣರಿದ್ದಾರೆ.
8. ಸಂಯುಕ್ತ ಕರ್ನಾಟಕ: ಹುಣಸವಾಡಿ ರಾಜನ್(ಹವ್ಯಕರಲ್ಲದ ಬ್ರಾಹ್ಮಣರು)
9. ವಾರ್ತಾಭಾರತಿ: ಬಿ.ಎಂ.ಬಶೀರ್(ಅಬ್ರಾಹ್ಮಣರು)
ಇದು ಕನ್ನಡ ಪತ್ರಿಕೋದ್ಯಮದ ‘social structure’…!! 
(ಮಾಹಿತಿಯ ಕೊರತೆಯಿಂದ ಈ ಪಟ್ಟಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಕ್ಷಮಿಸಿ.)
ಇವರಲ್ಲನೇಕರು ನನ್ನ ಸ್ನೇಹಿತರಿದ್ದಾರೆ, ಆದರೆ ಸತ್ಯ ನಿಷ್ಠುರವಾಗಿದೆ ಹೇಳಲೇಬೇಕಾದ ಸಂದರ್ಭವಿದೆ, ಇರುವುದನ್ನು ಇದ್ದಂತೆ ಹೇಳಲು ಹಿಂಜರಿಯುವುದನ್ನು ನಮ್ಮ ಗುರುಗಳು(ಲಂಕೇಶ್) ಕಲಿಸಿಲ್ಲ. ಇವರಲ್ಲಿರುವ ನನ್ನ ಆಪ್ತರು ನನ್ನ ದನಿಯನ್ನು ಅರ್ಥಮಾಡಿಕೊಳುತ್ತಾರೆಂಬ ನಂಬಿಕೆಯಿದೆ, ಆ ದೈರ್ಯದಿಂದಲೇ ಅನಿಸಿದ್ದನ್ನು ಹೇಳುತಿದ್ದೇನೆ!?

ಜಾತಿಯನ್ನೇ ನೀತಿಯನ್ನಾಗಿ ಮಾಡಿಕೊಂಡ ದೇಶವೊಂದರಲ್ಲಿ ಒಂದು ಅತಿಸಣ್ಣ ಉಪಜಾತಿಯಾಗಿ ಹವ್ಯಕ ಸಮುದಾಯ ಸಂಘಟನೆ ಮಾಡುವುದು, ಸಮಾವೇಶ ಮಾಡುವುದು ತಪ್ಪಲ್ಲ. ಆ ಸಮುದಾಯಕ್ಕೆ ಬೇಕಾದ ಸಾಂವಿಧಾನಿಕ ಸವಲತ್ತುಗಳನ್ನು ಕೇಳುವುದೂ ತಪ್ಪಲ್ಲ. ನನಗೆ ಈ ಸಮುದಾಯದೊಂದಿಗೆ ಯಾವ ತಕರಾರೂ ಇಲ್ಲ. ನನ್ನ ತಕರಾರಿರುವುದು ಆ ಸಮುದಾಯದ ಪತ್ರಕರ್ತರೊಂದಿಗೆ ಮಾತ್ರ!?

ನಾವು ವರ್ಷ ಪೂರ್ತಿ ಸಾಕಷ್ಟು ಜಾತಿಗಳ ನೂರಾರು ಸಮಾವೇಶಗಳನ್ನು ನೋಡುತ್ತೇವೆ, ನಮ್ಮ ಕುಂಬಾರ, ಕಮ್ಮಾರ, ಕ್ಷೌರಿಕ, ಮಡಿವಾಳ, ಉಪ್ಪಾರ, ತಿಗಳ, ಗೊಲ್ಲ, ವಿಶ್ವಕರ್ಮ, ಸಾದರ ರಂತಹ ಸಣ್ಣ ಸಮುದಾಯಗಳು ಬಿಕ್ಷೆ ಎತ್ತಿ ಬೆವರು ಸುರಿಸಿ ಸಮಾವೇಶ ಮಾಡುತ್ತವೆ, ಪ್ರತಿಪತ್ರಿಕೆಯವರಿಗೂ ನಾಕಾರು ಸಲ ಆಹ್ವಾನ ನೀಡಿ ಸುದ್ದಿ ಮಾಡಲೆಂದು ಪರಿಪರಿಯಾಗಿ ಅಂಗಲಾಚುತ್ತವೆ, ಆದರೆ ಈ ನಿರ್ಲಕ್ಷಿತ ಸಮುದಾಯಗಳ ಒಂದು ಸಣ್ಣ ಸುದ್ದಿಯನ್ನೂ ನೀವು ಮಾಡುವುದಿಲ್ಲ!? ಮಾಡಿದರೂ ಪತ್ರಿಕೆಯ ಒಳಗಿನ ಪುಟದ ಮೂಲೆಯೊಂದರಲ್ಲಿ ಕಣ್ಣಿಗೆ ಕಾಣದಂತೆ ಒಂದೆರಡು ಸಾಲು ಬರಬಹುದಷ್ಟೇ! 

ಇನ್ನು ದೊಡ್ಡ ದೊಡ್ಡ ಜಾತಿಗಳು ತಮ್ಮ ಸಮಾವೇಶಗಳಿಗೆ ಲಕ್ಷಾಂತರ ರೂಪಾಯಿ ಸುರಿದು ಜಾಹೀರಾತು ನೀಡುವುದರಿಂದ ಅಂತಹ ಜಾತಿಗಳ ಸಮಾವೇಶಕ್ಕೆ ಪ್ರಚಾರ ನೀಡಲೇ ಬೇಕಾಗುತ್ತದೆ, ಇದು ನಿಮಗೆ ಅನಿವಾರ್ಯ.
ನಮ್ಮ ಅಲೆಮಾರಿಗಳಂತಹ ಸಣ್ಣ ಸಮುದಾಯಗಳು ಏನೆಲ್ಲಾ ಪಡಿಪಾಟಲು ಬಿದ್ದು ಸಮಾವೇಶ ಮಾಡುವುದು ಯಾಕಾಗಿ? ಸರ್ಕಾರದ ಗಮನ ಸೆಳೆಯಲಷ್ಟೆ. ಪತ್ರಿಕೆಗಳಲ್ಲಿ ತಮ್ಮ ಸಮಾವೇಶದ ಸುದ್ದಿ ಬಂದರೆ ಸರ್ಕಾರದ ಗಮನ ಸೆಳೆದು ಒಂದು ಸಣ್ಣ ಮನೆಯೋ, ನಿವೇಶನವೋ ಅಥವಾ ಒಂದು ಜಾತಿ ಸರ್ಟಿಫಿಕೇಟೋ ಸಿಗಬಹುದೆಂಬ ದೊಡ್ಡ ಆಸೆಯಿಂದಷ್ಟೇ. ಆದರೆ ನೀವು ಇಂತಹ ಸಮುದಾಯಗಳ ಸುದ್ದಿಯನ್ನು ಕಣ್ಣೆತ್ತಿಯೂ ನೋಡಲ್ಲ!

ನಿಮ್ಮ ಸಮುದಾಯದ ಸಮಾವೇಶಕ್ಕೆ ವಿಪರೀತ ಪ್ರಚಾರ ನೀಡುತ್ತಿರುವ ಹವ್ಯಕ ಪತ್ರಕರ್ತರೇ ಒಮ್ಮೆ ಇತ್ತ ನೋಡಿ.. ನಮ್ಮ ಅಸಹಾಯಕ ಸಮುದಾಯ ವ್ಯಕ್ತ ಪಡಿಸುವ ತಮ್ಮ ನೋವುಗಳನ್ನು ನಾಲ್ಕು ಸಾಲು ಬರೆಯಲಾರದ ನೀವು, ನಿಮ್ಮ ಸಮುದಾಯದ ಸಮಾವೇಶಕ್ಕೆ ಇನ್ನಿಲ್ಲದಷ್ಟು ಪ್ರಚಾರ ನೀಡುತ್ತಾ ಮುಖಪುಟದ ಮಾನ್ಯತೆ ನೀಡುತ್ತೀರಲ್ಲ? ಇದು ಸರಿಯೇ..? ತಾರತಮ್ಯ ಮಾಡುತ್ತಿದ್ದೇವೆಂದು ನಿಮಗೆ ಅನಿಸುತ್ತಿಲ್ಲವೆ? ನೀವು ಪಾಲಿಸಬೇಕಾದ ನಿಮ್ಮ Journalistic ethics ಗೆ ನೀವು ಅನ್ಯಾಯ ಮಾಡುತ್ತಿಲ್ಲವೆ? ವಿದ್ಯಾವಂತರಾದ ನಿಮಗೆ ಕನಿಷ್ಠ guilt ಕೂಡ ಕಾಡಲ್ಲವೆ? ಇದು ಸ್ವಜನ ಪಕ್ಷಪಾತವಲ್ಲವೆ..? ಜಾತಿಯಿಂದ ಹೊರಬರುವುದಿರಲಿ, ನಿಮ್ಮ ಉಪಜಾತಿಯಿಂದಾದರೂ ಹೊರಬರಲಾರಿರಾ..?
ನಿಮ್ಮ ಎದೆಯನ್ನೊಮ್ಮೆ ಮುಟ್ಟಿನೋಡಿಕೊಳ್ಳಿ…? 
ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.. ಪ್ಲೀಸ್…
– ಸಿ.ಎಸ್.ದ್ವಾರಕಾನಾಥ್

ದ್ವಾರಕಾನಾಥ್ ಅವರು ಟಿವಿ ವಾಹಿನಿಗಳ ಹೆಸರು ಮರೆತಿದ್ದಾರೆ, ಪಬ್ಲಿಕ್ ಟಿವಿ ಹಾಗೂ ಟಿವಿ9 ವಾಹಿನಿಗಳನ್ನು ಮುನ್ನಡೆಸುತ್ತಿರುವುದು ಬ್ರಾಹ್ಮಣರೇ ಆಗಿದ್ದಾರೆ. ರಂಗನಾಥ್ ಭಾರದ್ವಾಜ್ ಮತ್ತು ಹೆಚ್. ಆರ್. ರಂಗನಾಥ್. ಸಮಯದ ಉಸ್ತುವಾರಿಯನ್ನು ಶಿವಪ್ರಸಾದ್ ವಹಿಸಿಕೊಂಡಿದ್ದಾರೆ. ಕಸ್ತೂರಿಗೆ ದಿಕ್ಕಿಲ್ಲ ದೆಸೆಯಿಲ್ಲ. ಸುವರ್ಣ ಅಜಿತ್ ಹನುಮಕ್ಕನವರ್, ಉದಯಕ್ಕೆ ಬಾಗಿಲುಗಳೇ ಇಲ್ಲ. ಸುದ್ದಿ ಅನ್ನುವ ವಾಹಿನಿಯನ್ನು ಶಶಿಧರ್ ಭಟ್ ನಡೆಸುತ್ತಿದ್ದರು ( ಈಗ ಅದರ ಕಥೆ ಬಗ್ಗೆ ಅರಿವಿಲ್ಲ) ವಿಜಯ ಸಂಕೇಶ್ವರ್ ಒಡೆತನದ ದಿಗ್ವಿಜಯ ಸಂಪಾದಕರು ಯಾರು ಅನ್ನುವುದೇ ಚಿದಂಬರ ರಹಸ್ಯ.

ಇನ್ನು ಹರಿಪ್ರಕಾಶ್ ಕೋಣೆಮನೆ, ವಿಜಯವಾಣಿ ತೊರೆದು ವಿಜಯ ಕರ್ನಾಟಕ ಸೇರಿದ್ದಾರೆ ( ತಿಮ್ಮಪ್ಪ ಭಟ್ ಮತ್ತು ಹರಿಪ್ರಕಾಶ್ ಕೋಣೆಮನೆ ಸಂಬಂಧಿಕರಂತೆ)

ವಿನಾಯಕ್ ಭಟ್ ಮತ್ತು ವಿಶ್ವೇಶರ ಭಟ್ ಕೂಡಾ ಸಂಬಂಧಿಕರು ಅನ್ನುವುದು ಗಮನಾರ್ಹ ಅಂಶ.

ಒಟ್ಟಿನಲ್ಲಿ ಕನ್ನಡ ಮಾಧ್ಯಮದ ಬಗ್ಗೆ ದ್ವಾರಕಾನಾಥ್ ಬರೆದಿರುವ ಲೇಖನ ಪ್ರಸ್ತುತ ಸ್ಥಿತಿಗೆ ಹಿಡಿದ ಕೈಗನ್ನಡಿ. ಓದುಗರಾದ ನೀವೇ ನಿರ್ಧರಿಸಿ.

ಪರಿಸ್ಥಿತಿ ನೋಡಿದರೆ ಕುಟುಂಬ ರಾಜಕಾರಣದಂತೆ…ಕುಟುಂಬ ಸಂಪಾದಕೋದ್ಯಮವೂ ಜೋರಾಗಿದೆ.

Advertisements

Leave a Reply

%d bloggers like this: