Advertisements

ನಮ್ಮೊಳಗಿನ ಅಂಬಿ ಅಮರ…… ರೆಬೆಲ್ ಸ್ಟಾರ್ ನೆನಪಿನಲ್ಲಿ ಅದ್ದೂರಿ ಕಾರ್ಯಕ್ರಮ

ಕನ್ನಡವೇ ನಿತ್ಯ ಕಾರ್ಯಕ್ರಮ ರೂಪುಗೊಳ್ಳುವ ಸಮಯ. ಕನ್ನಡದ ಮನಸ್ಸುಗಳು ಒಂದೆಡೆ ಕೂತು ಕನ್ನಡದ ಅಪರೂಪದ ಹಳೆಯ ಹಾಡುಗಳನ್ನು ಮತ್ತೆ ಜನರಿಗೆ ತಲುಪಿಸಬೇಕು. ಹಳೆಯ ತಲೆಮಾರಿನ ಸಾಹಿತಿಗಳನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕು ಅನ್ನುವ ನಿಟ್ಟಿನಲ್ಲಿ ಪ್ರಾರಂಭಿಸಿದ್ದು ಕನ್ನಡವೇ ನಿತ್ಯ ಕಾರ್ಯಕ್ರಮ.

ಮೊದಲ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದು ಮೈಸೂರನ್ನು. ಸಾಂಸ್ಕೃತಿಕ ನಗರಿ ಮೈಸೂರಿನಿಂದಲೇ ಕಾರ್ಯಕ್ರಮ ಪ್ರಾರಂಭವಾಗಲಿ ಅನ್ನುವುದು ತಂಡದ ಉದ್ದೇಶವಾಗಿತ್ತು. ಜೊತೆಗೆ ಕನ್ನಡ ಚಿತ್ರಗಳಿಗೆ ಎಂದೂ ಮರೆಯದ ಹಾಡುಗಳನ್ನು ಕೊಟ್ಟ ಸಾಹಿತಿ ಡಾ. ದೊಡ್ಡರಂಗೇಗೌಡರೇ ಕನ್ನಡವೇ ನಿತ್ಯದ ಮೊದಲ ಸಂಚಿಕೆಯ ಅತಿಥಿಯಾಗಿದ್ದರು.

ದೊಡ್ಡ ರಂಗೇಗೌಡರು, ಕನ್ನಡ ಚಿತ್ರಗಳಿಗೆ ಬರೆದ ಗೀತೆಯನ್ನು ಮತ್ತೆ ಹೊಸ ಕಲಾವಿದರ ಕಂಠದಲ್ಲಿ ಹಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಕಾರ್ಯಕ್ರಮಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನೂ ಆಹ್ವಾನಿಸಲು ನಿರ್ಧರಿಸಲಾಗಿತ್ತು.

ಒಂದು ಅಂಬರೀಶ್ ಅವರಿಗೂ ಮೈಸೂರಿಗೂ ಇನ್ನಿಲ್ಲದ ನಂಟು. ಅಂಬರೀಶ್ ಅಭಿನಯದ ಹಲವು ಚಿತ್ರಗಳಿಗೆ ದೊಡ್ಡ ರಂಗೇಗೌಡರು ಸಾಹಿತ್ಯ ಬರೆದಿದ್ದಾರೆ. ಹೀಗಾಗಿ ಎರಡು ಸಾಧಕರನ್ನು ಒಂದೇ ವೇದಿಕೆಯಲ್ಲಿ ಕರೆ ತರಲು ಎಲ್ಲಾ ಸಿದ್ದತೆಗಳು ನಡೆದಿತ್ತು.

ಅಷ್ಟು ಹೊತ್ತಿಗೆ ನಾಡಿಗೆ ಬರ ಸಿಡಿಲಿನಂತೆ ಬಂದಿದ್ದು, ಅಂಬಿ ಇನ್ನಿಲ್ಲ ಅನ್ನುವ ಸುದ್ದಿ. ಮಂಡ್ಯದ ಗಂಡು ಅಂಬರೀಶ್ ಅವರನ್ನು ಕರೆಸಿ ಕಾರ್ಯಕ್ರಮ ನಡೆಸಬೇಕು ಅಂದು ಕೊಂಡ ತಂಡಕ್ಕೆ ಇದು ಶಾಕಿಂಗ್ ಸುದ್ದಿ.

ಕನ್ನಡದ ಸೇವೆ ಹೆಸರಿನಲ್ಲಿ ಕೈಗೆತ್ತಿಕೊಂಡ ಕಾರ್ಯಕ್ರಮ ನಿಲ್ಲಿಸುವಂತಿಲ್ಲ. ಮತ್ತೊಂದು ಕಡೆ ಅಂಬರೀಶ್ ಇನ್ನಿಲ್ಲ. ಮಾಡುವುದೇನು ಅನ್ನುವ ಚಿಂತೆ. ಹೀಗಾಗಿ ಒಂದು ದಿನದ ಕನ್ನಡವೇ ನಿತ್ಯ ಕಾರ್ಯಕ್ರಮವನ್ನು ಎರಡು ದಿನಕ್ಕೆ ವಿಸ್ತರಿಸಲಾಯ್ತು. ಖರ್ಚು ವೆಚ್ಚಗಳನ್ನು ಕನ್ನಡಿಗರು ಬೆಂಬಲಿಸುತ್ತಾರೆ ಅನ್ನುವ ನಂಬಿಕೆಯೊಂದಿಗೆ, ನಮ್ಮೊಳಗಿನ ಅಂಬಿ ಅಮರ ಅನ್ನುವ ಹೆಸರಿನಲ್ಲಿ ಮತ್ತೊಂದು ಕಾರ್ಯಕ್ರಮ ರೂಪಿಸಲಾಯ್ತು.

ತಂಡದ ಕನಸಿನಂತೆ ಅಂಬರೀಶ್ ಕನ್ನಡವೇ ನಿತ್ಯ ವೇದಿಕೆ ಹತ್ತಿ ನಮ್ಮ ಹರಸಬೇಕಿತ್ತು. ಈಗ ಆ ಲೋಕದಿಂದಲೇ ಅವರು ನಮ್ಮನ್ನು ಹರಸುವಂತಾಗಲಿ ಎಂದು ಒಂದು ದಿನದ ಕಾರ್ಯಕ್ರಮವನ್ನು ಅಂಬರೀಶ್ ಅವರಿಗೆ ಸಮರ್ಪಿಸಲು ನಿರ್ಧರಿಸಿ ನಮ್ಮೊಳಗಿನ ಅಂಬಿ ಅಮರ ಕಾರ್ಯಕ್ರಮವನ್ನು ರೂಪಿಸಲಾಯ್ತು.

ಇದೀಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಕನ್ನಡಿಗರದ್ದು.

Advertisements

Leave a Reply

%d bloggers like this: