Advertisements

ದೊಡ್ಡರಂಗೇಗೌಡರ ಗೀತೆಗಳನ್ನು ಸವಿಯಲು ಮೈಸೂರಿಗೆ ಬನ್ನಿ…ಯಾಕೆ ಗೊತ್ತಾ…?

ಕನ್ನಡದ ಖ್ಯಾತ ಕವಿಗಳಲ್ಲಿ ದೊಡ್ಡರಂಗೇಗೌಡರೂ ಒಬ್ಬರು. ಚಿತ್ರಸಾಹಿತಿಯಾದ ಹೊಸದರಲ್ಲಿ “ತೇರಾ ಏರಿ ಅಂಬರದಾಗೆ’ ಹಾಡು ಬರೆದು ಎಲ್ಲರನ್ನೂ ರಂಜಿಸಿದ್ದ‌ ಅವರು, ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ನಾನು ಮರೆಯಲಿ ಎಂದು ಬರೆದು ತಾಯ್ನೆಲದ ಮೇಲಿನ ಪ್ರೇಮವನ್ನು ಪ್ರಕಟಿಸಿದ್ದರು. ಕನ್ನಡದ ಶ್ರೇಷ್ಠ ವಾಗ್ಮಿಯೂ ಆಗಿರುವ ಗೌಡರು ತಮ್ಮ ಮನದ ಮಾತುಗಳನ್ನು ತೆರೆದಿಟ್ಟಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕುರುಬರಹಳ್ಳಿ ನನ್ನ ಹುಟ್ಟೂರು. ನಮ್ಮದು ಪಟೇಲರ ಕುಟುಂಬ. ನನ್ನ ತಾತನ ಹೆಸರು ಪಟೇಲ್‌ ಕರೇ ರಂಗೇಗೌಡ. ನನ್ನ ತಂದೆಯ ಹೆಸರು ಕೆ. ರಂಗೇಗೌಡ. ಅವರು ಪ್ರಾಥಮಿಕ ಶಾಲಾ ಶಿಕ್ಷಕ ಆಗಿದ್ದರು. ತಾಯಿ ಅಕ್ಕಮ್ಮ, ದುಡಿಮೆಯೇ ದೇವರೆಂದು ನಂಬಿದ್ದ ಗೃಹಿಣಿ.

ನನ್ನ ತಂದೆ, ಆ ಕಾಲಕ್ಕೇ ತುಂಬಾ ಓದಿಕೊಂಡಿದ್ದರು. ಲಕ್ಷ್ಮೀಶ ಕವಿಯ “ಜೈಮಿನಿ ಭಾರತ’ ಅವರಿಗೆ ಕಂಠಪಾಠವಾಗಿತ್ತು. ರಾಮಾಯಣ, ಮಹಾಭಾರತ, ಭಾಗವತದ ಉಪಕತೆಗಳ ಪರಿಚಯವೂ ಚೆನ್ನಾಗಿತ್ತು. ಇದೆಲ್ಲಕ್ಕಿಂತ ಮಿಗಿಲಾಗಿ-ಸೊಗಸಾಗಿ ಹಾರ್ಮೋನಿಯಂ ನುಡಿಸಲು ಅವರಿಗೆ ತಿಳಿದಿತ್ತು. ಬೇಸಿಗೆ ರಜೆಯಲ್ಲಿ ಅವರು ಹಳ್ಳಿಗಳಲ್ಲಿ ನಾಟಕ ಆಡಿಸುತ್ತಿದ್ದರು. ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರವನ್ನೂ ನಿರ್ವಹಿಸುತ್ತಿದ್ದರು.

ಹುಬ್ಬಳ್ಳಿಲಿ ಮೊದಲ ಕೆಲಸ

ನಾವು ಒಟ್ಟು ಎಂಟು ಜನ ಮಕ್ಕಳು. ನಾನೇ ಮೊದಲನೆಯವನು. ಓದು ಮುಗಿದ ತಕ್ಷಣ ಕೆಲಸಕ್ಕೆ ಸೇರಿ ಕುಟುಂಬಕ್ಕೆ ಆಸರೆಯಾಗಬೇಕು ಎಂಬ ನಿರ್ಧಾರ ನನ್ನದಾಗಿತ್ತು. ಪದವಿ ಕಡೆಯ ವರ್ಷದಲ್ಲಿದ್ದಾಗಲೇ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ನ ಪರೀಕ್ಷೆ ಬರೆದಿದ್ದೆ. ಹುಬ್ಬಳ್ಳಿಯಲ್ಲಿ ಕೆಲಸವೂ ಸಿಕ್ಕಿಬಿಡು¤. ಕೆಲವೇ ದಿನಗಳ ನಂತರ, ಇದು ನನ್ನ ಫೀಲ್ಡ್‌ ಅಲ್ಲ, ನಾನೂ ಅಪ್ಪನ ಥರ ಮೇಸ್ಟ್ರೆ ಆಗಬೇಕು. ಆಗುವುದಾದ್ರೆ ಲೆಕ್ಚರರ್‌ ಆಗಬೇಕು ಅನ್ನಿಸ್ತು. ತಕ್ಷಣ ಬೆಂಗಳೂರಿಗೆ ಟ್ರಾನ್ಸ್‌ಫ‌ರ್‌ ಕೇಳಿದೆ. ನೈಟ್‌ಶಿಫ್ಟ್ ಹಾಕಿಸಿಕೊಂಡೆ. ರಾತ್ರಿ ಹೊತ್ತು ಕೆಲಸ, ಹಗಲಿನಲ್ಲಿ ಕಾಲೇಜು-ಹೀಗೆ ನಡೀತಿತ್ತು ಜೀವನ.

ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ. ಓದುವಾಗ, ರಂ.ಶ್ರೀ. ಮುಗಳಿ, ಜಿ.ಎಸ್‌. ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ಟ, ಚಂದ್ರಶೇಖರ ಕಂಬಾರರ ಶಿಷ್ಯನಾಗುವ, ಲಂಕೇಶ್‌, ನಿಸಾರ್‌ ಅಹಮದ್‌, ಶಾಂತಿನಾಥ ದೇಸಾಯಿ, ಅನಂತಮೂರ್ತಿ ಮುಂತಾದವರ ಕಿರಿಯ ಗೆಳೆಯನಾಗುವ ಅದೃಷ್ಟ ನನ್ನದಾಗಿತ್ತು. ಇವರೆಲ್ಲರ ಸಾಂಗತ್ಯದ ನಡುವೆ ನಾನು ಅಧ್ಯಾಪಕನ ವೃತ್ತಿ ಆರಂಭಿಸಿದೆ. ನನ್ನೊಳಗಿನ ಕವಿ ಬೆಳೆಯುತ್ತಾ ಹೋದದ್ದೂ ಈ ಸಂದರ್ಭದಲ್ಲಿಯೇ.

ಸ್ವಲ್ಪ ಅಳುಕಿತ್ತು, ಜಾಸ್ತಿ ವಿಶ್ವಾಸವಿತ್ತು

ಎಂ.ಎ. ಮುಗಿಸಿದ ಮೇಲೆ ನಾನೂ ಲೆಕ್ಚರರ್‌ ಆದೆ. ಬಾಲ್ಯದಲ್ಲಿ ಹಳ್ಳಿಯಲ್ಲಿ ದಿನವೂ ಜನಪದ ಗೀತೆಗಳನ್ನು, ಲಾವಣಿ ಹಾಡುಗಳನ್ನು, ಊರ ದೇವರ ಮೇಲಿದ್ದ ಭಕ್ತಿಗೀತೆಗಳನ್ನು ಕೇಳುತ್ತಾ, ಮೈಮೆರತು ಹಾಡುತ್ತಾ ಬೆಳೆದವ ನಾನು. ಎಂ.ಎ. ಓದುವಾಗ ಶ್ರೇಷ್ಠ ಅಧ್ಯಾಪಕರು ಹಾಗೂ ಅತ್ಯುತ್ತಮ ಗೆಳೆಯರ ಸಾಂಗತ್ಯದಿಂದಾಗಿ ನನ್ನೊಳಗಿನ ಸಾಹಿತಿ ಬೆಳೆಯುತ್ತಾ ಹೋದ. ಆಗಲೇ ಕವನ ಸಂಕಲನವೂ ಬಂತು. ಈ ಮಧ್ಯೆ, ತೀರಾ ಅನಿರೀಕ್ಷಿತವಾಗಿ, ನಿರ್ದೇಶಕ ಮಾರುತಿ ಶಿವರಾಂ ಅವರಿಂದ ಕರೆಬಂತು. ಅಲ್ಲಿಗೆ ಹೋದರೆ- “ಸಾರ್‌, ನಾವೀಗ ಶ್ರೀಕೃಷ್ಣ ಆಲನಹಳ್ಳಿಯವರ “ಪರಸಂಗದ ಗೆಂಡೆತಿಮ್ಮ’ ಕಥೇನ ಸಿನಿಮಾ ಮಾಡ್ತಾ ಇದೀವಿ. ಅದಕ್ಕೆ ಗ್ರಾಮ್ಯ ಭಾಷೆಯ ಹಾಡುಗಳು ಬೇಕು. ಆ ಹಾಡುಗಳನ್ನು ಬರೆಯಲು ನೀವೇ ಸಮರ್ಥರು ಅನ್ನಿಸ್ತು. ದಯವಿಟ್ಟು ಒಪ್ಕೊಳ್ಳಿ’ ಅಂದರು. ಇದು 1978ರ ಮಾತು. ಆಗ ಗೀತ ಸಾಹಿತ್ಯದಲ್ಲಿ ವಿಜಯನಾರಸಿಂಹ, ಆರ್‌.ಎನ್‌. ಜಯಗೋಪಾಲ್‌, ಚಿ. ಉದಯಶಂಕರ್‌ ಅವರಂಥ ಘಟಾನುಘಟಿಗಳಿದ್ದರು. ಅಂಥಾ ಹಿರಿಯರ ಮಧ್ಯೆ ಹಾಡು ಬರೆದು ಗೆಲ್ಲಲು ಸಾಧ್ಯವಾ ಎಂಬ ಸಣ್ಣ ಅಳುಕು ಹಾಗೂ ಖಂಡಿತ ಗೆಲ್ಲಬಲ್ಲೆ ಎಂಬ ವಿಶ್ವಾಸ ಎರಡೂ ಇತ್ತು. ಆ ದಿನಗಳಲ್ಲಿ ನಾನು ತುಂಬಾ ಸಣ್ಣಕಿದ್ದೆ. ನಿರ್ದೇಶಕರೊಂದಿಗೆ ಸಂಗೀತ ನಿರ್ದೇಶಕರಾದ ರಾಜನ್‌-ನಾಗೇಂದ್ರ ಅವರಲ್ಲಿಗೆ ಹೋದಾಗ ಒಂದು ತಮಾಷೆ ನಡೀತು. “ಇವರು ದೊಡ್ಡ ರಂಗೇಗೌಡ ಅಂತ. ನಮ್ಮ ಸಿನಿಮಾಕ್ಕೆ ಹಾಡು ಬರೆಯೋದು ಇವರೇ…’ ಅಂದರು ಡೈರೆಕ್ಟರ್‌. “ಏನ್ರೀ ಇದೂ, ಉದಯ ಶಂಕರ್‌ ಹತ್ರ ಬರೆಸಿದ್ರೆ ಜಾಸ್ತಿ ದುಡ್ಡು ಕೊಡಬೇಕಾಗುತ್ತೆ ಅಂತ ಇವರ ಹತ್ರ ಬರೆಸ್ತಾ ಇದೀರಾ?’ ಎಂದು ಅನುಮಾನದಿಂದ ಕೇಳಿದ್ದರು ರಾಜನ್‌-ನಾಗೇಂದ್ರ.
ನೋ ನೋ, ಇವರು ಲೆಕ್ಚರರ್‌. ಕವಿಗಳು. ಕವನ ಸಂಕಲನ ತಂದಿದ್ದಾರೆ. ಗ್ರಾಮೀಣ ಭಾಷೆಯ ಸತ್ವ ಇವರ ಬರಹದಲ್ಲಿ ದಂಡಿಯಾಗಿದೆ. ಇವರ ಸಾಹಿತ್ಯದಿಂದ ನಮ್ಮ ಸಿನಿಮಾಕ್ಕೆ ತುಂಬಾ ಅನುಕೂಲ ಆಗುತ್ತೆ ಅಂದರು ಡೈರೆಕ್ಟರ್‌. ಇಷ್ಟು ಹೇಳಿದ ಮೇಲೇ ರಾಜನ್‌-ನಾಗೇಂದ್ರ ಕನ್ವಿನ್ಸ್‌ ಆದದ್ದು. ಆಮೇಲಿನದ್ದೆಲ್ಲಾ ಇತಿಹಾಸ ಬಿಡಿ. “ಗೆಂಡೆತಿಮ್ಮ….’ ಸಿನಿಮಾ ಏಕ್‌ದಂ ನನಗೆ ಸ್ಟಾರ್‌ವ್ಯಾಲ್ಯೂ ಸಿಗುವಂತೆ ಮಾಡಿತು.

ನನ್ನದು ಪ್ರೇಮ ವಿವಾಹ. ಅಂತರ್ಜಾತೀಯ ವಿವಾಹ. ಎಂ.ಎ. ಓದುವ ದಿನಗಳಲ್ಲಿ ಯಾವುದೇ ಸಾಂಸ್ಕೃತಿಕ ಸ್ಪರ್ಧೆಗಳು ನಡೆದರೂ ಮಹಾರಾಣಿ ಕಾಲೇಜಿನಿಂದ ಕೆ. ರಾಜೇಶ್ವರಿ ಬರೋರು . ಸೆಂಟ್ರಲ್‌ ಕಾಲೇಜಿನಿಂದ ನಾನು ಹೋಗ್ತಿದ್ದೆ. ನಾವಿಬ್ರೂ ಪ್ರತಿಸ್ಪರ್ಧಿಗಳು. ಆನಂತರ ಅದು ಗೆಳೆತನವಾಗಿ, ಪ್ರೀತಿಯಾಗಿ, ಮದುವೆಯಲ್ಲಿ ಕೊನೆಯಾಯ್ತು.

ನನ್ನ ಪಾಲಿಗೆ ನನ್ನ ಹೆಂಡ್ತಿನೇ ಡ್ರೀಂಗರ್ಲ್. ಅವಳೇ ನನ್ನ ರೋಲ್‌ ಮಾಡೆಲ್‌. ನಾನು ಬರೆದ ಎಷ್ಟೋ ಹಾಡುಗಳಿಗೆ ಅವಳೇ ಪ್ರೇರಣೆ. ಬಂಗಾರದ ಜಿಂಕೆ ಸಿನಿಮಾಕ್ಕೆ “ಒಲುಮೆ ಪೂಜೆಗೆಂದೇ…’, “ಒಲುಮೆ ಸಿರಿಯಾ ಕಂಡು…’ ಹಾಡುಗಳನ್ನು ಬರೆಯುವಾಗ ಕ್ಷಣಕ್ಷಣಕ್ಕೂ ಅವಳನ್ನು ನೆನಪು ಮಾಡ್ಕೊಂಡಿದೀನಿ.

ನಿರೂಪಣೆ: ಎ.ಆರ್‌. ಮಣಿಕಾಂತ್‌

Advertisements

Leave a Reply

%d bloggers like this: