Advertisements

ಕೇರಳ : ಬಿಜೆಪಿ ಸೇರಿದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್

ಕೇರಳ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಸಂಜೆ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ವ್ಯಕ್ತಿಗಳನ್ನು ಕಮಲ ಪಾಳಯಕ್ಕೆ ಸ್ವಾಗತಿಸಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್, ಟ್ರಾವಂಕೂರು ದೇವಸ್ವಮ್ ಬೋರ್ಡ್ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಜಿ. ರಾಮನ್ ನಾಯರ್ ಬಿಜೆಪಿ ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

“ನಾನು ಕೆಲ ಸಮಯದಿಂದ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೆ. ಆದರೆ ಶನಿವಾರ ಅಮಿತ್ ಶಾ ನನ್ನನ್ನು ಔಪಚಾರಿಕವಾಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ, ನಾನು ಭಾರತವನ್ನು ಅಭಿವೃದ್ಧಿಪಡಿಸುವ ಮೋದಿಜಿಯವರ ತತ್ತ್ವದಲ್ಲಿ ಆಸಕ್ತಿ ಹೊಂದಿದ್ದೇನೆ ಹಾಗಾಗಿ ನಾನು ಬಿಜೆಪಿಯೊಂದಿಗೆ ಕೆಲಸ ಮಾಡಲು ಬಯಸುತ್ತೇನೆ” ಎಂದು ಮಾಧವನ್ ನಾಯರ್ ಹೇಳಿದ್ದಾರೆ.

ಇನ್ನು ಮಹಿಳಾ ಆಯೋಗದ ಮಾಜಿ ಸದಸ್ಯೆ ಡಾ. ಪ್ರಮೀಳಾ ದೇವಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕರಕುಲಂ ದಿವಾಕರನ್ ನಾಯರ್ ಮತ್ತು ಮಲಂಕರ ಚರ್ಚ್ ನ ಥಾಮಸ್ ಜಾನ್ ಬಿಜೆಪಿಗೆ ಸೇರಿದ ಇತರೆ ಮೂವರು ವ್ಯಕ್ತಿಗಳಾಗಿದ್ದಾರೆ.

ಶನಿವಾರ ರಾತ್ರಿ ತಿರುವನಂತಪುರಂನಲ್ಲಿನ ಹೋಟೆಲ್ ತಾಜ್ ವಿವಂತಾದಲ್ಲಿ ನಡೆದ ಸಮಾವೇಶವೊಂದರಲ್ಲಿ ಅವರುಗಳು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.

ಶಬರಿಮಲೆ ವಿಚಾರದಲ್ಲಿ ಬಿಜೆಪಿ ನಿಲುವು ಸರಿಯಾಗಿದ್ದು ತಾವು ಪಕ್ಷದ ಕಾರ್ಯಗಳಲ್ಲಿ ಕೈಜೋಡಿಸುತ್ತೇವೆ ಎಂದು ಜಿ.ರಾಮನ್ ನಾಯರ್ ಹೇಳಿದ್ದಾರೆ.

ಈಗಾಗಲೇ ಕೇರಳದಲ್ಲಿ ಪಕ್ಷ ಬಲವರ್ಧನೆಗೆ ಪಣ ತೊಟ್ಟಿರುವ ಅಮಿತ್ ಷಾ, ರಕ್ತ ಸಿಕ್ತ ಹೋರಾಟದಿಂದ ಸುದ್ದಿಯಾಗಿರುವ ಕಣ್ಣೂರನ್ನೇ ಟಾರ್ಗೇಟ್ ಮಾಡಿಕೊಂಡಿದ್ದಾರೆ.

ಖ್ಯಾತ ನಾಮರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಬಾವುಟ ಹಾರಿಸುವ ಯೋಜನೆ ಇದಾಗಿದೆ. ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ.

Advertisements

Leave a Reply

%d bloggers like this: