Advertisements

ಮುತ್ತಪ್ಪ ರೈ ಗನ್ ಮ್ಯಾನ್ ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು…?

ಆಯುಧ ಪೂಜೆ ದಿನ ತಮ್ಮ ರಕ್ಷಣೆಗೆ ನೀಡಲಾಗಿದ್ದ ಗನ್‌, ಪಿಸ್ತೂಲ್‌, ರಿವಾಲ್ವಾರ್‌, ಡ್ಯಾಗರ್‌ ಗೆ ಪೂಜೆ ಮಾಡಿದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರಿಗೆ ಶುಕ್ರವಾರ ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು.

ಮುತ್ತಪ್ಪ ರೈ ಅವರು ಗನ್‌, ಪಿಸ್ತೂಲ್‌, ರಿವಾಲ್ವಾರ್‌ ಗೆ ಪೂಜೆ ಮಾಡಿದ ವಿಡಿಯೋ ಮತ್ತು ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಸಿಬಿ ಪೊಲೀಸರು, ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೋಟಿಸ್ ಕಳುಹಿಸಿದ್ದರು.

ನೋಟಿಸ್‌ ಸ್ವೀಕರಿಸಿದ 24 ತಾಸಿನೊಳಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿವರಣೆ ನೀಡಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಅ.18ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ದೃಶ್ಯಾವಳಿಗಳಲ್ಲಿ , ನೀವು ಒಂದು ಸ್ಥಳದಲ್ಲಿ ವಾಹನ ನಿಲ್ಲಿಸಿ ಅದರ ಮುಂದೆ ಆಯುಧಗಳನ್ನು ಅಪಾಯಕಾರಿ ರೀತಿಯಲ್ಲಿ ಪ್ರದರ್ಶಿಸಿದ್ದೀರಿ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿ ಬೆಂಗಳೂರಿನ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದೀರಿ. ನೀವು ಎಲ್ಲಾ ಆಯುಧಗಳು, ಅವುಗಳಿಗೆ ಸಂಬಂಧಪಟ್ಟ ಮೂಲ ದಾಖಲೆಗಳೊಂದಿಗೆ ತಪ್ಪದೇ ಹಾಜರಾಗಬೇಕು ಎಂದು ಸಿಸಿಬಿ ಸಂಘಟಿತ ಅಪರಾದ ದಳದ ಎಸಿಪಿ ವಿ.ಮರಿಯಪ್ಪ ನೋಟಿಸ್‌ ನೀಡಿದ್ದರು.

ನೋಟೀಸ್ ಪಡೆದ ಬೆನ್ನಲ್ಲೇ ಶನಿವಾರ ಸಿಸಿಬಿ ಕಚೇರಿಗೆ ತಮ್ಮ ಗನ್ ಮ್ಯಾನ್ ಗಳ ಸಮೇತ ಮುತ್ತಪ್ಪ ರೈ ವಿಚಾರಣೆಗೆ ಹಾಜರಾಗಿದ್ದಾರೆ. ಸತತ ಎಂಟು ಗಂಟೆಗಳ ಕಾಲ ಪೊಲೀಸರು ಮುತ್ತಪ್ಪ ರೈ ಅವರನ್ನು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ರೈ ಗಳ ಭದ್ರತೆಗಾಗಿ ನೇಮಕಗೊಂಡಿದ್ದ ಗನ್ ಮ್ಯಾನ್ ಗಳು ಬಳಸುತ್ತಿದ್ದ ಶಸ್ತ್ರಾಸ್ತ್ರಗಳ ಪರವಾನಿಗೆ ನವೀಕರಣಗೊಂಡಿಲ್ಲ ಎಂದು ಗೊತ್ತಾಗಿದೆ.

ಆದರೆ ಇದ್ಯಾವುದೂ ಕೂಡಾ ನನ್ನ ಹೆಸರಿನಲ್ಲಿ ಇಲ್ಲ. ಎಲ್ಲವೂ, Black Cat ಏಜೆನ್ಸಿಗೆ ಸೇರಿವೆ ಎಂದು ಮುತ್ತಪ್ಪ ರೈ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ವಿಚಾರಣೆ ಮುಕ್ತಾಯಗೊಳಿಸದ ಪೊಲೀಸರು ರೈ ಅವರನ್ನು ತಡರಾತ್ರಿ ಕಳುಹಿಸಿಕೊಟ್ಟಿದ್ದಾರೆ.

ಈ ನಡುವೆ ಮುತ್ತಪ್ಪ ರೈ ಅವರ ಭದ್ರತೆಯ ಹೊಣೆ ಹೊತ್ತಿದ್ದ Black Cat ಏಜೆನ್ಸಿಯ ಭದ್ರತಾ ಸಿಬ್ಬಂದಿ ಸೇರಿ 7 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಇವರನ್ನು ಕಾಟನ್ ಪೇಟೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ , Black Cat ಏಜೆನ್ಸಿ ಮಾಲೀಕ ವಸಂತ ಅನ್ನುವವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಪರವಾನಿಗೆ ಇಲ್ಲ ಶಸ್ತ್ರಾಸ್ತ್ರಗಳನ್ನು ಬಳಸಿದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಈ ನಡುವೆ ವಿಚಾರಣೆ ಮುಗಿಸಿ ಹೊರಗೆ ಬಂದ ಮುತ್ತಪ್ಪ ರೈ ನಾನು ತಪ್ಪು ಮಾಡಿಲ್ಲ. ಏಜೆನ್ಸಿಯವರು ನವೀಕರಣ ಮಾಡಿಲ್ಲ ಅಂದರೆ ನಾನೇನು ಮಾಡಲು ಸಾಧ್ಯ, ನನ್ನ ಬಳಿ ಯಾವುದೇ ಮೆಷಿನ್ ಗನ್ ಇಲ್ಲ, ಡ್ರ್ಯಾಗರ್ ಕೂಡಾ ಇಲ್ಲ. ಇರುವುದೆಲ್ಲವೂ ಕಾನೂನು ಪ್ರಕಾರವೇ ಎಂದು ಉತ್ತರಿಸಿದ್ದಾರೆ.

Advertisements

Leave a Reply

%d bloggers like this: