Advertisements

ಹುಬ್ಬೇರುವಂತೆ ಮಾಡಿದೆ ಯೋಗಿ ನಿರ್ಧಾರ – ಅಖಿಲೇಶ್ ವಿರೋಧಿಗೆ Z+ ಸೆಕ್ಯೂರಿಟಿ

ಸಮಾಜವಾದಿ ಸೆಕ್ಯುಲರ್ ಮೋರ್ಚಾದ ಅಧ್ಯಕ್ಷ ಹಾಗೂ ಜಸ್ವಂತ್ ನಗರ ಶಾಸಕರಾದ ಶಿವಪಾಲ್ ಯಾದವ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.

ಯಾದವ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

ಸೆಕ್ಯುಲರ್ ಮೋರ್ಚಾ ಸಂಸ್ಥಾಪಕರಾದ ಯಾದವ್ ಅವರಿಗೆ ಈ ಹಿಂದೆ ಬಿಎಸ್ಪಿ ನಾಯಕಿ ಮಾಯಾವತಿ ವಾಸವಿದ್ದ ಬಂಗಲೆಯನ್ನು ನೀಡಲಾಗಿದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗ್ ನಲ್ಲಿನ ವಿಶಾಲ ಬಂಗಲೆಯನ್ನು ಈಗಾಗಲೇ ಸರ್ಕಾರ ಒದಗಿಸಿದೆ. ಮಾಯಾವತಿ ಮೇ 31, 2018ರಂದು ಈ ಬಂಗಲೆಯನ್ನು ತೆರವುಗೊಳಿಸಿದ್ದರು.

ಕುಟುಂಬ ರಾಜಕಾರಣದ ವಿರುದ್ಧ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರೊಡನೆ ತೀವ್ರ ಮನಸ್ತಾಪ ಹೊಂದಿರುವ ಶಿವಪಾಲ್ ಯಾದವ್ ಪಕ್ಷದ ನಾಯಕರ ವಿರುದ್ಧ ಬಂಡಾಯವೆದ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು ಅವರ ಜೀವಕ್ಕೆ ಅಪಾಯವಿದೆ ಎಂದುಗುಪ್ತಚರ ಇಲಾಖೆ ವರದಿ ಮಾಡಿದೆ. ಯಾದವ್ ಅವರ ಜೀವಕ್ಕೆ ಅಪಾಯವಿರುವ ಕಾರಣಕ್ಕಾಗಿ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗುತ್ತಿದೆ ಎಂದು ಮೂಲಗಳು ಹೇಳಿದೆ.

ಪ್ರಸ್ತುತ ವಿವಿಐಪಿ ಝಡ್ ಪ್ಲಸ್ ಭದ್ರತೆಯನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅವರ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರುಗಳಿಗೆ ಮಾತ್ರವೇ ಒದಗಿಸಲಾಗುತ್ತಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ನಿರ್ಧಾರ ಹೊರ ಬಿದ್ದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

Advertisements

Leave a Reply

%d bloggers like this: