Advertisements

ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದರೆ ಪತ್ರಿಕಾಗೋಷ್ಟಿ ಕರೆಯುವುದ್ಯಾಕೆ…? ಪುತ್ತೂರು ಶಾಸಕರ ಎಡವಟ್ಟು..

ವಿವಾದ ಹುಟ್ಟು ಹಾಕಿರುವ ಕುದ್ರೋಳಿ ಕಸಾಯಿಖಾನೆ ಅನುದಾನ ವಿಚಾರದಲ್ಲಿ ದಕ್ಷಿಣ ಬಿಜೆಪಿ ಎಡವಿ ಬೀಳುವ ಲಕ್ಷಣ ಗೋಚರಿಸುತ್ತಿದೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹಾಗೂ ನಗರದ ಶಾಸಕರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಪರದಾಡಿದ್ದಾರೆ.

ಅದರಲ್ಲೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು, ಪತ್ರಕರ್ತರ ಪ್ರಶ್ನೆಯ ಬಾಣಗಳನ್ನು ಎದುರಿಸಲಾಗದೆ, ನೆಪ ಹೇಳಿ ಎದ್ದು ಹೋಗಿದ್ದಾರೆ.

 

ಕುದ್ರೋಳಿ ಕಸಾಯಿಖಾನೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಖಾದರ್ ಸ್ಮಾರ್ಟ್ ಸಿಟಿಯ ಯೋಜನೆಯಡಿಯಲ್ಲಿ ಅನುದಾನ ನೀಡುವುದಾಗಿ ಘೋಷಿಸಿದ್ದರು. ಅದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಖಾದರ್ ನಿರ್ಧಾರದ ವಿರುದ್ಧ ಹೋರಾಟ ರೂಪಿಸಲು ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ ವಿವರಿಸಲು ಮಂಗಳೂರಿನ ಬಿಜೆಪಿ ಕಚೇರಿದಲ್ಲಿ ಮಾಧ್ಯಮ ಗೋಷ್ಠಿ ಕರೆಯಲಾಗಿತ್ತು.

ಮಾಧ್ಯಮಗೋಷ್ಟಿಯಲ್ಲಿ ಖಾದರ್ ವಿರುದ್ಧ ವಾಗ್ಧಾಳಿ ನಡೆಸಿದ ಬಿಜೆಪಿ ಶಾಸಕರು, ನಗರದ ಸಮಗ್ರ ಅಭಿವೃದ್ಧಿ ಹಾಗು ಸ್ವಚ್ಛತೆಗೆ ನೀಡಿದ ಹಣವನ್ನು ಸಚಿವ ಖಾದರ್ ಈ ರೀತಿ ದುರುಪಯೋಗ ಮಾಡುವುದು ಸರಿಯಲ್ಲ. ಅಲ್ಪಸಂಖ್ಯಾತರನ್ನು ಓಲೈಸಲು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಕಸಾಯಿಖಾನೆಯ ಅಭಿವೃದ್ದಿ ಯೋಜನೆ ಜಾರಿಯಾಗಲು ನಾವು ಬಿಡುವುದಿಲ್ಲ ಎಂದರು.

ಇದೇ ವೇಳೆ ಕಸಾಯಿಖಾನೆ ಅಭಿವೃದ್ದಿ ಹಿಂದೆ ನಗರದ ಸ್ವಚ್ಛತೆ ಕಾಳಜಿ ಇದೆಯಲ್ಲವೇ ಎಂದು ಪತ್ರಕರ್ತರು ಪ್ರಶ್ನೆ ಹಾಕಿದರೆ ಶಾಸಕರು ಉತ್ತರಿಸಲಾಗದೇ ಚಡಪಡಿಸಿದ್ದಾರೆ.ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಮಿಟಿಯಲ್ಲಿ ಬಿಜೆಪಿ ಸದಸ್ಯರೂ ಕೂಡ ಇದ್ದಾರೆ. ಹಾಗಿದ್ದರೂ ಈ ಕಸಾಯಿಖಾನೆಯ ಅಭಿವೃದ್ಧಿ ಪ್ರಸ್ತಾವನೆಗೆ ಯಾಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದರೆ ಗೊಂದಲಗೊಂಡ ಶಾಸಕ ಉತ್ತರಕ್ಕೆ ತಿಣುಕಾಡಿದರು. ಪ್ರಶ್ನೆಗಳ ಮೇಲೆ ಪ್ರಶ್ನೆ ತೂರಿ ಬಂದರೆ ನಾನು ಶಾಸಕ, ನನಗೆ ಸಾಕಷ್ಟು ಕೆಲಸಗಳಿವೆ. ಆಫ್ ದಿ ರೆಕಾರ್ಡ್ ಬೇಕಿದ್ದರೆ ಕೆಳಗೆ ಮಾತನಾಡೋಣ. ನಾನು ಧನ್ಯವಾದ ಹೇಳಿಯಾಗಿದೆ. ನಾನು ಹೇಳಬೇಕಾಗಿರುವುದನ್ನು ಹೇಳಿಯಾಗಿದೆ ಎಂದು ನಮಸ್ಕಾರ ಹೇಳಿ ಹೋದರು.

ಒಬ್ಬ ಜನಪ್ರತಿನಿಧಿಯಾದವರು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದವರು ಹೀಗೆ ಪಲಾಯನ ಮಾಡುವುದು ಸರಿಯಲ್ಲ.ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಕನಿಷ್ಟ ಉತ್ತರಿಸುವ ಸೌಜನ್ಯ ತೋರಿಸಬೇಕು.ಪತ್ರಕರ್ತರು ಕೇಳಿದ ಪ್ರಶ್ನೆಗಳಲ್ಲೇ ತಪ್ಪಿರಬಹುದು. ಮಾಧ್ಯಮಗಳಿರುವುದು ಜನತೆಗೆ ಮಾಹಿತಿ ನೀಡಲು. ನೀವೇ ಸರಿಯಾಗಿ ಮಾಹಿತಿ ಕೊಟ್ಟಿಲ್ಲ ಅಂದರೆ ಮಾಧ್ಯಮಗಳ ಮಂದಿ ಸಿಕ್ಕ ಮಾಹಿತಿಯನ್ನು ಕೊಟ್ಟು ಬಿಡುತ್ತಾರೆ.

ಇನ್ನು ಮಂಗಳೂರಿನ ಕಸಾಯಿಖಾನೆ ಕುರಿತಂತೆ ಜನತೆಯಲ್ಲಿ ಸಾಕಷ್ಟು ಅನುಮಾನಗಳಿದೆ. ಉತ್ತಮ ಮಾಂಸ ಜನತೆಗೆ ಸಿಗಬೇಕು, ಸ್ವಚ್ಛ ಕಸಾಯಿಖಾನೆ ನಿರ್ಮಾಣವಾಗಬೇಕು ಎಂದು ಅನುದಾನ ನೀಡುತ್ತಿರುವುದಾಗಿ ಖಾದರ್ ಹೇಳಿದ್ದಾರೆ. ಅದು ಸರಿಯಾಗಿಯೇ ಇದೆ. ಅಂದ ಮೇಲೆ ಬಿಜೆಪಿಯವರು ಇದನ್ನು ವಿರೋಧಿಸಲು ಕಾರಣವೇನು…?

ಹಾಗಾದರೆ ಸಚಿವರು ಕಸಾಯಿಖಾನೆಗೆ ಅನುದಾನ ಘೋಷಿಸಿ ತಪ್ಪು ಮಾಡಿದ್ದಾರೆಯೇ…ಮೇಲ್ನೋಟಕ್ಕೆ ಹೌದು ಅನ್ನಿಸುತ್ತದೆ.ಸ್ಮಾರ್ಟ್ ಸಿಟಿಯ ಯೋಜನೆ ಜಾರಿಯಾಗಬೇಕಾದರೆ,ಪಾಲಿಕೆ ಸಭೆಯಲ್ಲಿ ಚರ್ಚೆಯಾಗಬೇಕು ಅನ್ನುವುದು ಸತ್ಯ. ಸಾರ್ವಜನಿಕರ ಅಭಿಪ್ರಾಯ ನಡೆಯಬೇಕು ಅನ್ನುವುದು ಕೂಡಾ ಸ್ಪಷ್ಟ. ಅದನ್ನೂ ಪಾಲಿಸಲಾಗಿಲ್ಲ ಅನ್ನುವ ಆರೋಪ ಸರಿ ಇದೆ. ಸಲಹಾ ಸಮಿತಿಯಲ್ಲಿ ಚರ್ಚೆಯಾಗಿಲ್ಲ ಅನ್ನುವ ಬಿಜೆಪಿ ದೂರನ್ನು ಒಪ್ಪಿಕೊಳ್ಳಬಹುದು.ಆದರೆ ಸ್ಮಾರ್ಟ್ ಸಿಟಿ ಕುರಿತಂತೆ ನಾಲ್ಕು ಪ್ರಸ್ತಾವನೆಗಳನ್ನು ಈಗಾಗಲೇ ತಯಾರಿಸಲಾಗಿದೆ. ಆದರೆ ಬಿಜೆಪಿ ಕೆಂಗಣ್ಣಿಗೆ ಕಸಾಯಿಖಾನೆ ಮಾತ್ರ ಬೀಳಲು ಕಾರಣವೇನು…?

Advertisements

One Comment on “ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದರೆ ಪತ್ರಿಕಾಗೋಷ್ಟಿ ಕರೆಯುವುದ್ಯಾಕೆ…? ಪುತ್ತೂರು ಶಾಸಕರ ಎಡವಟ್ಟು..

  1. Pingback: ಶಪಥ ಮುರಿದ ಜನಾರ್ಧನ ಪೂಜಾರಿ : ಕುದ್ರೋಳಿ ದೇವಸ್ಥಾನ ಪ್ರವೇಶ – torrentspree

Leave a Reply

%d bloggers like this: