Advertisements

ಆಸ್ಪತ್ರೆ ಅಫಿಡವಿಟ್ : ಜಯಲಲಿತಾ ಚಿಕಿತ್ಸೆ ವೇಳೆ ಸಿಸಿಟಿವಿ ಆಫ್ ಮಾಡಲು ಹೇಳಿದ್ದು ಯಾರು..?

2016ರ ಸೆಪ್ಟೆಂಬರ್ 22ರಂದು ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 5 ರಂದು ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು. ಜಯಲಲಿತಾ ಅವರ ಸಾವಿನ ಕುರಿತು ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಸೇರಿದಂತೆ ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಜಸ್ಟೀಸ್ ಎ. ಆರ್ಮುಘಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು

ಇದೀಗ ತನಿಖಾ ಆಯೋಗಕ್ಕೆ ಸ್ಫೋಟಕ ಮಾಹಿತಿಗಳು ಸಿಗಲಾರಂಭಿಸಿದೆ.

ಅದರಲ್ಲೂ ಜಯಲಲಿತಾ ಚಿಕಿತ್ಸೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯತ್ತ ಎಲ್ಲರ ಚಿತ್ತವಿತ್ತು. ದೃಶ್ಯಾವಳಿ ಸಿಕ್ಕರೆ ಜಯಲಲಿತಾ ಸಾವಿನ ಕುರಿತ ಹಲವು ಅನುಮಾನಗಳಿಗೆ ಉತ್ತರ ಸಿಗಬಹುದು ಅನ್ನುವ ನಿರೀಕ್ಷೆ ಇತ್ತು.

ಆದರೆ ಬಳಿಕ ಗೊತ್ತಾಗಿದ್ದು ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಷ್ಟು ದಿನವೂ ಅಪೋಲೊ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾಗಳನ್ನು ಸ್ವಿಚ್ ಆಫ್ ಆಗಿತ್ತು ಅನ್ನುವ ಶಾಕಿಂಗ್ ಸತ್ಯ.

ಇದು ವಿವಾದವಾಗುತ್ತಿದ್ದಂತೆ ಕಳೆದ ಜೂನ್ ನಲ್ಲಿ ಅಪೋಲೊ ಆಸ್ಪತ್ರೆಯಲ್ಲಿ ಸಿಸಿಟಿವಿ ಆಫ್ ಆಗಿದ್ದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಗುಪ್ತಚರ ಇಲಾಖೆಯ ಮುಖ್ಯಸ್ಥ, ಐಪಿಎಸ್ ಅಧಿಕಾರಿ ಕೆ.ಎನ್. ಸತ್ಯಮೂರ್ತಿ ಹೇಳಿದ್ದರು.

ಇದೀಗ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಷ್ಟು ದಿನವೂ ಅಪೋಲೊ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದ ಕುರಿತು ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, ತಮಿಳುನಾಡು ಪೊಲೀಸರ ಮನವಿಯಂತೆ ನಾವು ಈ ಕ್ರಮ ತೆಗೆದುಕೊಂಡಿದ್ದೆವು ಎಂದು ತಿಳಿಸಿದೆ.

ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಎ. ಆರ್ಮುಘಸ್ವಾಮಿ ಆಯೋಗಕ್ಕೆ ಆಸ್ಪತ್ರೆ 5 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ.

ತಮಿಳುನಾಡು ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಐಜಿಪಿ ಕೆ.ಎನ್. ಸತ್ಯಮೂರ್ತಿ ಅವರ ಮನವಿಯ ಮೇರೆಗೆ ಜಯಲಲಿತಾ ಅವರನ್ನು ಕೊಠಡಿಯಿಂದ ಆಚೆ ಕರೆದೊಯ್ಯುವಾಗ ಸಿಸಿಟಿವಿ ಕ್ಯಾಮರಾ ಆಫ್ ಮಾಡುತ್ತಿದ್ದೆವು. ಜತೆಗೆ ಜಯಲಲಿತಾ ಭದ್ರತೆಗಾಗಿ ನಿಯೋಜಿತರಾಗಿದ್ದ, ಆರ್. ವೀರಪೆರುಮಾಳ್, ಎಸ್. ಪೆರುಮಾಳ ಸ್ವಾಮಿ ಮತ್ತು ಸುಧಾಕರ್ ಅವರೂ ಸಿಸಿಟಿವಿ ಕ್ಯಾಮರಾ ಆಫ್ ಮಾಡುವಂತೆ ಮನವಿ ಮಾಡಿದ್ದರು ಎಂದು ಅಫಿಡವಿಟ್ನಲ್ಲಿ ಆಸ್ಪತ್ರೆ ಹೇಳಿದೆ.

ಅಲ್ಲಿಗೆ ಸಿಸಿಟಿವಿ ಕ್ಯಾಮರಾ ಆಫ್ ಮಾಡುವಂತೆ ಗುಪ್ತಚರ ವಿಭಾಗದ ಐಜಿಪಿ ಕೆ.ಎನ್. ಸತ್ಯಮೂರ್ತಿ ಮನವಿ ಮಾಡಿರುವುದು ಸ್ಪಷ್ಟವಾಗಿದೆ. ಗುಪ್ತಚರ ಇಲಾಖೆ ನೇರವಾಗಿ ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿರುತ್ತದೆ. ಒಂದು ಮಾಹಿತಿ ಪ್ರಕಾರ ಜಯಲಲಿತಾ ಅವರ ಕೊನೆಯ ದಿನಗಳಲ್ಲಿ ಸಿಎಂ ಕಚೇರಿ ಮನ್ನಾರ್ ಗುಡಿ ಕುಟುಂಬದ ಕಂಟ್ರೋಲ್ ನಲ್ಲಿತ್ತು. ಅಂದರೆ ಶಶಿಕಲಾ ಅವರೇ ಸೂಪರ್ ಸಿಎಂ ಆಗಿದ್ದರು.

ಅಲ್ಲಿಗೆ ಏನಾಗಿರಬಹುದು ಅನ್ನುವುದನ್ನು ಊಹಿಸಿಕೊಳ್ಳಲು ಕ್ಷಣಗಳು ಕೂಡಾ ಬೇಕಾಗಿಲ್ಲ.

Advertisements

Leave a Reply

%d bloggers like this: