ಹಣದಾಸೆಗೆ ಹೆಣ್ಣಿನ ವೇಷ ತೊಟ್ಟು ಮಂಗಳೂರು ಮೂಲದ ಹಾಸ್ಯ ನಟನೊಬ್ಬನ್ನು ಬೆದರಿಸಲು ಹೋಗಿ ಇಬ್ಬರು ವ್ಯಕ್ತಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಬೆಂಗಳೂರು ತ್ರಿವೇಣಿ ಕ್ರಾಸ್ನ ಆದಿತ್ಯ ಅಲಿಯಾಸ್ ಅಶ್ವಿನಿ (19), ರಾಮನಗರ ಜಿಲ್ಲೆಯ ಕನಕಪುರದ ಅರುಣ್ ಎಚ್.ಎಸ್. (27) ಬಂಧಿತ ಆರೋಪಿಗಳು. ಆರೋಪಿ ಆದಿತ್ಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಅಶ್ವಿನಿ ಅನ್ನುವ ಹೆಸರಲ್ಲಿ ಖಾತೆ ತೆರಿದಿದ್ದ. ಜೊಲ್ಲು ಪಾರ್ಟಿಗಳನ್ನು ಟಾರ್ಗೇಟ್ ಮಾಡಿದ್ದ ಈತ ಮಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಫೇಸ್ಬುಕ್ ಮೂಲಕ ಪರಿಚಯಿಸಿಕೊಂಡಿದ್ದ. ಇಬ್ಬರು ಕೂಡ ಚಾಟಿಂಗ್ ಮಾಡುತ್ತಿದ್ದರು.
ಚಾಟಿಂಗ್ ಗಡಿ ದಾಟಿದೆ. ಬೆತ್ತಲೆ ಫೋಟೋ ಕಳುಹಿಸುವ ತನಕ ಮುಂದುವರಿದಿದೆ. ಅಶ್ವಿನಿ ಫೋಟೋ ಕಳುಹಿಸುವಂತೆ ಮಂಗಳೂರಿನ ವ್ಯಕ್ತಿಗೆ ಕೇಳಿದ ಬೆನ್ನಲ್ಲೇ, ಇವರು ಫೋಟೋ ಕಳುಹಿಸಿದ್ದರು.
ಅಲ್ಲಿಂದ ಬೆದರಿಕೆ ಶುರುವಾಗಿದೆ. ಭಾವಚಿತ್ರವನ್ನು ಪಡೆದುಕೊಂಡ ಆರೋಪಿಗಳು, ಹುಡುಗಿಯೊಬ್ಬಳಿಗೆ ಬೆತ್ತಲೆ ಫೋಟೋ ಕಳುಹಿಸಿರುವ ಆರೋಪದಲ್ಲಿ ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ದೂರು ಬೇಡ ಅನ್ನುವುದಾದರೆ 65,000 ಹಣ ಕೊಡಿ ಅಂದಿದ್ದಾರೆ. ಬುದ್ದಿವಂತರ ಜಿಲ್ಲೆಯ ದಡ್ಡ ಮಂಗಳೂರಿನಿಂದ ಬೆಂಗಳೂರಿಗೆ ಬಂದು ಯಶವಂತಪುರದಲ್ಲಿ 65 ಸಾವಿರ ರೂಪಾಯಿ ಕೊಟ್ಟಿದ್ದಾರೆ.
ಆದರೆ ದುಷ್ಕರ್ಮಿಗಳು ಪದೇ ಪದೇ ಫೋನ್ ಮಾಡಿ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಕಂಗೆಟ್ಟ ವ್ಯಕ್ತಿ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ನೀಡಿದ್ದರು.
ಹೀಗಾಗಿ ಮತ್ತೆ ಹಣ ಕೊಡುವುದಾಗಿ ಆರೋಪಿಗಳನ್ನು ನಂಬಿಸಿ, ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಆರೋಪಿಗಳನ್ನು ಕರೆಸಲಾಗಿದೆ. ಈ ವೇಳೆ ಕಾಸಿನಾಸೆಗೆ ಬಂದ ಆರೋಪಿಗಳನ್ನು ಮಪ್ತಿಯಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ.ಬಂಧನದ ವೇಳೆ ಆರೋಪಿಗಳಲ್ಲಿ ಒಬ್ಬರು ಹೆಣ್ಣಲ್ಲ ಗಂಡು ಎಂದು ತಿಳಿದು ಪೊಲೀಸರೇ ಬೇಸ್ತು ಬಿದ್ದಿದ್ದಾರೆ.