Advertisements

ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲಿಲ್ಲ : 8-10 ಗಂಟೆ ನಿಲ್ಲುವ ತಾಳ್ಮೆಯುಳ್ಳವರು ಮಾತ್ರ ಬನ್ನಿ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಮಹಿಳಾ ಭಕ್ತಾದಿಗಳ ಸ್ವಾಗತಕ್ಕೆ ಸಿದ್ದತೆಗಳು ಜೋರಾಗಿದೆ.

ಸುಪ್ರೀಂಕೋರ್ಟ್ ತೀರ್ಪು ಜಾರಿ ಹಿನ್ನಲೆಯಲ್ಲಿ ಮಹಿಳೆಯರಿಗೆ ಸೌಲಭ್ಯ ಕಲ್ಪಿಸುವ ವಿಷಯವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆದಿದ್ದು, ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ, ಆದರೆ ದೇವಾಲಯದಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡುವುದು ಅಪ್ರಾಯೋಗಿಕ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುವವರು 8-10 ಗಂಟೆಗಳ ವರೆಗೆ ನಿಲ್ಲಬೇಕಾಗುತ್ತದೆ, ಇದು ಮಹಿಳೆಯರಿಗೂ ಅನ್ವಯವಾಗಲಿದೆ. 8-10 ಗಂಟೆಗಳು ಸರತಿ ಸಾಲಿನಲ್ಲಿ ನಿಲ್ಲುವ ತಾಳ್ಮೆ ಇರುವವರಷ್ಟೇ ಬನ್ನಿ ಎಂದು ದೇವಸ್ವಂ ಸಚಿವ ಸುರೇಂದ್ರನ್ ತಿಳಿಸಿದ್ದಾರೆ.

ಮಹಿಳೆಯರೊಂದಿಗೆ ಕುಟುಂಬದ ಪುರುಷ ಸದಸ್ಯರೂ ಇರುತ್ತಾರೆ. ಆದರೆ ಮಹಿಳೆಯರಿಗೆಂದೇ ಪ್ರತ್ಯೇಕ ಸರತಿ ಸಾಲು ಮಾಡಿದರೆ ಆ ಮಹಿಳೆಯರು ಕುಟುಂಬದ ಬೇರೆ ಸದಸ್ಯರಿಂದ ಪ್ರತ್ಯೇಕವಾಗಿ ನಿಲ್ಲಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಪ್ರತ್ಯೇಕ ಸರತಿ ಸಾಲನ್ನು ಹೊರತುಪಡಿಸಿದರೆ, ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ, ಸ್ನಾನ ಘಟ್ಟಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಸ್ವಂ ಸಚಿವ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

Advertisements

Leave a Reply

%d bloggers like this: