Advertisements

ಪರಮೇಶ್ವರ್ ಬಂದರು ದಾರಿ ಬಿಡಿ – ಝೀರೋ ಟ್ರಾಫಿಕ್ ನಲ್ಲಿ ಡಿಸಿಎಂ ದರ್ಬಾರ್

ಬೆಂಗಳೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಬಿಬಿಎಂಪಿಯ ಕರ್ಮಕಾಂಡದಿಂದ ರಸ್ತೆಗಳಲ್ಲಿ ನೀರು ಸೊಂಟದ ತನಕ ನಿಲ್ಲುತ್ತಿದೆ. ಹೀಗಾಗಿ ಮನೆ, ಕಚೇರಿ ಸೇರಬೇಕಾದವರು ರಸ್ತೆಯಲ್ಲೇ ನಿಲ್ಲುವಂತಾಗಿದೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಂಗಳೂರಿಗರು ಟ್ರಾಫಿಕ್ ಜಾಮ್ ನಿಂದ ಹೈರಣಾಗಿದ್ದಾರೆ. ಅದರಲ್ಲೂ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಇಂದು ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಂತಿತ್ತು. ಇದರಿಂದ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿತ್ತು.

 

ಆದರೆ ಜನ ಇಷ್ಟೆಲ್ಲಾ ಸಂಕಷ್ಟದಲ್ಲಿದ್ದರೂ ಡಿಸಿಎಂ, ಗೃಹ ಸಚಿವ,ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ಮಾತ್ರ ಜನರ ಸಂಕಷ್ಟಕ್ಕೂ ತಮಗೂ ಸಂಬಂಧವಿಲ್ಲ ಅನ್ನುವಂತೆ ವರ್ತಿಸಿದ್ದಾರೆ.

ಜನ ಮಳೆ ಅವಾಂತರದಿಂದ ತತ್ತರಿಸಿದ್ದರೆ ( ಹಾಗಂತ ಮಳೆಯಿಂದ ಆಗಿರುವ ಸಮಸ್ಯೆಯಲ್ಲ, ಬಿಬಿಎಂಪಿ, ಸರ್ಕಾರ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ನಲ್ಲಿ ಸಂಚರಿಸಿ ಅಧಿಕಾರದ ಮದ ಏನು ಎಂದು ತೋರಿಸಿದ್ದಾರೆ.

ಮಧ್ಯಾಹ್ನವೇ ಬೆಂಗಳೂರಿನಲ್ಲಿ ಮಳೆ ಶುರುವಾಗಿತ್ತು. ಬಹುತೇಕ ರಸ್ತೆಗಳಲ್ಲಿ ವಾಹನ ತುಂಬಿ ಹೋಗಿತ್ತು.ಆಗ್ಲೇ ಡಿಸಿಎಂ ಪರಮೇಶ್ವರ್ ಸವಾರಿ ಯಲಹಂಕ ಕಡೆಗೆ ಹೊರಟಿತ್ತು.ಸಾಮಾನ್ಯರಂತೆ ಹೋಗಿದ್ದರೆ ತೊಂದರೆ ಇರಲಿಲ್ಲ. ಜನ ಟ್ರಾಫಿಕ್ ಜಾಮ್ ಸಿಕ್ಕಿ ನರಳುತ್ತಿದ್ದರೆ, ಝಿರೋ ಟ್ರಾಫಿಕ್ ಮಾಡಿಕೊಂಡು ಮಾನ್ಯ ಸಚಿವರು ಹೋಗಿದ್ದಾರೆ. ಇದು ಗಾಯ ಮೇಲೆ ಉಪ್ಪು ಸವರಿದಂತಾಗಿದೆ. ಮೊದಲೇ ಜಾಮ್, ಈ ನಡುವೆ ಝೀರೋ ಟ್ರಾಫಿಕ್ ಕಾರಣದಿಂದ ಮತ್ತಷ್ಟು ವಾಹನ ದಟ್ಟಣೆ ಹೆಚ್ಚಾಯ್ತು.

ಹೇಳಿ ಕೇಳಿ ಏರ್ ಪೋರ್ಟ್ ರಸ್ತೆ ನಿತ್ಯ ಟ್ರಾಫಿಕ್ ಜಾಮ್ ನಿಂದ ತುಂಬಿ ಹೋಗಿರುತ್ತದೆ. ಮಳೆಯಿಂದ ರಸ್ತೆ ಮೇಲೆ ಒತ್ತಡ ಮತ್ತಷ್ಟು ಹೆಚ್ಚಾಯ್ತು. ಈ ನಡುವೆ ಪರಮೇಶ್ವರ್ ಅವರ ಕೊಡುಗೆ ಬೇರೆ.

ಪಾಪ ಪೊಲೀಸರೇನೂ ಮಾಡಲು ಸಾಧ್ಯ, ಮೇಲಿನಿಂದ ಆದೇಶ ಬಂದ ಮೇಲೆ ಜನರ ಕೆಂಗಣ್ಣಿಗೆ ಗುರಿಯಾದರೂ ಪರವಾಗಿಲ್ಲ, ಕೆಲಸಕ್ಕೆ ಕುತ್ತು ಬರಬಾರದು ಎಂದು ಕರ್ತವ್ಯ ನಿಷ್ಠೆ ತೋರುತ್ತಾರೆ.

ಪರಮೇಶ್ವರ್ ಅವರೇ ಇನ್ನಾದರೂ ದಯವಿಟ್ಟು ನಿಮ್ಮ ಅಧಿಕಾರದ ದರ್ಪ ನಿಲ್ಲಿಸಿ, ಜನ ಸಾಮಾನ್ಯರಂತೆ ಓಡಾಡುವುದನ್ನು ಮೊದಲು ಕಲಿಯಿರಿ.

Advertisements

Leave a Reply

%d bloggers like this: