Advertisements

ಪತಿಗೆ ಪತ್ನಿಯ ಟಾರ್ಗೇಟ್ – ಮೂರು ಸರ ಕದಿಯದಿದ್ದರೆ ಮನೆಗೆ ನೋ ಎಂಟ್ರಿ

ಅದು ಜೂನ್ 17 ಜ್ಞಾನಭಾರತಿ ಠಾಣೆ ಪೇದೆ ಚಂದ್ರಕುಮಾರ್‌ ಗಸ್ತಿನಲ್ಲಿದ್ದ ವೇಳೆಯಲ್ಲಿ ಎದುರಿನಿಂದ ಬಂದ ಪಲ್ಸರ್‌ ಬೈಕ್‌ ಏಕಾಏಕಿ ಯು ಟರ್ನ್‌ ಪಡೆದುಕೊಂಡು ವೇಗವಾಗಿ ಹೋಗಿತ್ತು. ತಕ್ಷಣ ಚಂದ್ರಕುಮಾರ್‌ ಅವರು ನಾಲ್ಕು ಕಿ.ಮೀ ತನಕ ಸಾಗಿ ಬೈಕ್‌ಗೆ ಡಿಕ್ಕಿ ಹೊಡೆಸಿ, ಬೈಕ್ ಸವಾರನನ್ನು ಬೀಳಿಸಿದ್ದರು. ಬಳಿಕ ಚಂದ್ರಕುಮಾರ್‌ ಕೊಟ್ಟ ಮಾಹಿತಿ ಪ್ರಕಾರ ಇನ್ನಷ್ಟು ಸಿಬ್ಬಂದಿ ಧಾವಿಸಿ ಬಂದು ಆತನನ್ನು ಹಿಡಿದು ಜ್ಞಾನಭಾರತಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಈ ವೇಳೆ ಅಚ್ಯುತಕುಮಾರ್‌ ತಾನೊಬ್ಬ ಸರಗಳ್ಳ ಎಂದು ಒಪ್ಪಿಕೊಂಡಿದ್ದ. ಆ ನಂತರ ಸಿಸಿಟಿವಿಯಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಆತನೇ ಒಂಟಿ ಸರಗಳ್ಳ ಎನ್ನುವುದು ಖಚಿತವಾಗಿತ್ತು.

ಬಳಿಕ ಅಚ್ಯುತನನ್ನು ಸರಗಳ್ಳತನ ಮಾಡಿದ್ದ ಸ್ಥಳಗಳಿಗೆ ಮಹಜರ್‌ಗೆಂದು ಪೊಲೀಸರು ಕರೆದೊಯ್ಯುತ್ತಿದ್ದರು. ಜೂ.18ರ ನಸುಕಿನ 2.30ರ ಸುಮಾರಿಗೆ ಪೊಲೀಸರ ಕಾರಿನಲ್ಲಿ ಆರೋಪಿಯನ್ನು ಮಹಜರ್‌ಗೆ ಕರೆದೊಯ್ಯಲಾಗುತ್ತಿತ್ತು.

ಈ ವೇಳೆ ಅಚ್ಯುತ, ಮೂತ್ರ ವಿಸರ್ಜನೆ ಮಾಡಬೇಕೆಂದು ಪೊಲೀಸರಿಗೆ ವಿನಂತಿಸಿದ್ದ. ಅದರಂತೆ ಸ್ಯಾಟಲೈಟ್‌ ಕ್ಲಬ್‌ ಪಕ್ಕದಲ್ಲಿ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ತನ್ನನ್ನು ಹಿಡಿದಿದ್ದ ಇಬ್ಬರು ಪೇದೆಗಳನ್ನು ತಳ್ಳಿದ ಅಚ್ಯುತ ಕುಮಾರ್‌ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ.

ತಕ್ಷಣ ಪೊಲೀಸರು ಆತ ತಪ್ಪಿಸಿಕೊಂಡ ಸ್ಥಳಕ್ಕೆ ಸಂಪರ್ಕ ಹೊಂದಿರುವ ಎಲ್ಲ ರಸ್ತೆಗಳಲ್ಲೂ ನಾಕಾಬಂದಿ ಏರ್ಪಡಿಸಿ ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಹುಡುಕಾಡಿದ್ದಾರೆ.

ಬೆಳಗ್ಗೆ 5.40ರ ವೇಳೆಗೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬನಶಂಕರಿ 6ನೇ ಹಂತದ ಖಾಲಿ ಜಾಗದಲ್ಲಿದ್ದ ಆರೋಪಿ ಬಚ್ಚಿಕೊಂಡಿರುವುದನ್ನು ಎಎಸ್‌ಐ ವೀರಭದ್ರಯ್ಯ ಪತ್ತೆಹಚ್ಚಿದ್ದರು. ತಕ್ಷಣ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಬಂಧಿಸಲು ಮುಂದಾಗಿದ್ದರು.

ಈ ವೇಳೆ ಅಚ್ಯುತ ಚಾಕು ಬೀಸಲು ಆರಂಭಿಸಿದ್ದ. ಅದಕ್ಕೆ ಬೆದರದ ಪೇದೆ ಚಂದ್ರಕುಮಾರ್‌ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಚಂದ್ರಕುಮಾರ್‌ ಅವರಿಗೆ ಆರೋಪಿ ಇರಿದಿದ್ದಾನೆ. ತಕ್ಷಣ ಸಬ್‌ಇನ್ಸ್‌ಪೆಕ್ಟರ್‌ ಪ್ರವೀಣ್‌ ಎಲಿಗಾರ್‌ ಅವರು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಆದರೆ, ಅಚ್ಯುತ ಚಾಕು ಬೀಸುವುದನ್ನು ನಿಲ್ಲಿಸಿರಲಿಲ್ಲ. ತಕ್ಷಣ ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದುಕೊಂಡ ಪೊಲೀಸರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದರು.

CrimeChain_nnr_newsk_32914

ಕಾರ್ಯಾಚರಣೆ ನಡೆಸಿದ ಎಸಿಪಿ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ನೀಡಿದ್ದ ನಗರ ಪೊಲೀಸ್‌ ಆಯುಕ್ತರು ಆರೋಪಿಯನ್ನು ಎರಡು ಬಾರಿ ಬೆನ್ನಟ್ಟಿ ಹಿಡಿದ ಚಂದ್ರಕುಮಾರ್‌ಗೆ ಪ್ರತ್ಯೇಕವಾಗಿ ಒಂದು ಲಕ್ಷ ರೂ ಬಹುಮಾನ ಹಾಗೂ ದಕ್ಷಿಣ ಭಾರತ ಪ್ರವಾಸಕ್ಕೆ ತೆರಳಲು ಒಂದು ತಿಂಗಳ ರಜೆ ನೀಡಿದ್ದರು. ಇದು ದೊಡ್ಡ ಸುದ್ದಿಯಾಗಿರುವುದು ನಿಮಗೆ ನೆನಪಿರಬಹುದು.

ಬಳಿಕ ಅಚ್ಯುತನನ್ನು ವಿಚಾರಣೆ ಮಾಡಿದಾಗ ಬೆಳಗ್ಗೆ ಮೂರು ಗಂಟೆ, ರಾತ್ರಿ ಮೂರು ಗಂಟೆ ಮಾತ್ರ ಸರ ಅಪಹರಣ ಮಾಡುತ್ತಿದ್ದ ಅನ್ನುವ ಕುತೂಹಲಕಾರಿ ಅಂಶ ಬಯಲಾಗಿತ್ತು.

ಬೆಳಗ್ಗೆ 5 ಗಂಟೆಗೆ ಪಲ್ಸರ್‌ ಬೈಕ್ ಹತ್ತುವ ಈತ 8 ಗಂಟೆವರೆಗೂ ಸುತ್ತಾಡಿ ಎರಡು ಕಡೆ ಸರಗಳ್ಳತನ ಮಾಡುತ್ತಿದ್ದ. ಸಂಜೆ 7 ಗಂಟೆಗೆ ಕತ್ತಲು ಆವರಿಸುತ್ತಿದ್ದಂತೆ ಕುಂಬಳಗೋಡಿನಿಂದ ಹೊರಟು ನಗರ ಪ್ರವೇಶಿಸಿ 10 ಗಂಟೆವರೆಗೂ ಸುತ್ತಾಡಿ ಮತ್ತೆರಡು ಸರಗಳ್ಳತನ ಮಾಡಿಕೊಂಡು ಮನೆ ಸೇರುತ್ತಿದ್ದ. ಈ ರೀತಿ 70ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದ. ಗ್ಯಾಂಗ್‌ ಕಟ್ಟಿಕೊಳ್ಳದೆ, ಒಂಟಿಯಾಗಿ ಕೃತ್ಯ ನಡೆಸುತ್ತಿದ್ದ ಹಾಗೂ ಈತ ಇದೇ ಮೊದಲ ಬಾರಿಗೆ ಬಂಧನಕ್ಕೆ ಒಳಗಾಗಿದ್ದ ಅನ್ನುವುದು ಬಯಲಾಗಿತ್ತು.

ಅದ್ಯಾಕೆ ಶಿಫ್ಟ್ ನಲ್ಲಿ ಕಳ್ಳತನ ಮಾಡುತ್ತೀಯಾ ಎಂದು ಪೊಲೀಸರು ಕೇಳಿದರೆ ಅವನು ಕೊಟ್ಟ ಉತ್ತರ ಶಾಕಿಂಗ್ ಆಗಿತ್ತು.
ಅಚ್ಯುತನ ಪತ್ನಿ ಮಹಾದೇವಿ (29) ಪತಿ ಕೈಯಲ್ಲಿ ಸರಗಳ್ಳತನ ಮಾಡಿಸುತ್ತಿದ್ದಳಂತೆ. ಪ್ರತಿ ದಿನ ಕನಿಷ್ಟ ಮೂರು ಚೈನ್ ಕಳ್ಳತನ ಮಾಡಬೇಕು ಎಂದು ಪತಿಗೆ ಟಾರ್ಗೆಟ್ ಬೇರೆ ಕೊಟ್ಟಿದ್ದಳಂತೆ.

ಈ ಮಾಹಿತಿಯನ್ನು ಆಧರಿಸಿದ ಪೊಲೀಸರು ಮಹಾದೇವಿ ಬಂಧನಕ್ಕೆ ಬಲೆ ಬೀಸಿದ್ದರು, ಆದರೆ ಅಚ್ಯುತನಿಗೆ ಗುಂಡೇಟು ತಗುಲಿದ ಸುದ್ದಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆಕೆ ಎಸ್ಕೇಪ್ ಆಗಿದ್ದಳು. ಪೊಲೀಸರು ಕಳೆದ ಮೂರು ತಿಂಗಳಿನಿಂದ ಹುಡುಕಾಡಿ ಇದೀಗ ಸುಮಾರು 100 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ ಕುಮಾರ್ ಪತ್ನಿ ಮಹಾದೇವಿಯನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮಾಡುವಂತೆ ಪತಿಯನ್ನು ಒತ್ತಾಯಿಸಿದ್ದಳು ಎಂದು ಅಚ್ಯುತ್ ಕುಮಾರ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದು,ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಮೊದಲ ಪತಿಗೆ ಕೈಕೊಟ್ಟು ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಮಹಾದೇವಿ ದಿನಕ್ಕೆ ಕನಿಷ್ಟ ಮೂರ್ನಾಲ್ಕು ಸರಗಳ್ಳತನ ಮಾಡಲೇಬೇಕೆಂದು ಗಂಡನಿಗೆ ತಾಕೀತು ಮಾಡಿದ್ದಳು. ಹೆಂಡತಿ ಮಾತಿನಂತೆಯೇ ಅಚ್ಯುತ್ ಕುಮಾರ್ ಕಳ್ಳತನ ಮಾಡುತ್ತಿದ್ದನ್ನು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದು ಕೋಟಿ ರು. ಬೆಲೆಬಾಳುವ ಸರಗಳ್ಳತನ ಮಾಡಿದ್ದ ಅನ್ನುವುದೇ ವಿಶೇಷ.

Advertisements

Leave a Reply

%d bloggers like this: