ಪತ್ನಿಯ ಶವದ ಅಂತ್ಯ ಸಂಸ್ಕಾರಕ್ಕೆ ಜಾಗ ಸಿಗದೆ ಮನೆಯೊಳಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಪತಿ

ಸ್ವಂತ ಜಮೀನಿಲ್ಲದ ಕಾರಣ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಮನೆಯೊಳಗೆ ಅಂತ್ಯ ಸಂಸ್ಕಾರ ಮಾಡಿದ ಘಟನೆ ಬಿಹಾರದ ಮಾದೇಪುರ ಜಿಲ್ಲೆಯಲ್ಲಿ ನಡೆದಿದೆ.

ದಿನಗೂಲಿ ಕಾರ್ಮಿಕರಾದ ಹರಿನಾರಾಯಣ ಋಷಿದೇವ್(40) ಮಹಾದಲಿತ್ ವರ್ಗಕ್ಕೆ ಸೇರಿದವರಾಗಿದ್ದಾರೆ. ಕುಮಾರಖಂಡ ಬ್ಲಾಕ್ ನ ಖೇತ್ವ ಗ್ರಾಮದಲ್ಲಿ ವಾಸಿಸುತ್ತಿದ್ದ ಇವರ ಪತ್ನಿ ಸಹೋಗ್ಯ(35) ಅತಿಸಾರದಿಂದ ರವಿವಾರ ಮೃತಪಟ್ಟಿದ್ದರು.

ಆದರೆ ಇವರು ಮಹಾದಲಿತ್ ವರ್ಗಕ್ಕೆ ಸೇರಿದವರು ಅನ್ನುವ ಕಾರಣಕ್ಕೆ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಬಿಡಲಿಲ್ಲ. ಇನ್ನು ಜಿಲ್ಲೆಯ ಸಾರ್ವಜನಿಕ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅಗತ್ಯ ಸೌಲಭ್ಯಗಳಿರಲಿಲ್ಲ. ಮಾತ್ರವಲ್ಲದೆ ಇವರ ಸಮುದಾಯಕ್ಕೆ ಮೀಸಲಾದ ಪ್ರತ್ಯೇಕ ಸ್ಮಶಾನದ ವ್ಯವಸ್ಥೆಯೂ ಇರಲಿಲ್ಲ.

ತಮ್ಮ ಜಮೀನಿನಲ್ಲಿ ಶವಸಂಸ್ಕಾರ ಮಾಡೋಣ ಅಂದರೆ ಸೂರಿನ ಅಡಿ ಬಿಟ್ಟರೆ ಒಂದಿಂಚು ಜಾಗ ಇವರ ಬಳಿ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ತನ್ನ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ಮನೆಯೊಳಗೆ ಮುಗಿಸಿ, ಮನೆಯೊಳಗೆ ಅಂತಿಮ ಸಂಸ್ಕಾರವನ್ನೂ ನೆರವೇರಿಸಿದ್ದಾರೆ.

ಘಟನೆ ನೋಡಿದರೆ ದಮನಿತ ಮತ್ತು ಹಿಂದುಳಿದ ಸಮುದಾಯಕ್ಕೆ ಸಮಾಧಾನದಿಂದ ಸಾಯುವ ಹಕ್ಕು ಇಲ್ಲದಂತಾಗಿದೆ. ಸತ್ತ ಮೇಲೂ ಈ ಸಮುದಾಯವನ್ನು ನೆಮ್ಮದಿಯಾಗಿ ಸಮಾಜ ಬಿಡದಿರುವುದು ದುರಂತವೇ ಸರಿ.

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ Madhepura’s sub-divisional officer ಬೃಂದ ಲಾಲ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿನಾರಾಯಣ ಋಷಿದೇವ್ ನನ್ನ ಸಂಕಷ್ಟದ ಬಳಿಕವಾದರೂ ಸರ್ಕಾರ ಕಣ್ಣು ತೆರೆಯಲಿ. ನನಗೆ ಬಂದ ಸಂಕಷ್ಟ ಇನ್ಯಾರಿಗೂ ಬಾರದಿರಲಿ. ನಮ್ಮ ಸಮುದಾಯಕ್ಕೂ ಒಂದು ಸ್ಮಶಾನವಿರಲಿ ಎಂದು ಮನವಿ ಮಾಡಿದ್ದಾರೆ.

%d bloggers like this: