Advertisements

ಅಚಲ ಮನಸ್ಸಿನ ಗುರಿಕಾರ – ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದ ವೀರ

ಮೊದಲ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕವಿ ಹೃದಯದ ವಾಜಪೇಯಿ ಅವರಲ್ಲಿ ಕನಸುಗಳು ಸಾಕಷ್ಟಿತ್ತು. ವಿಶ್ವದ ಮುಂದೆ ಭಾರತ ತಲೆ ಎತ್ತಿ ನಡೆಯುವಂತೆ ಮಾಡಬೇಕು ಅನ್ನುವ ಹುಮ್ಮಸ್ಸಿತ್ತು. ಹೀಗಾಗಿಯೇ  ವಿಜ್ಞಾನಿಗಳನ್ನು ಕರೆದ ವಾಜಪೇಯಿ ಕೇಳಿದ್ದು ಒಂದೇ ಮಾತು,”ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ” ಎಂದು. ಮುಂದೆ ಕೂತಿದ್ದ ವಿಜ್ಞಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮ ಸಾಹಸಕ್ಕೆ ಬೆನ್ನೆಲುಬಿನಂತೆ ನಿಲ್ಲಬಲ್ಲ ವ್ಯಕ್ತಿಯೊಬ್ಬನಿದ್ದಾನೆ ಎಂದು ಅವರು ಮಂದಹಾಸ ಸೂಚಿಸಿದರು.

ಕೆಲಸವೇನೋ ಶುರುವಾಯ್ತು, ಆದರೆ 13 ದಿನಕ್ಕೆ ಸರ್ಕಾರ ಪತನಗೊಂಡಿತು. ಹೀಗಾಗಿ ಹೊಸ ಉತ್ಸಾಹದಿಂದ ಅಣು ಪರೀಕ್ಷೆಯ ಸಿದ್ದತೆ ಮಾಡಿಕೊಂಡಿದ್ದ ವಿಜ್ಞಾನಿಗಳು ನಿರಾಶೆಗೊಂಡರು. ಆದರೂ ಪಟ್ಟು ಬಿಡದೆ ಬಳಿಕ ಪ್ರಧಾನಿ ಪಟ್ಟಕ್ಕೇರಿದ ದೇವೇಗೌಡ, ಐಕೆ ಗುಜ್ರಾಲ್ ಮುಂದೆ ಅಣು ಪರೀಕ್ಷೆಯ ಕಡತವಿಟ್ಟರು. ಆದರೆ ಇಚ್ಛಾಶಕ್ತಿಯ ಕೊರತೆ ವಿಜ್ಞಾನಿಗಳ ಕನಸಿಗೆ ತಣ್ಣೀರು ಎರಚಿತು.

ಹಾಗಂತ ವಿಜ್ಞಾನಿಗಳು ನಿರಾಸೆಗೊಂಡಿರಲಿಲ್ಲ.ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬಲ್ಲ ಧೀರನೊಬ್ಬ ಬಂದೇ ಬರುತ್ತಾನೆ, ವೀರತ್ವ ತೋರಿಸಿಯೇ ತೋರುತ್ತಾನೆ ಎಂದು ಅವರು ಕಾದಿದ್ದರು.

ಹಾಗೇ ಆಯ್ತು ದೈವದ ಇಚ್ಛೆ ಅನ್ನುವಂತೆ 1998ರ ಮಾರ್ಚ್ ತಿಂಗಳಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ವಾಜಪೇಯಿ ಹಿಡಿದರು. ಆಗ ಅವರು ಕೈಗೆತ್ತಿಕೊಂಡಿದ್ದು ಅಪರೇಷನ್ ಶಕ್ತಿ ಹೆಸರಿನ ಅಣು ಪರೀಕ್ಷೆ ಯೋಜನೆ. 1974ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಅಣು ಪರೀಕ್ಷೆ ಮಾಡಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದರು. ಆದರೆ ಬಳಿಕ ಭಾರತ ತನ್ನ ಸಾಮರ್ಥ್ಯ ತೋರಿಸಿರಲಿಲ್ಲ.

ಆದರೆ ವಾಜಪೇಯಿಯವರು ಭಾರತದ ತಾಕತ್ತನ್ನು ವಿಶ್ವದ ಮುಂದೆ ಪ್ರದರ್ಶಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದರು. ಹೀಗಾಗಿಯೇ ಅಣು ಪರೀಕ್ಷೆಯ ನಡೆಸುವ ನಿರ್ಧಾರಕ್ಕೆ ಬಂದರು. ಸರ್ಕಾರ ಎಷ್ಟು ದಿನ ಇರುತ್ತದೆ ಅನ್ನುವುದು ಅವರಿಗೆ ಗೊತ್ತಿರಲಿಲ್ಲ. ಜೊತೆಗೆ ಅಣ್ವಸ್ತ್ರ ಪರೀಕ್ಷೆಯಿಂದ ಬರುವ ವಿಶ್ವದ ವಿರೋಧವನ್ನು ಎದುರಿಸಲು ಸಜ್ಜಾಗಬೇಕಿತ್ತು.  ಹೀಗಾಗಿ ಅಬ್ದುಲ್ ಕಲಾಂ ,ಡಾ. ಆರ್ ಚಿದಂಬರಂರನ್ನು ಕರೆದು ಯೋಜನೆ ಜಾರಿಗೊಳಿಸಲು ಸಾಧ್ಯವೇ ಎಂದು ಕೇಳಿದರು.

ನೀವು ಅಧಿಕಾರದಿಂದ ಕೆಳಗಿಳಿದ ನಂತರವೂ, ನಮ್ಮ ಸಂಶೋಧನೆ ನಿಂತಿರಲಿಲ್ಲ. ಹೀಗಾಗಿ ಅಣ್ವಸ್ತ್ರ ಯಾಕೆ, ಹೈಡ್ರೋಜನ್ ಬಾಂಬ್ ಸಿಡಿಸಲು ಅನುಮತಿ ಕೊಡಿ ಎಂದರು. ದೇಶದ ಪರಮೋಚ್ಛ ನಾಯಕ ಹಸಿರು ನಿಶಾನೆ ತೋರಿದರು. ಆದರೆ ಜಾರಿ ಅಷ್ಟು ಸುಲಭವಿರಲಿಲ್ಲ. ಅಮೆರಿಕಾ ಉಪಗ್ರಹಗಳು ಭಾರತದ ನೆಲವನ್ನು ಅಂಗುಲ ಬಿಡದಂತೆ ಸ್ಕ್ಯಾನಿಂಗ್ ಮಾಡುತ್ತಿತ್ತು. ಅಮೆರಿಕಾ ಹಾಗೂ ಪಾಕಿಸ್ತಾನದ ಗೂಢಚಾರರು ಭಾರತದ ನೆಲದಲ್ಲಿ ಓಡಾಡುತ್ತಿದ್ದರು. ಆದರೂ ವಿಜ್ಞಾನಿಗಳು ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ.

ಉಪಗ್ರಹ ಮತ್ತು ಗೂಢಚಾರರ ಕಣ್ಣಿಗೆ ಮಣ್ಣೆರಚಿ ಮಾಡಬೇಕಾದ ಕೆಲಸದ ನೀಲ ನಕ್ಷೆ ರಚನೆಯಾಯ್ತು. ನೀರಾವರಿ ಕಾಮಗಾರಿ ಹೆಸರಿನಲ್ಲಿ ಪೋಖ್ರಾನ್ ನೆಲದಲ್ಲಿ ದೇಶದ ವೀರ ಸೈನಿಕರು ಗುಂಡಿ ಅಗೆದರು. ಯಾರೊಬ್ಬರಿಗೂ ತಾವು ಏನು ಮಾಡುತ್ತಿದ್ದೇವೆ ಎಂದು ಗೊತ್ತಿರಲಿಲ್ಲ. ಕಲಾಂ, ಚಿದಂಬರಂ , ವಾಜಪೇಯಿ ಹಾಗೂ ಅವರ ಕಾರ್ಯದರ್ಶಿ ಬ್ರಿಜೇಶ್ ಮಿಶ್ರಾರಿಗೆ ಅವರಿಗೆ ಮಾತ್ರ ಏನಾಗುತ್ತಿದೆ ಅನ್ನುವುದು ಗೊತ್ತಿತ್ತು.

ರಕ್ಷಣಾ ಸಚಿವ ಹಾಗೂ ಗೃಹ ಸಚಿವರಿಗೆ ಇಂತಹುದೊಂದು ಕೆಲಸ ನಡೆದಿದೆ ಎಂದು ಗೊತ್ತಾಗಿದ್ದು ಮೇ 10ರ ಸಂಜೆ.

ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸೈನಿಕರು ರಾತ್ರಿ ಹೊತ್ತಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರು. ಯಾರಿಗೂ ಅನುಮಾನ ಬಾರದಿರಲಿ ಎಂದು ಎಲ್ಲರೂ ಸೈನಿಕರ ಸಮವಸ್ತ್ರ ಧರಿಸಿದ್ದರು.

ಅಣು ಪರೀಕ್ಷೆಗೆ ಬೇಕಾದ ಎಲ್ಲಾ ಕೆಲಸಗಳು ಮುಕ್ತಾಯವಾಯ್ತು. ಇನ್ನೇನು ಕೆಲವೇ ಹೊತ್ತಿನಲ್ಲಿ ಇಡೀ ವಿಶ್ವ ಭಾರತದತ್ತ ತಿರುಗುತ್ತದೆ. ದೆಹಲಿಯ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್ ಜೀ, ಅಡ್ವಾಣಿ ಮತ್ತು ಜಾರ್ಜ್ ಹಾಗೂ ಬ್ರಿಜೇಶ್ ಮಿಶ್ರಾ ಆತಂಕದಲ್ಲಿ ಕೂತಿದ್ದರು.

ಆದರೆ ಮೇ 10ಕ್ಕೆ ಆಕಾಶ ಬಿರಿಯುವಂತಹ ಮಳೆ ಮರುಭೂಮಿಯಲ್ಲಿ ಸುರಿಯಿತು.ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ

ನೂಕಿತು. ಈ ನಡುವೆ ಯೋಜನೆಯ ಮಹತ್ವದ ಕೊಂಡಿಯಾಗಿದ್ದ ವಿಜ್ಞಾನಿ ಕಾಕೋಡ್ಕರ್ ರ ತಂದೆ ತೀರಿಕೊಂಡ ಸುದ್ದಿ ಬಂತು. ಊರಿಗೆ ಧಾವಿಸಿದ ಕಾಕೋಡ್ಕರ್ ತಂದೆಯ ಅಂತ್ಯ ಸಂಸ್ಕಾರ ಮುಗಿಸಿ , ಮುಂದಿನ ಕೆಲಸಗಳಿಗೆ ಕಾಯದೇ ವಾಪಾಸ್ ಬಂದಿದ್ದರು.

ಮರುದಿನದ ವೇಳೆಗೆ ಮೋಡಗಳೂ ತಿಳಿಯಾದವು. ಬಿರುಬಿಸಿಲೂ ಬಂತು. ಇನ್ನೇನು ಪರೀಕ್ಷೆ ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ ಎದ್ದಿತು. ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ ಮುಂದೆ ಹೋಯ್ತು. ವಿಜ್ಞಾನಿಗಳ ಮುಖದಲ್ಲಿ ಆತಂಕದ ಗೆರೆಗಳು ಮೂಡಿತ್ತು.

ಆದರೆ ಅದೃಷ್ಟ ವಿಜ್ಞಾನಿಗಳ ಕಡೆಗಿತ್ತು. ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು. ಮರಳು ಶಾಂತವಾಯ್ತು. ಒಂದು ಎರಡು ಮೂರು ಎಂದು ವಿಜ್ಞಾನಿಗಳು ಕೌಂಟ್ ಡೌನ್ ಎಣಿಸುತ್ತಿದ್ದಂತೆ ದೊಡ್ಡದೊಂದು ಸದ್ದು ಅಮೆರಿಕಾದ ವೈಟ್ ಹೌಸ್ ಕಿವಿಗೆ ತಟ್ಟಿತು. ಡೆಲ್ಲಿ ನಕ್ಕರೆ, ವಿಜ್ಞಾನಿಗಳು ಕುಣಿದರು, ದೇಶದ ಜನ ಭೇಷ್ ಅಂದರು. ನಂತರ ಎಲ್ಲವೂ ಇತಿಹಾಸ.

Advertisements

Leave a Reply

%d bloggers like this: