Advertisements

Protocol ಸ್ವಾರಸ್ಯ – ಶಿಷ್ಟಾಚಾರದ ಬಂಧಿಯಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುತ್ತಾರೆ ಅಂದಾಗ ಸಾಧನೆಗೆ ಸಂದ ಗೌರವ ಎಂದು ದೇಶ ಹೆಮ್ಮೆ ಪಟ್ಟಿತ್ತು. ಆದರೆ ವೆಂಕಯ್ಯ ನಾಯ್ಡು ಅವರಿಗೆ ಇದು ಸಂತೋಷ ಮತ್ತು ನೋವಿನ ದಿನಗಳಾಗಿತ್ತು. ಯಾಕೆ ಅನ್ನುವುದನ್ನು ಅವರೇ ಹೇಳಿದ್ದಾರೆ

“ ನಾನು ಉಪರಾಷ್ಟ್ರಪತಿಯಾಗುತ್ತಿದ್ದೇನೆ ಅನ್ನುವ ಸುದ್ದಿ ಸಿಕ್ಕಾಗ ನನ್ನ ಕಣ್ಣಲ್ಲಿ ನೀರು ಹರಿಯಿತು. ನನ್ನ ಜೊತೆಗಿದ್ದವರಿಗೆ ಹೇಳಿದೆ ನಾಳೆಯಿಂದ ನಾನು ಪಕ್ಷದ ಕಚೇರಿಗೆ ಹೋಗುವಂತಿಲ್ಲ. ಪಕ್ಷ ಅನ್ನುವುದು ನನಗೆ ತಾಯಿಯಂತೆ. ಹೀಗಾಗಿ ಪಕ್ಷ ಬಿಟ್ಟು ಬರಬೇಕಾದರೆ ನಾನು ನಿನ್ನ ಬಳಿ ಇನ್ನು ಮುಂದೆ ಬರುವುದಿಲ್ಲ. ನಿನ್ನ ಭೇಟಿಯಾಗುವುದಿಲ್ಲ. ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿ ಬಂದೆ”

ದಿಲ್ಲಿಯ ಮೌಲಾನಾ ಆಜಾದ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ದಕ್ಷಿಣ ಭಾರತದ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಔತಣ ಕೂಟದ ನಂತರ ಮಾತನಾಡಿದ ಅವರು ಉಪರಾಷ್ಟ್ರಪತಿ ಹುದ್ದೆಗೆ ಏರಿದ ನಂತರದ ಅನುಭವಗಳನ್ನು ಹಂಚಿಕೊಂಡರು.

“ ನನಗೆ ಜನರೊಂದಿಗೆ ವಿಮಾನ ಪ್ರಯಾಣ ಮಾಡುವಾಸೆ. ಆದರೆ ಭದ್ರತೆ ದೃಷ್ಟಿಯಿಂದ ಮಿಲಿಟರಿ ವಿಮಾನದಲ್ಲೇ ಓಡಾಡಬೇಕು. ಒಂದು ವೇಳೆ ಕಮರ್ಷಿಯಲ್ ವಿಮಾನ ಹತ್ತಿದರೆ 24 ಮಂದಿ ವೈದ್ಯರು, ಭದ್ರತಾ ಸಿಬ್ಬಂದಿ ಬರುತ್ತಾರೆ.ಅವರ ಟಿಕೆಟ್ ಖರ್ಚನ್ನು ಸರ್ಕಾರ ಹೊರಬೇಕಾಗುತ್ತದೆ. ನಾನು ಪ್ರಯಾಣಿಸಬೇಕಾದರೆ ಮೂರು ಹೆಲಿಕಾಫ್ಟರ್ ಬರುತ್ತದೆ ಒಂದು ಎಲ್ಲವೂ ಸರಿ ಇದೆಯೇ ಎಂದು ಪರಿಶೀಲಿಸಲು, ಮತ್ತೊಂದು ನಾನು ಕೂರಲು ಇನ್ನೊಂದು ಹೆಚ್ಚು ಕಡಿಮೆಯಾದರೆ ನನ್ನ ಬಾಡಿ ಒಯ್ಯಲು”

ಇದೇ ವೇಳೆ ಮೋದಿಯೊಂದಿಗೆ ಕಣ್ಸನ್ನೆಯಲ್ಲೇ ಮಾತನಾಡಿದ ಸ್ವಾರಸ್ಯಕರ ಘಟನೆಯೊಂದನ್ನು ಉಪರಾಷ್ಟ್ರಪತಿಗಳು ಇದೇ ವೇಳೆ ವಿವರಿಸಿದ್ದಾರೆ.
“ ಸಂಸತ್ತಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ವೇಳೆ ಪ್ರಧಾನಿ ಮೋದಿ ನನ್ನ ಹಿಂದೆ ನಿಂತಿದ್ದರು. ಅವರು ನನ್ನನ್ನೇ ನೋಡುತ್ತಿರುವುದನ್ನು ನಾನು ಗಮನಿಸಿದೆ. ಏನೋ ಮಾತು ಹೇಳಲು ಬಯಸುತ್ತಿದ್ದಾರೆ ಎಂದು ಕಣ್ಸನ್ನೆಯಲ್ಲೇ ಕೇಳಿದೆ. ಆಗ ಅವರು ನೀವು ಹೋಗದೆ ನಾವು ಹೋಗುವಂತಿಲ್ಲ. ಹೀಗಾಗಿ ನೀವು ಹೊರಡುವುದನ್ನು ನಾವು ಕಾಯುತ್ತಿದ್ದೇವೆ” ಎಂದರಂತೆ

venkaiah naidu2

ವೆಂಕಯ್ಯ ನಾಯ್ಡು ಮಾತಿನುದ್ದಕ್ಕೂ ಗೊತ್ತಾಗಿದ್ದು, ಶಿಷ್ಟಚಾರದಿಂದ ಅವರು, ಅವರ ಕುಟುಂಬ ಸಿಕ್ಕಾಪಟ್ಟೆ ಕಿರಿಕಿರಿ ಅನುಭವಿಸಿತ್ತು. ಈಗಷ್ಟೇ ಹೊಸ ಜೀವನಶೈಲಿಗೆ ಅವರು ಹೊಂದಿಕೊಳ್ಳುತ್ತಿದ್ದಾರೆ. ಹೇಳಿ ಕೇಳಿ ವೆಂಕಯ್ಯ ನಾಯ್ಡು ಅವರು ಮಾತಿನ ಮಂಟಪ ಕಟ್ಟುವ ಕಲೆ ಕರಗತ ಮಾಡಿಕೊಂಡವರು, ಅವರು ಮಾತನಾಡಲು ನಿಂತರೆ ಬೋರ್ ಹೊಡೆಸುವುದೇ ಇಲ್ಲ.

ಉಪರಾಷ್ಟ್ರಪತಿಯಾಗುವ ತನಕವೂ ಅವರು ಮಾತನಾಡುತ್ತಲೇ ಇದ್ದರು. ಆದರೆ ದೇಶದ ಎರಡನೇ ಪ್ರಜೆ ಅನ್ನುವ ಗೌರವ ಅವರ ಮಾತುಗಳಿಗೆ ಕಡಿವಾಣ ಹಾಕಿಸಿದೆ.

ಉಪರಾಷ್ಟ್ರಪತಿಗಳು ಅದೆಷ್ಟರ ಮಟ್ಟಿಗೆ ಶಿಷ್ಟಚಾರದ ಬಂಧಿ ಅಂದರೆ, ವೆಂಕಯ್ಯ ನಾಯ್ಡು ಎಲ್ಲೆಲ್ಲಿ ಕೂರುತ್ತಾರೋ ( ಬೆಡ್ ರೂಂ, ಡ್ರಾಯಿಂಗ್ ರೂಂ, ರೀಡಿಂಗ್ ರೂಂ, ಕಿಚನ್, ವಾಶ್ ರೂಂ) ಹೀಗೆ ಎಲ್ಲಾ ಕಡೆ ಅವರಿಗೆ ಕೈಗೆಟುಕುವಂತೆ ಕೆಂಪು ಬಟನ್ ಇಟ್ಟಿರುತ್ತಾರೆ. ಅದನ್ನು ಒತ್ತಿದರೆ ಸಾಕು ಎರಡು ನಿಮಿಷದಲ್ಲಿ ಆಂಬ್ಯುಲೆನ್ಸ್ ಮನೆ ಬಾಗಿಲಿಗೆ ಬರುತ್ತದೆ. ಎಂಟು ನಿಮಿಷದಲ್ಲಿ ಏಮ್ಸ್ ಆಸ್ಪತ್ರೆಗೆ ತಲುಪಿಸುತ್ತಾರೆ. ನಾನು ಫಿಟ್ ಆಗಿದ್ದೇನೆ ಎಂದು ಹೇಳಿದರೂ ಜೊತೆಗಿರುವ ನಾಲ್ಕು ವೈದ್ಯರು ಕೇಳುವುದಿಲ್ಲ. ನಿತ್ಯ ಆರೋಗ್ಯ ಪರೀಕ್ಷೆ ಕಡ್ಡಾಯವಾಗಿ ನಡೆಯುತ್ತದೆ.

ಉಪರಾಷ್ಟ್ರಪತಿಗಳ ಮಾತು ಕೇಳುತ್ತಿದ್ದರೆ ಹುದ್ದೆಯೊಳಗಿನ ಸಂಕಷ್ಟ ಹೇಗಿರಬಹುದು ಊಹಿಸಿ.

venkaiah naidu1

Advertisements

Leave a Reply

%d bloggers like this: