Advertisements

ಫ್ಲೆಕ್ಸಾಟ – ಕುಮಾರಸ್ವಾಮಿ ಮಾಡಬೇಕಿದ್ದ ಕೆಲಸವನ್ನು ಕೋರ್ಟ್ ಮಾಡಿತು….!

ರಾಜಧಾನಿಯಲ್ಲಿ ರಾರಾಜಿಸುತ್ತಿದ್ದ ಫೆಕ್ಸ್ ಹಾವಳಿಗೆ ಕಡಿವಾಣ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ಆದರೆ ನಮ್ಮ ರಾಜಕಾರಣಿಗಳಿಗೆ ಕಾರಿನಲ್ಲಿ ಓಡಾಡುವಾಗ ತಮ್ಮ ಫೋಟೋಗಳು ಕಂಬ ಕಂಬಗಳಲ್ಲಿ ನೇತಾಡುತ್ತಿರುವುದನ್ನು ಕಾಣದಿದ್ದರೆ ನಿದ್ದೆಯೇ ಬರುವುದಿಲ್ಲ. ಹೀಗಾಗಿ ಅವರು ಎಂದಿಗೂ ಫ್ಲೆಕ್ಸ್ ತೆರವಿನ ಬಗ್ಗೆ, ನಗರದ ಸೌಂದರ್ಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಹೀಗಾಗಿ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕಾಯ್ತು. ಈಗಾಗಲೇ ಫೆಕ್ಸ್ ಕೋರರ ವಿರುದ್ಧ ಚಾಟಿ ಬೀಸಿರುವ ಹೈಕೋರ್ಟ್ ಇಂದು ಮತ್ತೆ ಚಾಟಿ ಬೀಸಿತು. ಮಾತ್ರವಲ್ಲದೆ ಅಧಿಕಾರಿಗಳನ್ನು ಹೇಗೆ ಕೆಲಸ ಮಾಡಿಸಬೇಕು, ಮಾಡದಿದ್ದರೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಎಚ್ಚರಿಕೆ ಬೇರೆ ಕೊಟ್ಟಿದೆ.

ಇಂದು ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮುಂದುವರಿದ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠದಲ್ಲಿ ನಡೆಯಿತು.

ಈ ವೇಳೆ ಬಿಬಿಎಂಪಿ ವ್ಯಾಪ್ತಿಯ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ಸ್ ತೆರವಿಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ಮುಖ್ಯ ಕಾರ್ಯದರ್ಶಿಯ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಪ್ರಯತ್ನಿಸುತ್ತೇವೆ ಅನ್ನುವ ಪದ ಕಂಡ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದು ಕಣ್ಣೊರೆಸುವ ಕೆಲಸ. ಮೊದಲು ಇಂಥ ನಿಲ್ಲಿಸಿ. ಕೆಲಸಗಳನ್ನು ಮೊದಲು ನಿಲ್ಲಿಸಿ ಎಂದು ಚಾಟಿ ಬೀಸಿದೆ.
ಪ್ರಯತ್ನಿಸುತ್ತೇವೆ ಅನ್ನುವ ಭರವಸೆಗೆ ಕಿಡಿ ಕಾರಿದ ಮುಖ್ಯ ನ್ಯಾಯಮೂರ್ತಿಗಳು ಇದು ನೀವು ಮಾಡಬೇಕಿರುವ ಕೆಲಸ. ಇಲ್ಲಿ ಪ್ರಯತ್ನಿಸುವ ಪ್ರಶ್ನೆ ಇಲ್ಲ.ನಿಮ್ಮಿಂದ ಮಾಡಲು ಸಾಧ್ಯವಾದರೆ ಹೇಳಿ.ಮಾಡಲಾಗದಿದ್ದರೆ ನಾವು ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ ಎಂದರು.

ಮುಖ್ಯಮಂತ್ರಿಗಳು ಚಾಟಿ ಬೀಸಿದ ಜಿಸ್ಟ್ ಇಲ್ಲಿದೆ

  • ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್‌ಮುಕ್ತಗೊಳ್ಳಲೇ ಬೇಕು.
  • ನಿಮ್ಮಿಂದ ಅದು ಅಸಾಧ್ಯವಾದರೆ ಸಾಧ್ಯವೇ ಇಲ್ಲವೇ ಎಂದು ತಿಳಿಸಿ
  • ಆದೇಶ ಹೊರಡಿಸಿದ್ದೇವೆ, ಕಾರ್ಯ ಪ್ರಗತಿಯಲ್ಲಿದೆ, ಪ್ರಯತ್ನಿಸುತ್ತಿದ್ದೇವೆ ಎಂಬ ಶಬ್ಧಗಳನ್ನು ಕೇಳಿ ಕೇಳಿ ಸಾಕಾಗಿದೆ. ಇನ್ನು ಮುಂದೆ ಕಾರಣಗಳನ್ನು ಕೇಳಲು ಕೋರ್ಟ್ ತಯಾರಿಲ್ಲ.
  • ಫ್ಲೆಕ್ಸ್ ಕೇಸ್‌ಗಳ ದಿನ ನಿತ್ಯದ ವಿಚಾರಣೆಗೆಂದೇ ಎಸಿಎಂಎಂ ಕೋರ್ಟ್‌ನಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸುತ್ತೇನೆ. ಈ ತಿಂಗಳ ಅಂತ್ಯದಲ್ಲಿ ವಿಚಾರಣೆ ನಡೆಸಿ ಆದೇಶ ನೀಡಬೇಕು.
  • ಅಧಿಕಾರಿಗಳು ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ಅ ಹೇಗೆ ಕೆಲಸ‌ ಮಾಡಬೇಕು ಅನ್ನುವುದನ್ನು ನಾನು ತೋರಿಸಿಕೊಡುತ್ತೇನೆ.
  • ನಗರದ ಯಾವ ಯಾವ ಕಡೆ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ನಡೆಯುತ್ತಿದೆ. ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಬಿಬಿಎಂಪಿ ಆಗಸ್ಟ್ 13ರೊಳಗೆ ನ್ಯಾಯಾಲಯಕ್ಕೆ  ಸ್ಪಷ್ಟ ವರದಿ ಸಲ್ಲಿಸಬೇಕು.
  • ಪ್ರಮಾಣಪತ್ರದಲ್ಲಿ ಒಂದೇ ಒಂದು ಶಬ್ದ ಸತ್ಯಕ್ಕೆ ದೂರವಾಗಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು.
  • ಈವರೆಗೆ ಎಷ್ಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ‌. ಪ್ರಕರಣ ಯಾವ ಹಂತದಲ್ಲಿದೆ ಎಂಬ ಬಗ್ಗೆ ಸರ್ಕಾರ ವರದಿ ಸಲ್ಲಿಸಬೇಕು.

ಇದೇ ವೇಳೆ ಇನ್ನು ಒಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್ ಮುಕ್ತಗೊಳಿಸಬೇಕು ಎಂದು ಆದೇಶಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಆ.14ಕ್ಕೆ ಮುಂದೂಡಿತು.

ಅಧಿಕಾರಿಗಳಿಗೆ ಹೈಕೋರ್ಟ್ ನ ಬಿಸಿ ಮುಟ್ಟಿದರೆ ಈ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಬೆಂಗಳೂರು ಫ್ಲೆಕ್ಸ್ ಮುಕ್ತವಾಗಲಿದೆ.

Advertisements

Leave a Reply

%d bloggers like this: