Advertisements

ಶೀರೂರು ಮಠಕ್ಕೆ ಸನ್ಯಾಸಿ ಆಯ್ಕೆ ಹೇಗೆ ನಡೆಯಲಿದೆ..?

ಉಡುಪಿ ಶೀರೂರು ಶ್ರೀಗಳ ಸಾವಿನ ಬಳಿಕ ನಡೆದ ಬೆಳವಣಿಗೆಗಳಿಗೆ ಲೆಕ್ಕವಿಲ್ಲ. ಹೈಕೋರ್ಟ್ ಹೇಳಿರುವಂತೆ ಪೊಲೀಸರ ತನಿಖೆಗಿಂತ ಮಾಧ್ಯಮಗಳ ತನಿಖೆಯೇ ವೇಗವಾಗಿದೆ.

ಆದರೆ ಈ ನಡುವೆ ಕೇಳಿ ಬಂದ ಸುದ್ದಿ  ನೂತನ ಪೀಠಾಧಿಪತಿಯ ಆಯ್ಕೆ. ಶೀರೂರು ಶ್ರೀಗಳ ಇದ್ದಾಗಲೇ ಉತ್ತರಾಧಿಕಾರಿಯ ಅಥವಾ ಕಿರಿಯ ಶ್ರೀಗಳ ನೇಮಕವಾಗಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗ ಹೊಸದಾಗಿ ಪೀಠಾಧಿಪತಿಯ ಆಯ್ಕೆ ನಡೆಯಬೇಕಾಗಿದೆ.

ಹಾಗಂತ ಅಷ್ಟಮಠಗಳಿಗೆ ಸನ್ಯಾಸಿಯನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆಂದು ಪ್ರತ್ಯೇಕವಾದ ನಿಯಮಗಳಿದೆ. ಹಿಂದೆಲ್ಲಾ ಮಗು ಒಪ್ಪುತ್ತದೆಯೋ ಇಲ್ಲವೋ, ಪೋಷಕರು ಒಪ್ಪಿದರೆ ಮುಗಿಯಿತು ಎಂದು ಬಾಲಸನ್ಯಾಸ ಕ್ರಮ ಜಾರಿಯಲ್ಲಿತ್ತು. ಆದರೆ ಕಾನೂನು ಅದಕ್ಕೆ ಈಗ ಸಮ್ಮತಿಸುವುದಿಲ್ಲ. ಹೀಗಾಗಿ 18 ದಾಟಿದವರನ್ನೇ ಸ್ವೀಕರಿಸಬೇಕು.

ಸನ್ಯಾಸಿ ಯಾರು ಬೇಕಾದರೂ ಆಗುವ ಹಾಗಿಲ್ಲ. ಮುಖ್ಯವಾಗಿ ಸನ್ಯಾಸ ಸ್ವೀಕರಿಸುವವನ ಜಾತಕದಲ್ಲಿ ಸನ್ಯಾಸ ಯೋಗವಿರಬೇಕು.ಹೀಗಾಗಿಯೇ ಮಠದ ಸಂಪರ್ಕದಲ್ಲಿರುವ ಜ್ಯೋತಿಷಿಗಳು ತಮ್ಮ ಬಳಿ ಬರುವ ಜಾತಕಗಳಲ್ಲಿ ಸನ್ಯಾಸ ಯೋಗವಿದ್ದರೆ ಮಠಕ್ಕೆ ಮಾಹಿತಿ ರವಾನಿಸುತ್ತಾರೆ.

ಮಠದ ಹಿರಿಯ ಆಣತಿಯಂತೆ ಅಂತಹ ಬಾಲಕರ ಚಲನವಲನ ನಡೆ ನುಡಿಗಳ ಬಗ್ಗೆ ನಿಗಾವಹಿಸಲಾಗುತ್ತದೆ. ಮನೆತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಕುಟುಂಬದ ವೃಕ್ಷ ನಕ್ಷೆಯನ್ನು ಜಾಲಾಡುತ್ತಾರೆ. ಕೊನೆಗೆ ಉತ್ತರಾಧಿಕಾರಿ ಬೇಕು ಅಂದಾಗ ಸನ್ಯಾಸಿಯಾಗಲು ಯೋಗ್ಯ ಅನ್ನಿಸುವ ಹುಡುಗನ ಕುಟುಂಬವನ್ನು ಸಂಪರ್ಕಿಸಲಾಗುತ್ತದೆ.

ಪಂಚಾಗ ತಿರುವಿ ಹಾಕಿ ದೀಕ್ಷೆ ಕೊಡಲಾಗುತ್ತದೆ. ನಂತರ ಸಂಸ್ಕೃತ ಪಾಠ, ಧಾರ್ಮಿಕ ಶಿಕ್ಷಣ ಶುರುವಾಗುತ್ತದೆ. ಸ್ನಾನ ಹೇಗಿರಬೇಕು, ಆಹಾರ ಕ್ರಮ ಹೇಗಿರಬೇಕು ಅನ್ನುವ ಚಿಕ್ಕ ಪುಟ್ಟ ವಿಷಯಗಳನ್ನು ಬೋಧಿಸಲಾಗುತ್ತದೆ.

ಮುಂದೆ ಇಡೀ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಇರುವ ಕಾರಣ ದೊಡ್ಡ ದೊಡ್ಡ ಗ್ರಂಥಗಳ ಅಧ್ಯಯನ, ವೇದಾಂತ ಅಧ್ಯಯನ ಮಾಡಿಸಲಾಗುತ್ತದೆ. ಇಂದ್ರಿಯ ನಿಗ್ರಹದ ಕುರಿತು ತಿಳಿ ಹೇಳಲಾಗುತ್ತದೆ

ಇದಕ್ಕೂ ಮುನ್ನ ಸನ್ಯಾಸಿಗಳಿಗೆ ಪಿಂಡ ಪ್ರದಾನ ಭಾಗ್ಯವಿಲ್ಲದಿರುವ ಕಾರಣ ತಮಗೆ ತಾವೇ ಪಿಂಡ ಪ್ರದಾನ ಮಾಡಿಕೊಂಡು, ಹಿಂದಿನ ತಪ್ಪುಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ.

ಹರಿಯುವ ನಡು ನೀರಿನಲ್ಲಿ ತುಂಡು ಕೌಪೀನವನ್ನೂ ಉಟ್ಟು ನಿಂತು ಪ್ರಾರ್ಥನೆಯ ನಂತರ ಕೌಪೀನವನ್ನೂ ಹರಿಯುವ ನೀರಿನಲ್ಲಿ ಬಿಡಲಾಗುತ್ತದೆ. ಬಳಿಕ ಗುರು ನೀಡಿದ ಮತ್ತೊಂದು ಕೌಪೀನ ಉಟ್ಟು ದಡಕ್ಕೆ ಬರುತ್ತಾರೆ. ಅದುವರೆಗಿನ ಕಾಮಕ್ರೋಧಾದಿ, ಆರಿಷಡ್ವರ್ಗಗಳನ್ನು ಬಿಟ್ಟು ಬಿಡುವುದರ ಸೂಚಕವಿದು.

ಹಾಗಾದರೆ ಈ ಎಲ್ಲವನ್ನೂ ಪಾಲಿಸಿದ ಮಂದಿ ವಯಸ್ಸಿಗೆ ಬಂದಾಗ ಸನ್ಯಾಸಿಯಂತೆ ನಡೆದುಕೊಂಡರೆ ಅಂದರೆ ಉತ್ತರಿಸುವುದು ಕಷ್ಟ. ಅನೇಕ ಮಂದಿ ಪೀಠದಲ್ಲಿದ್ದುಕೊಂಡು ದಾರಿ ತಪ್ಪಿರುವುದಕ್ಕೆ ರಾಜ್ಯದ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಇನ್ನು ಕೆಲವರು ಗುರು ಕೊಟ್ಟ ದೀಕ್ಷೆಯನ್ನು ಹಾಗೇ ಕಾಪಾಡಿಕೊಂಡು ಬಂದು ಸಮಾಜದಲ್ಲಿ ಗೌರವ ಉಳಿಸಿಕೊಂಡವರೂ ಇದ್ದಾರೆ.

ಏನೇ ಆದರೂ ಇಂದ್ರಿಯಗಳು ಅರಳುವ ಹೊತ್ತಿಗೆ ಮಠದ ಅಧಿಕಾರ, ಆಸ್ತಿಪಾಸ್ತಿಗಳ ಒಡೆತನ, ಬಹುಪರಾಕ್ ಹೇಳುವ ಬಳಗ, ದೃಷ್ಟಿಗೂ ನಿಲುಕದಂತೆ ಎದುರು ನಿಂತಿರುವ ಭಕ್ತರ ಸಾಲು ಕೆಲವೊಮ್ಮೆ ಹಾದಿ ತಪ್ಪಿಸುತ್ತದೆ. ಮತ್ತೆ ಕೆಲವೊಮ್ಮೆ ಜವಾಬ್ದಾರಿ ಹೆಚ್ಚಿಸುತ್ತದೆ. ಹೀಗಾಗಿ ಹಾದಿ ತಪ್ಪದೇ, ಸಮಾಜವನ್ನು ಮುನ್ನಡೆಸುವ ವ್ಯಕ್ತಿಗಳು ರಾಜ್ಯದ ಮಠದ ಅಂಗಳಕ್ಕೆ ಬರಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೇವಲ ಮೋದಿ ಘೋಷಣೆಯಾಗದೇ, ಮಠದ ಘೋಷಣೆಯೂ ಆದರೆ ಎಷ್ಟು ಚೆಂದ ಅಲ್ವ.

Advertisements

One Comment on “ಶೀರೂರು ಮಠಕ್ಕೆ ಸನ್ಯಾಸಿ ಆಯ್ಕೆ ಹೇಗೆ ನಡೆಯಲಿದೆ..?

  1. Pingback: ಮಠ ತುಂಬಾ ಸಾಲ…ಕೈ ತುಂಬಾ ಕೇಸು…ಇದು ಶಿರೂರು ಮಠದ ಪರಿಸ್ಥಿತಿ – torrentspree

Leave a Reply

%d bloggers like this: