ಕಲಬುರಗಿ : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಎರಡನೇ ಅಲೆ ಬರುತ್ತಿದೆಯೋ ಎಂದು ಅನ್ನಿಸುತ್ತಿದೆ.
ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿತರ ಪ್ರಮಾಣ ಏರತೊಡಗಿದೆ. ಅದರಲ್ಲೂ ಕ್ಲಸ್ಟರ್ ಮಾದರಿಯಲ್ಲಿ ಸೋಂಕಿತರು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸಿದೆ.
ಈಗಾಗಲೇ ಅಪಾರ್ಟ್ ಮೆಂಟ್, ನರ್ಸಿಂಗ್ ಕಾಲೇಜುಗಳಲ್ಲಿ ಕಾಣಿಸಿಕೊಂಡ ಸೋಂಕು ಪ್ರೌಢ ಶಾಲೆಯಲ್ಲೂ ಭೀತಿ ಹುಟ್ಟಿಸಿದೆ.
ಕಲಬುರಗಿ ಸರ್ಕಾರಿ ಪ್ರೌಢಶಾಲೆಯೊಂದರ 15 ವಿದ್ಯಾರ್ಥಿಗಳಲ್ಲಿ ಏಕಕಾಲದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಎಲ್ಲರೂ ಕೂಡಾ 9ನೇ ಹಾಗೂ 10ನೇ ತರಗತಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ.
ಶುಕ್ರವಾರ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಪೂರ್ತಿ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಒಂದು ವಾರ ರಜೆ ಘೋಷಿಸಲಾಗಿದೆ. ಜೊತೆಗೆ ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಿತರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
ಪ್ರಸ್ತುತ 63 ವಿದ್ಯಾರ್ಥಿಗಳ ಸ್ಯಾಂಪಲ್ ಪೈಕಿ 22 ವಿದ್ಯಾರ್ಥಿಗಳ ವರದಿ ಬಂದಿದ್ದು 15 ಮಂದಿ ಸೋಂಕಿತರಾಗಿದ್ದಾರೆ.
ಗಮನಾರ್ಹ ಅಂಶ ಅಂದ್ರೆ 15 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಇನ್ನೂ 41 ವಿದ್ಯಾರ್ಥಿಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, 15 ವಿದ್ಯಾರ್ಥಿಗಳನ್ನು ಹೋಮ್ ಐಸೋಲೋಷನ್ ಮಾಡಲಾಗಿದೆ.
ಇದೀಗ 9 ಹಾಗೂ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬಿಸಿಯೂಟದ ಸಿಬ್ಬಂದಿ ಸೇರಿ 175 ಮಂದಿಯ ಮಾದರಿ ಸಂಗ್ರಹಿಸಿ ಕಳುಹಿಸಲಾಗಿದೆ.
ಮದುವೆ ಮನೆಯೊಂದರಿಂದ ಸೋಂಕು ಹರಡಿರುವ ಸಾಧ್ಯತೆಗಳಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಫೆ 18 ರಂದು ನಾಮುತಾಂಡ ಮತ್ತು ಫೆ 26 ರಂದು ಬೇಡಸೂರ ತಾಂಡಾದಲ್ಲಿ ಮದುವೆ ಸಮಾರಂಭವಿತ್ತು. ಈ ಸಮಾರಂಭಕ್ಕೆ ಮುಂಬೈ ಮೂಲದವರು ಕೂಡಾ ಆಗಮಿಸಿದ್ದರು. ಸೋಂಕಿತರಾಗಿರುವ 15 ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೀಗಾಗಿ ಅಲ್ಲಿಂದ ಸೋಂಕು ಹರಡಿದೆ ಎನ್ನಲಾಗುತ್ತಿದೆ.
Discussion about this post