ಸುಕ್ಮಾ: ಛತ್ತೀಸ್ಗಡದಲ್ಲಿ ಮತ್ತೆ ಕೆಂಪು ಉಗ್ರರು ಅಟ್ಟಹಾಸಗೈದಿದ್ದಾರೆ. ಇಲ್ಲಿನ ಸುಕ್ಮಾದಲ್ಲಿ ನಕ್ಸಲೀಯರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದು ಘಟನೆಯಲ್ಲಿ 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಇದರಲ್ಲಿ 8 ಮಂದಿ CRPF ಸಿಬ್ಬಂದಿಯಾಗಿದ್ದು ಉಳಿದ 14 ಮಂದಿ ಪೊಲೀಸ್ ಇಲಾಖೆಗೆ ಸೇರಿದವರಾಗಿದ್ದಾರೆ. 32 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಕ್ಮಾ-ಬಿಜಾಪುರ ಗಡಿ ಬಳಿ ಈ ಘಟನೆ ನಡೆದಿದ್ದು ನಕ್ಸಲರ ದಾಳಿ ಹಿಮ್ಮೆಟ್ಟಿಸಲು ಭಾರತೀಯ ಯೋಧರು ಕೂಡಾ ಎನ್ ಕೌಂಟರ್ ನಡೆಸಿದ್ದಾರೆ. ಹಲವು ನಕ್ಸಲೀಯರು ಕೂಡಾ ಹತರಾಗಿದ್ದಾರೆ ಅನ್ನುವ ಮಾಹಿತಿಯೂ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಓರ್ವ ಮಹಿಳಾ ನಕ್ಸಲ್ ಮೃತದೇಹ ಪತ್ತೆಯಾಗಿದೆ.
ದಾಳಿ ಬಳಿಕ ಪರಾರಿಯಾಗಿರುವ ನಕ್ಸಲೀಯರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಭಾರತೀಯ ವಾಯು ಸೇನೆ ಕೂಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.
ಸದ್ಯ ಎನ್ಕೌಂಟರ್ ಸ್ಥಳದಿಂದ ಪರಾರಿಯಾಗಿರುವ ನಕ್ಸಲೀಯರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿವೆ..
ಇನ್ನು ದಾಳಿಯ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಅಂದಿದ್ದಾರೆ.