ಮೊದಲೆಲ್ಲಾ ಅಸ್ತಮಾ ಅಂದರೆ ಮುಗಿದೇ ಹೋಯ್ತು ಅನ್ನುವ ಪರಿಸ್ಥಿತಿ, ಆದರೆ ಈಗ ವೈದ್ಯಕೀಯ ಜಗತ್ತು ಸಾಕಷ್ಟು ಮುಂದುವರಿದಿದೆ. ಹೀಗಾಗಿ ಅಸ್ತಮಾದೊಂದಿಗೆ ಬದುಕುವುದು ಹೇಗೆ ಅನ್ನುವುದು ಅದು ಕಲಿಸಿಕೊಟ್ಟಿದೆ. ಅಸ್ತಮಾ ಅಂದ ತಕ್ಷಣ ಭಯಪಡುವ ಅಗತ್ಯವಿಲ್ಲ.
ಈಗಿನ ಜೀವನ ಶೈಲಿ, ವಾಯು ಮಾಲಿನ್ಯ, ಧೂಳು ಹೊಗೆಯ ಅಬ್ಬರ ಹೀಗೆ ಒಂದೇ ಎರಡೇ ಅಸ್ತಮಾ ರೋಗಕ್ಕೆ ಕಾರಣ.
ವೈದ್ಯಕೀಯ ಭಾಷೆಯಲ್ಲಿ ಅಸ್ತಮಾಟಿಕ್ ಬ್ರಾಂಖೈಟಿಸ್ (Asthmatic Bronchitis)ಎಂದು ಕರೆಯುವ ಈ ರೋಗ ಮಾರಕವಲ್ಲದಿದ್ದರೂ ಸೂಕ್ತ ಆರೈಕೆ, ಮಾಹಿತಿ ಮತ್ತು ಔಷಧಿಗಳ ಕೊರತೆಯಿಂದ ಜನರು ಅಸ್ತಮಾ ಅಂದ್ರೆ ಆಘಾತಕ್ಕೆ ಒಳಗಾಗುತ್ತಾರೆ.
ಆದರೆ ಇದಕ್ಕೆ ಭಯಪಡೋ ಅಗತ್ಯವಿಲ್ಲ. ಕೆಲವೊಂದು ಸರಳ ಟಿಪ್ಸ್ ಗಳನ್ನು ಪಾಲಿಸುವ ಮೂಲಕ ಅಸ್ತಮಾದೊಂದಿಗೆ ಆರಾಮದಾಯಕ ಜೇವನ ಸಾಗಿಸಬಹುದಾಗಿದೆ.
ಆಲರ್ಜಿ ವಸ್ತುಗಳಿಂದ ದೂರವಿರಿ
ಯಾವ ವಸ್ತು ಅಸ್ತಮಾವನ್ನು ಪ್ರಚೋದಿಸುತ್ತದೆ ಅನ್ನುವುದನ್ನು ತಿಳಿದುಕೊಳ್ಳಿ. ಉಸಿರಿನ ಮೂಲಕ ಯಾವ ವಸ್ತು ಒಳ ಬಂದಾಗ irritant ಆಗುತ್ತದೆ ಅನ್ನುವುದನ್ನು ಗಮನಿಸಿ ಅದರಿಂದ ದೂರವಿರಿ. ಆ ವಸ್ತುಗಳಿಂದ ದೂರವಿರೋದು ಅಸಾಧ್ಯ ಅನ್ನುವುದಾದರೆ ಸೂಕ್ತ ರಕ್ಷಣೆಯನ್ನು ಪಡೆದುಕೊಳ್ಳಿ
ಔಷಧಿಗಳು ಜೊತೆಗಿರಲಿ
ವೈದ್ಯರು ಕೊಟ್ಟಿರುವ ಅಸ್ತಮಾದ ನಿತ್ಯ ಔಷಧಿಗಳನ್ನು ಸದಾ ನಿಮ್ಮೊಂದಿಗೇ ಕೊಂಡೊಯ್ಯಲು ಮರೆಯಬೇಡಿ. ಜೊತೆಗೆ ಕಾಲ ಕಾಲಕ್ಕೆ ಅಂದ್ರೆ ವೈದ್ಯರು ಸೂಚಿಸಿದ ಸಮಯಕ್ಕೆ ಸೇವಿಸಲು ಅದನ್ನು ಮರೆಯಬೇಡಿ. ಮಾತ್ರವಲ್ಲದೆ ಇನ್ ಹೇಲರ್ ಸದಾ ಜೊತೆಗಿರಲಿ. ಅಸ್ತಮಾ ಆಘಾತ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಬರುತ್ತದೆ. ಈ ಸಮಯದಲ್ಲಿ ಅಸ್ತಮಾ ರೋಗಿಗಳ ಆಪತ್ಬಾಂಧವ ಅಂದರೆ ಇನ್ ಹೇಲರ್.
ಹಣ್ಣು ಮತ್ತು ತರ್ಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ
ಹಣ್ಣುಗಳಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಗಳಿವೆ. ಜೊತೆಗೆ ಅಸ್ತಮಾ ನಿಯಂತ್ರಣಕ್ಕೆ ವಿಟಮಿನ್ ಸಿ ಸಹಕಾರಿ. ಜೊತೆಗೆ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳೂ ಕೂಡಾ ಅಗತ್ಯ. ಈ ಅಂಶಗಳು ಹೆಚ್ಚಿರುವ ಆಹಾರಗಳಾದ ಬಸಲೆ, ಪಾಲಕ್, ಸ್ಟ್ರಾಬೆರಿ, ಬ್ರೋಕೋಲಿ, ಟೊಮಾಟೋ ಮೊದಲಾದವನ್ನು ಆದಷ್ಟೂ ಸೇವಿಸಿ.
ಆಹಾರ ಆಲರ್ಜಿಗಳಿದೆ ಅನ್ನುವುದಾದರೆ ಅಹಾರಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಎಚ್ಚರಿಕೆ ವಹಿಸಿ. ವೈದ್ಯರೇ ನಿಮಗೆ ಸೂಕ್ತವಾದ ಆಹಾರವನ್ನು ಸೂಚಿಸುತ್ತಾರೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೇ ನೀವಾಗಿಯೇ ಬೇರಾವುದೇ ಆಹಾರವನ್ನು ಪ್ರಯತ್ನಿಸಲು ಹೋಗದಿರಿ.
ನೋ ಧೂಮಪಾನ
ಧೂಮಪಾನ ಯಾರಿಗೂ ಒಳ್ಳೆಯದಲ್ಲ. ಅದರಲ್ಲೂ ಅಸ್ತಮಾ ರೋಗಿಗಳಿಗೆ ಇದು ಸಾವಿಗೆ ಹತ್ತಿರದ ಸೇತುವೆ. ಒಂದು ವೇಳೆ ಅಸ್ತಮಾವಿದ್ದು ನೀವು ಧೂಮಪಾನಿಯಾಗಿದ್ದರೆ ಹೊಗೆ ಬಿಡುವ ಅಭ್ಯಾಸದಿಂದ ಹೊರಬರುವುದು ಬೆಟರ್.
ಧೂಮಪಾನದಿಂದ ಅಸ್ತಮಾ ಸ್ಥಿತಿ ಉಲ್ಬಣಿಸಬಹುದು. ನೀವು ಧೂಮಪಾನಿಯಲ್ಲದ ಅಸ್ತಮಾ ರೋಗಿಯಾಗಿದ್ದರೆ ಇತರರು ಬಿಡುವ ಹೊಗೆ ನಿಮಗೆ ಮಾರಕ. ಅದಷ್ಟು ಅಂತಹವರ ಸಹವಾಸದಿಂದ ದೂರವಿರಿ, ಅಸಾಧ್ಯ ಅನ್ನುವುದಾದರೆ ವಸ್ತ್ರವೊಂದರ ಸಹಾಯದಿಂದ ಮೂಗು ಮುಚ್ಚಿಕೊಳ್ಳಿ. ಅಥವಾ ಅವರ ಬಳಿ ರಿಕ್ವೆಸ್ಟ್ ಮಾಡಿಕೊಳ್ಳಿ, ಧೂಮಪಾನ ಮಾಡಬೇಡಿ ಎಂದು.

ವ್ಯಾಯಾಮ ಮಾಡುವುದನ್ನು ಮರೆಯಬೇಡಿ
ಅಸ್ತಮಾ ರೋಗಿಗಳು ವ್ಯಾಯಾಮ ಮಾಡಬಾರದು ಅನ್ನುವ ಮಾತಿದೆ. ಆದರೆ ಇದು ಪೂರ್ತಿ ಸತ್ಯವಲ್ಲ. ವ್ಯಾಯಾಮ ಮಾಡುವಂತಿಲ್ಲ ನಿಜ. ಹಾಗಂತ ವ್ಯಾಯಾಮ ಬೇಡ ಅನ್ನಲಾಗದು. ಶ್ವಾಸಕೋಶದ ಸ್ನಾಯುಗಳು ಬಲಗೊಳ್ಳಲು ವ್ಯಾಯಾಮ ಅತೀ ಅಗತ್ಯ.
ನಿಮ್ಯ ವೈದ್ಯರ ಸಲಹೆಯೊಂದಿಗೆ ವ್ಯಾಯಾಮ ಮಾಡಿ. ಪ್ರಾಣಾಯಾಮ, ಯೋಗ ಅಸ್ತಮಾ ರೋಗಿಗಳಿಗೆ ಸಾಕಷ್ಟು ನೆಮ್ಮದಿ ಕೊಡುತ್ತದೆ. ಸಾಕಷ್ಟು ನಡಿಗೆಯೂ ರಿಲ್ಯಾಕ್ಸ್ ಭಾವನೆ ತರಿಸುತ್ತದೆ. ವ್ಯಾಯಾಮ ಪ್ರಾರಂಭಿಸುವ ಮುನ್ನ ಅಸ್ತಮಾ ನಿಯಂತ್ರಣದಲ್ಲಿದೆಯೇ ಅನ್ನುವುದನ್ನು ಖಚಿತಪಡಿಸಿಕೊಳ್ಳಿ.
Discussion about this post